Advertisement

BJP Karnataka: ಪಕ್ಷನಿಷ್ಠರ ಪಾದಯಾತ್ರೆಗೆ “ಮಧ್ಯಾಂತರ ತಡೆ’?

12:49 AM Aug 20, 2024 | Team Udayavani |

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಅವ್ಯವಹಾರ ಸಂಬಂಧ ಬಿಜೆಪಿಯ “ಪಕ್ಷ ನಿಷ್ಠರ ಬಣ’ ಕೂಡಲ ಸಂಗಮದಿಂದ ಬಳ್ಳಾರಿ ವರೆಗೆ ನಡೆಸಲು ಉದ್ದೇಶಿಸಿದ್ದ ಪಾದಯಾತ್ರೆಗೆ ಈಗ ನಾನಾ ಕಾರಣಗಳಿಗಾಗಿ ಮಧ್ಯಾಂತರ ತಡೆ ಸಿಕ್ಕಿದೆ. ಹೀಗಾಗಿ ಈ ಹಂತದಲ್ಲಿ ಯಾತ್ರೆ ನಡೆಸದೇ ಇರಲು ತೀರ್ಮಾನಿಸಲಾಗಿದೆ.

Advertisement

ಈ ಸಂಬಂಧ ಸದ್ಯದಲ್ಲೇ ದಿಲ್ಲಿಗೆ ತೆರಳಿ ವರಿಷ್ಠರನ್ನು ಭೇಟಿ ಮಾಡುವುದಕ್ಕೆ ಬಸನಗೌಡ ಪಾಟೀಲ್‌ ಯತ್ನಾಳ್‌, ರಮೇಶ್‌ ಜಾರಕಿಹೊಳಿ ನೇತೃತ್ವದ ತಂಡ ನಿರ್ಧರಿಸಿತ್ತು. ಆದರೆ ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ತನಿಖೆ ನಡೆಸುವುದಕ್ಕೆ ಅನುಮತಿ ನೀಡಿದ ಅನಂತರ ರಾಜ್ಯ ರಾಜಕಾರಣದ ಸ್ವರೂಪ ಬದಲಾಗಿದೆ. ಈ ಹಂತದಲ್ಲಿ ಪಾದಯಾತ್ರೆ ನಡೆಸಿದರೆ ವ್ಯತಿರಿಕ್ತ ಸಂದೇಶ ರವಾನೆಯಾಗುತ್ತದೆ ಎಂಬ ತೀರ್ಮಾನಕ್ಕೆ ಬರಲಾಗಿದೆ.

ಹೀಗಾಗಿ ಈ ಬಣದ ಪ್ರತಿನಿಧಿಗಳು ನಡೆಸಲು ಉದ್ದೇಶಿಸಿದ್ದ ದಿಲ್ಲಿ ಪ್ರವಾಸವನ್ನು ತಾತ್ಕಾಲಿಕವಾಗಿ ರದ್ದು ಮಾಡಲಾಗಿದೆ. ಮುಡಾ ಪ್ರಕರಣವನ್ನು ಮುಂದಿಟ್ಟುಕೊಂಡು ಬಿಜೆಪಿ ನಾಯಕರು ಈಗ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ. ವರಿಷ್ಠರ ಗಮನವೂ ಇದರ ಮೇಲೆಯೇ ಇದೆ. ಹೀಗಾಗಿ “ಭಿನ್ನ’ ನಿಲುವು ತೋರಿದರೆ ದಿಲ್ಲಿ ನಾಯಕರ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ ಎಂಬ ಎಚ್ಚರಿಕೆ ಸಂದೇಶ ಲಭ್ಯವಾದ ಹಿನ್ನೆಲೆ ಯಲ್ಲಿ ಪಾದಯಾತ್ರೆ ಸದ್ಯಕ್ಕೆ ನಡೆಸದೇ ಇರಲು ತೀರ್ಮಾನಿಸಲಾಗಿದೆ.

ಸಿದ್ದರಾಮಯ್ಯ- ರಾಜ್ಯಪಾಲರ ನಡುವಿನ ಕಾನೂನು ಸಂಘರ್ಷ ಯಾವ ದಿಕ್ಕಿನತ್ತ ಸಾಗುತ್ತದೆ ಎಂಬುದನ್ನು ಆಧರಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ. ಅದೇ ರೀತಿ ಆಗಸ್ಟ್‌ 21ರಂದು ನಡೆಸಲು ಉದ್ದೇಶಿಸಿದ್ದ ಸಭೆಯೂ ಮುಂದೂಡಿಕೆಯಾಗುವ ಸಾಧ್ಯತೆ ಹೆಚ್ಚಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next