Advertisement

Mudhol: ನಗರಸಭೆ ಗದ್ದುಗೆಗೇರಲು ಕೈ-ಕಮಲ ಕಸರತ್ತು

10:27 AM Aug 25, 2024 | Team Udayavani |

ಮುಧೋಳ: ಮುಧೋಳ ನಗರಸಭೆ ಅಧಿಕಾರದ ಗದ್ದುಗೆ ಹಿಡಿಯಲು ಶತಾಯ ಗತಾಯ ಕಸರತ್ತು ನಡೆಸುತ್ತಿರುವ ಕೈ-ಕಮಲ ಕಲಿಗಳು ಅಧಿಕಾರಕ್ಕಾಗಿ ತಂತ್ರ-ಪ್ರತಿತಂತ್ರ ಹೆಣೆಯುತ್ತಿದ್ದಾರೆ. ಪ್ರಕಟಗೊಂಡಿರುವ ಮೀಸಲಾತಿ ಪ್ರಕಾರ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಅಧಿಕಾರ ಹಿಡಿಯಲು ತೆರೆಮರೆಯ ಕಸರತ್ತು ನಡೆಸಿರುವ ಎರಡೂ ಪಕ್ಷಗಳ ಮುಖಂಡರು ನಗರಸಭೆ ಸದಸ್ಯರನ್ನು ವಿಶ್ವಾಸಕ್ಕೆ ಪಡೆಯಲು ಎಲ್ಲ ಬಗೆಯ ಪ್ರಯತ್ನಕ್ಕೆ ಮುಂದಾಗುತ್ತಿದ್ದಾರೆ.

Advertisement

31 ಸದಸ್ಯ ಬಲ: ಮುಧೋಳ ನಗರಸಭೆ ಒಟ್ಟು 31ಸದಸ್ಯ ಬಲ ಹೊಂದಿದ್ದು, ಶಾಸಕ-ಸಂಸದರ ಮತಗ ಳನ್ನು ಕ್ರೋಢೀಕರಿಸಿದರೆ 33ಮತಗಳು ಚುನಾವಣೆಯಲ್ಲಿ ಚಲಾವಣೆಗೊಳ್ಳಲಿವೆ. ಮೇಲ್ನೋಟದಲ್ಲಿ 16 ಸದಸ್ಯರು ಹಾಗೂ ಸಂಸದರ ಮತ ಸೇರಿ ಒಟ್ಟು 17 ಮತಗಳು ಬಿಜೆಪಿ ಪರ ಇದ್ದರೂ ಚುನಾವಣೆ ಘೋಷಣೆಯಾದಾಗಿನಿಂದ ಈ ಮತಗಳಲ್ಲಿ 3-4 ಮತಗಳು ವ್ಯತ್ಯಾಸವಾಗಲಿವೆ ಎಂಬ ಮಾತುಗಳು ಜೋರಾಗಿಯೇ ಹರಿದಾಡತೊಡಗಿವೆ. ಇನ್ನು 14 ನಗರಸಭೆ ಸದಸ್ಯರು, ಒಬ್ಬರು ಶಾಸಕರ ಮತ ಸೇರಿ ಕಾಂಗ್ರೆಸ್‌ ತೆಕ್ಕೆಯಲ್ಲಿ 15 ಮತಗಳಿವೆ. ಮ್ಯಾಜಿಕ್‌ ಸಂಖ್ಯೆ ದಾಟಲು ಬೇಕಾದ ಇನ್ನೂ ಎರಡು ಮತಗಳನ್ನು ಪಡೆಯಲು ಪಕ್ಷದ ಮುಖಂಡರು ರಣತಂತ್ರ ಹೆಣೆದಿದ್ದಾರೆ ಎನ್ನಲಾಗುತ್ತಿದೆ.

ಮೇಲುಗೈ ಸಾಧಿಸಲು ಕೊನೆಯ ದಿನ: ಆ.26ರಂದು ಚುನಾವಣೆ ನಿಗದಿಯಾಗಿದ್ದು, ಅಧಿಕಾರಕ್ಕಾಗಿ ಮೇಲುಗೈ ಸಾಧಿಸಲು ಒಂದೇ ದಿನ ಬಾಕಿ ಉಳಿದಿದೆ. ಚುನಾವಣೆ ಅಂಗಳದ ಮಾತುಗಳನ್ನು ಕೇಳಿದಾಗ ಕಾಂಗ್ರೆಸ್‌ ಪಕ್ಷದ ಸದಸ್ಯರ ಮೇಲೆ ಹಿಡಿತ ಹೊಂದಿದ್ದು ಅಧಿಕಾರ ಗದ್ದುಗೆ ಏರುವುದು ನಿಕ್ಕಿ ಎಂಬ ಮಾತುಗಳು ಹರಿದಾಡುತ್ತಿವೆ. ಇನ್ನು ಬಿಜೆಪಿ ಕಲಿಗಳು ಮಾತ್ರ ಸದಸ್ಯರನ್ನು ತಮ್ಮತ್ತ ಸೆಳೆಯಲು ನಿರಂತರ ಪರಿಶ್ರಮ ಪಡುತ್ತಿದ್ದು, ತಮ್ಮ ಕಾರ್ಯದಲ್ಲಿ ಎಷ್ಟರಮಟ್ಟಿಗೆ ಯಶಸ್ವಿಯಾಗುತ್ತಾರೆ ಎಂಬುದರ ಫಲಿತಾಂಶ ಅರಿಯಲು ಸೋಮವಾರ ಮಧ್ಯಾಹ್ನದವರೆಗೆ ಕಾಯಬೇಕಿದೆ.

ಪ್ರತಿತಂತ್ರ ಹೆಣೆಯುತ್ತಿದೆ ಬಿಜೆಪಿ: ಸ್ಪಷ್ಟ ಬಹುಮತವಿದ್ದರೂ ಸದಸ್ಯರ ನಡುವಳಿಕೆಯಲ್ಲಿನ ವ್ಯತ್ಯಾಸದಿಂದ ಎಚ್ಚೆತ್ತಿರುವ ಬಿಜೆಪಿ ಮುಖಂಡರು ಸದಸ್ಯರನ್ನು ತಮ್ಮತ್ತ ಸೆಳೆಯಲು ಪ್ರತಿತಂತ್ರ ಹೆಣೆಯುತ್ತಿದ್ದಾರೆ. ಆ ಮೂಲಕ ಮೊದಲ ಅವ ಧಿಯಲ್ಲಿ ತನ್ನ ತೆಕ್ಕೆಯಲ್ಲಿದ್ದ ಅಧಿ ಕಾರವನ್ನು ತನ್ನಲ್ಲಿಯೇ ಉಳಿಸಿಕೊಳ್ಳಲು ಹವಣಿಸುತ್ತಿದೆ.

ರಾಜಕೀಯ ಜಿದ್ದಾಜಿದ್ದಿ: ಯಾವುದೇ ಸರ್ಕಾರ ಆಡಳಿತಕ್ಕೆ ಬಂದರೂ ಸಚಿವ ಸಂಪುಟದಲ್ಲಿ ಸ್ಥಾನ ಪಡೆಯುವ ಮೂಲಕ ರಾಜಕೀಯ ರಂಗದಲ್ಲಿ ತನ್ನದೇಯಾದ ವರ್ಚಸ್ಸು ಹೊಂದಿರುವ ಮುಧೋಳ ಮತಕ್ಷೇತ್ರದ ನಗರಸಭೆ ಚುನಾವಣೆ ಈ ಬಾರಿ ಜಿದ್ದಾಜಿದ್ದಿನಿಂದ ಕೂಡಿದೆ. ನಗರಸಭೆಯಲ್ಲಿ ಮ್ಯಾಜಿಕ್‌ ಸಂಖ್ಯೆಗೆ ಎರಡೂ ಪಕ್ಷಗಳು ಹತ್ತಿರ ಇರುವುದರಿಂದ ಅ ಧಿಕಾರ ಹಿಡಿಯಲು ಅವಳಿ ಪಕ್ಷಗಳ ಮುಖಂಡರು ಶತಪ್ರಯತ್ನ ನಡೆಸಿದ್ದಾರೆ. ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿನ ಸೋಲು ಬಿಜೆಪಿಗೆ ಬಿಸಿ ತುಪ್ಪದಂತಾಗಿದ್ದು, ಇದರ ಲಾಭ ಪಡೆಯಲು ಕಾಂಗ್ರೆಸ್‌ ಸಕಲ ತಯಾರಿ ನಡೆಸಿದೆ. ಆದರೂ ಪಟ್ಟು ಬಿಡದ ಬಿಜೆಪಿಗರು ಶತಾಯ ಗತಾಯ ಅಧಿ ಕಾರ ಹಿಡಿಯಲೇಬೇಕೆನ್ನುವ ಛಲದಿಂದ ರಾಜಕೀಯ ಚದುರಂಗದಾಟ ಆಡುತ್ತಿದ್ದಾರೆ.

Advertisement

ಪಕ್ಷೇತರ ಅಭ್ಯರ್ಥಿಗೆ ಒಲಿಯುತ್ತಾ ಅಧಿಕಾರ

ಈ ಎಲ್ಲ ಬೆಳವಣಿಗೆಯ ನಡುವೆ ನಗರಸಭೆಯಲ್ಲಿರುವ ಓರ್ವ ಪಕ್ಷೇತರ ಅಭ್ಯರ್ಥಿಗೆ ಅದೃಷ್ಟ ಖುಲಾಯಿಸುತ್ತದೆಯೇ ಎಂಬ ಚರ್ಚೆಗಳು ಜೋರಾಗಿಯೇ ಹರಿದಾಡತೊಡಗಿವೆ. ಇದುವರೆಗೆ ಯಾವ ಪಕ್ಷಕ್ಕೂ ಬಹುಮತ ಸೂಚಿಸದ ಪಕ್ಷೇತರ ಅಭ್ಯರ್ಥಿ ಕೊನೆಯ ಹಂತದಲ್ಲಿ ನಡೆಯುವ ನಾಟಕೀಯ ಬೆಳವಣಿಗೆಯಲ್ಲಿ ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿಯಾದರೂ ಅಚ್ಚರಿ ಪಡಬೇಕಿಲ್ಲ ಎಂಬುದು ರಾಜಕೀಯ ಪಂಡಿತರ ಲೆಕ್ಕಾಚಾರ.

 ಗೋವಿಂದಪ್ಪ ತಳವಾರ

Advertisement

Udayavani is now on Telegram. Click here to join our channel and stay updated with the latest news.

Next