Advertisement

MUDA Scam: ಕೋರ್ಟ್‌ ಛೀಮಾರಿಗೆ ಮುನ್ನ ಸಿಎಂ ರಾಜೀನಾಮೆ ನೀಡಲಿ: ಬಿ.ವೈ.ವಿಜಯೇಂದ್ರ

12:18 AM Aug 28, 2024 | Team Udayavani |

ಬೆಂಗಳೂರು: ಸಿದ್ದರಾಮಯ್ಯ ಸರಕಾರದ ವಿರುದ್ಧ ದಿಲ್ಲಿ ಮಟ್ಟದಲ್ಲಿ ಅಭಿಪ್ರಾಯ ರೂಪಿಸುವ ಕಾರ್ಯಕ್ಕೆ ಬಿಜೆಪಿ ಮುಂದಾಗಿದೆ. ಮುಡಾ ಹಗರಣದ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಬಿಜೆಪಿ ವರಿಷ್ಠರಿಗೆ ಒಪ್ಪಿಸಿದ್ದು, “ನ್ಯಾಯಾಲಯದಿಂದ ಛೀಮಾರಿ ಹಾಕಿಸಿಕೊಳ್ಳುವುದಕ್ಕೆ ಮುನ್ನ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡುವುದು ಸೂಕ್ತ’ ಎಂದು ಆಗ್ರಹಿಸಿದ್ದಾರೆ.

Advertisement

ದಿಲ್ಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಜಯೇಂದ್ರ, ಕಳೆದ 2 ತಿಂಗಳಿಂದ ಕರ್ನಾಟಕದಲ್ಲಿ ಆಡಳಿತ ಸಂಪೂರ್ಣವಾಗಿ ಕುಸಿದಿದೆ. ಸಿದ್ದರಾಮಯ್ಯ ಯಾವುದೇ ಕ್ಷಣದಲ್ಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಬಹುದು. ಅವರ ಮೇಲೆ ಸಚಿವರಿಗೆ ವಿಶ್ವಾಸ ಇಲ್ಲ. ಯಾವಾಗ ಮುಖ್ಯಮಂತ್ರಿ ರಾಜೀನಾಮೆ ಕೊಡುತ್ತಾರೋ, ಯಾವಾಗ ಸಿದ್ದರಾಮಯ್ಯರ ಪರವಾಗಿ ಬ್ಯಾಟಿಂಗ್‌ ಮಾಡಲು ದೆಹಲಿಗೆ ಹೋಗಬೇಕೋ ಎಂಬ ಆತಂಕ ಅವರಲ್ಲಿದೆ ಎಂದು ವ್ಯಂಗ್ಯವಾಡಿದರು.

ಸಿದ್ದು ಆಡಳಿತದ ಕ್ಷಣಗಣನೆ
ಸಿದ್ದರಾಮಯ್ಯನವರ ಜತೆಗೆ ದಿಲ್ಲಿಗೆ ಹೋಗಿದ್ದ ಡಿಸಿಎಂ ಡಿ.ಕೆ.ಶಿವಕುಮಾರ್‌ ವೈಷ್ಣೋದೇವಿಗೆ ಹೋಗಿ ಬಂದಿದ್ದಾರೆ. ಮುಖ್ಯಮಂತ್ರಿ ಮಾಡು ಎಂದು ತಾಯಿಯಲ್ಲಿ ಆಶೀರ್ವಾದ ಬೇಡಿದಂತಿದೆ. ಈ ಎಲ್ಲ ದೃಷ್ಟಿಯಿಂದ ಸಿದ್ದರಾಮಯ್ಯ ಆಡಳಿತದ ಕ್ಷಣಗಣನೆ ಆರಂಭವಾಗಿದೆ ಎಂದು ವಿಜಯೇಂದ್ರ ಹೇಳಿದರು.

ಇಂದಲ್ಲ ನಾಳೆ ಸಿದ್ದರಾಮಯ್ಯನವರ ಆ 14 ನಿವೇಶನಗಳು ಮುಡಾ ಪಾಲಾಗಿ ಬಡವರಿಗೆ ಸಿಗಲಿವೆ. ಈ ಕಾಂಗ್ರೆಸ್‌ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಭ್ರಷ್ಟಾಚಾರದಲ್ಲಿ ಮುಳುಗಿದೆ. ಅಭಿವೃದ್ಧಿ ಕೆಲಸಗಳು ಆರಂಭವೇ ಆಗಿಲ್ಲ. ರಾಜ್ಯದ ಆರ್ಥಿಕ ಪರಿಸ್ಥಿತಿ ಸಂಪೂರ್ಣ ಕುಗ್ಗಿ ಹೋಗಿದ್ದು, ಕರ್ನಾಟಕದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಟೀಕಿಸಿದರು.

ಯತ್ನಾಳ್‌ಗೆ ತಿರುಗೇಟು
ಪಕ್ಷದ ವರಿಷ್ಠರು ನನ್ನನ್ನು ರಾಜ್ಯಾಧ್ಯಕ್ಷನನ್ನಾಗಿ ಮಾಡಿದ್ದಾರೆ. ಬಸನಗೌಡ ಪಾಟೀಲ್‌ ಯತ್ನಾಳ್‌ ಅಥವಾ ಇನ್ಯಾರದೋ ವಿರುದ್ಧ ದಿಲ್ಲಿಯಲ್ಲಿ ದೂರು ಕೊಡಲು ನನ್ನನ್ನು ರಾಜ್ಯಾಧ್ಯಕ್ಷನನ್ನಾಗಿ ಮಾಡಿಲ್ಲ. ಸಂಘಟನೆ ಬಲಪಡಿಸಲು, ಬಿಜೆಪಿ ಸ್ಪಷ್ಟ ಬಹುಮತ ಪಡೆಯಲು ರಾಜ್ಯಾಧ್ಯಕ್ಷನನ್ನಾಗಿಸಿದ್ದಾರೆ. ಯತ್ನಾಳ್‌ ಕುರಿತು ಇಲ್ಲಿ ನಾನು ಪ್ರಸ್ತಾಪಿಸುವುದಿಲ್ಲ. ಅದರ ಅವಶ್ಯಕತೆಯೂ ನನಗಿಲ್ಲ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next