Advertisement

Legislative Council: ಮತ್ತೆ ಕಲಾಪ ನುಂಗಿದ ವಾಲ್ಮೀಕಿ ನಿಗಮ ಹಗರಣ

01:00 AM Jul 20, 2024 | Team Udayavani |

ಬೆಂಗಳೂರು: ರಾಜ್ಯ ಸರಕಾರವನ್ನು ತೀವ್ರ ಇಕ್ಕಟ್ಟಿಗೆ ಸಿಲುಕಿಸಿರುವ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಮತ್ತೆ ವಿಧಾನಪರಿಷತ್‌ನಲ್ಲಿ ಪ್ರಸ್ತಾವವಾಗಿ ಶುಕ್ರವಾರದ ಕಲಾಪವನ್ನು ನುಂಗಿಹಾಕಿತು.

Advertisement

ಈ ಸಂಬಂಧ ನಿಯಮ 68ರ ಅಡಿ ನಡೆದ ಚರ್ಚೆಯಲ್ಲಿ ಬಿಜೆಪಿಯ ರವಿಕುಮಾರ್‌, ನೀವು ಎಲ್ಲಿ ನಿಂತು ಪ್ರಮಾಣ ಮಾಡಿ ಎಂದರೂ ಅಲ್ಲಿ ನಿಂತು ಹೇಳುತ್ತೇನೆ. ಈ ಹಣ ತೆಲಂಗಾಣದ ಚುನಾವಣೆಗೆ ಬಳಕೆ ಆಗಿದೆ ಎಂದು ಹೇಳಿದ್ದು ಆಡಳಿತ ಪಕ್ಷದ ಸದಸ್ಯರನ್ನು ಸಿಟ್ಟಿಗೇಳುವಂತೆ ಮಾಡಿತು.

ಸಭಾನಾಯಕ ಬೋಸರಾಜ್‌, ಸಚಿವ ಸಂತೋಷ್‌ ಲಾಡ್‌, ಚಲುವನಾರಾಯಣ ಸ್ವಾಮಿ, ಆಡಳಿತ ಪಕ್ಷದ ಮುಖ್ಯ ಸಚೇತಕ ಸಲೀಂ, ಯತೀಂದ್ರ ಸಿದ್ದರಾಮಯ್ಯ, ಯು.ಬಿ.ವೆಂಕಟೇಶ್‌, ನಸೀರ್‌ ಅಹಮದ್‌ ಸೇರಿದಂತೆ ಹಲವರು ಸತ್ಯಕ್ಕೆ ದೂರವಾದ ಆರೋಪ ಮಾಡಲಾಗುತ್ತಿದೆ ಎಂದು ಗದ್ದಲ ಎಬ್ಬಿಸಿದರು. ಆಣೆ ಪ್ರಮಾಣದ ಪದವನ್ನು ಕಡತದಿಂದ ತೆಗೆಸುವಂತೆ ಮನವಿ ಮಾಡಿದರು.

ಮುಖ್ಯ ಸಚೇತಕ ಸಲೀಂ ಅಹಮದ್‌, ತೆಲಂಗಾಣ ಚುನಾವಣೆಗೆ ಹಣ ಬಳಕೆ ಆಗಿದೆ ಎಂದು ಆರೋಪಿಸುತ್ತಿದ್ದಾರೆ. ದಾಖಲೆಗಳು ಇದ್ದರೆ ನೀಡಲಿ. ಈ ವಿಚಾರದಲ್ಲಿ ಬಿಜೆಪಿ ಅವರು ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸ ಮಾಡುತ್ತಿದ್ದಾರೆ. ಕೂಡಲೇ ತೆಲಂಗಾಣ ಎಂದು ಬಳಕೆ ಮಾಡಿರುವ ಪದವನ್ನು ಕಡತದಿಂದ ತೆಗೆಯುವಂತೆ ಮನವಿ ಮಾಡಿದರು.

ತನಿಖಾ ಸಂಸ್ಥೆಗಳು ಕೇಂದ್ರ ಸರಕಾರದ ತುತ್ತೂರಿ ಆಗಿವೆ. ಯೂನಿಯನ್‌ ಬ್ಯಾಂಕ್‌ ಯಾರ ಅಡಿಯಲ್ಲಿ ಬರುತ್ತದೆ. ಬರೀ ಗಾಳಿಯಲ್ಲಿ ಗುಂಡು ಹೊಡೆಯುವುದು ಬಿಟ್ಟರೆ, ನಿಮ್ಮಲ್ಲಿ ಏನು ಸಾಕ್ಷಿಯಿದೆ? ಇದ್ದರೆ ಸದನದ ಮುಂದಿಡಿ? ಇಡಿ, ಸಿಬಿಐ, ಎಸ್‌ಐಟಿ ವರದಿ ನೀಡಿವೆಯಾ? ಎಂದು ಪುಟ್ಟಣ್ಣ ಮಾತನಾಡಿದರು. ಆಣೆ ಮಾಡಿದ್ದು ಎಷ್ಟು ಸರಿ? ಈ ಸಂಬಂಧ ರವಿಕುಮಾರ್‌ ಕ್ಷಮೆ ಕೇಳಬೇಕೆಂದು ಕಾಂಗ್ರೆಸ್‌ ಸದಸ್ಯರು ಆಗ್ರಹಿಸಿದರು.

Advertisement

ಇದೇನು ಬೀಗರ ಮನೆಯೇ?: ಸಚಿವರ ಗೈರಿಗೆ ಹೊರಟ್ಟಿ ಗರಂ
ವಿಧಾನಪರಿಷತ್‌ನಲ್ಲಿ ಕಡ್ಡಾಯವಾಗಿ ಹಾಜರಿರಬೇಕಾದ ಸಚಿವರ ಗೈರು ಹಾಜರಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸಭಾಪತಿ ಬಸವರಾಜ ಹೊರಟ್ಟಿ, ಇದೇನು ಬೀಗರ ಮನೆಯೇ ಎಂದು ಸಭಾ ನಾಯಕ ಎನ್‌.ಎಸ್‌. ಭೋಸರಾಜ ಹಾಗೂ ಸರಕಾರದ ಮುಖ್ಯ ಸಚೇತಕ ಸಲೀಂ ಅಹಮದ್‌ ಅವರನ್ನು ತರಾಟೆಗೆ ತೆಗೆದುಕೊಂಡರು.

ಕಲಾಪ ಆರಂಭದಲ್ಲೇ ಸಚಿವರ ಗೈರುಹಾಜರಿಗೆ ಜೆಡಿಎಸ್‌ ಸದಸ್ಯ ಎಸ್‌.ಎಲ್‌ ಭೋಜೇಗೌಡ ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ದನಿಗೂಡಿಸಿದ ಸಭಾಪತಿಗಳು, ಕಡ್ಡಾಯವಾಗಿ ಸಚಿವರು ಹಾಜರಿರಬೇಕು ಎಂದು ಹೇಳಲಾಗಿದೆ. ಆದರೂ ಸಚಿವರು ಬರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಆಗ ಭೋಸರಾಜ ಹಾಗೂ ಸಲೀಂ ಅಹ್ಮದ್‌ ಸಚಿವರು ಬರುತ್ತಿದ್ದಾರೆ… ಅಂತಾ ಸಮಜಾಯಿಷಿ ನೀಡಲು ಮುಂದಾದರು. ಆಗ ಗರಂ ಆದ ಸಭಾಪತಿ, ಬರುತ್ತಾರೆ…ಬರುತ್ತಾರೆ.. ಅಂದರೆ ಇದೇನು ಬೀಗರ ಮನೆಯೇ? ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next