Advertisement

MUDA Scam: ʼನೀವು ಕ್ಲೀನ್‌ ಅಲ್ಲ, ವೈಟ್ನರ್‌ ಸಿದ್ದರಾಮಯ್ಯ’: ವಿಪಕ್ಷ ನಾಯಕ ಅಶೋಕ್‌

11:48 PM Aug 22, 2024 | Team Udayavani |

ಮಂಡ್ಯ: ಜಾತಿ ಹೆಸರಿನಲ್ಲಿ ರಾಜಕಾರಣ ಮಾಡುವುದು ಬೇಡ. ಜಾತಿಯನ್ನು ಅಂಟಿಸಿಕೊಳ್ಳಬಾರದು. ಕೊಲೆಗಾರ, ಕಳ್ಳ, ಅತ್ಯಾಚಾರ ಮಾಡುವವನಿಗೆ ಯಾವುದೇ ಜಾತಿ ಇಲ್ಲ. ಸಿಕ್ಕಿ ಹಾಕಿಕೊಂಡಾಗ ಮಾತ್ರ ಜಾತಿ ತರುವುದು, ಇಲ್ಲದಿದ್ದರೆ ಎಲ್ಲರೂ ನಮ್ಮವರು ಎನ್ನುತ್ತೀರಿ ಎಂದು ಕಾಂಗ್ರೆಸ್‌ ನಾಯಕರ ವಿರುದ್ಧ ವಿಪಕ್ಷ ನಾಯಕ ಆರ್‌.ಅಶೋಕ್‌ ವಾಗ್ಧಾಳಿ ನಡೆಸಿದರು.

Advertisement

ನಗರದ ಸರ್‌ಎಂವಿ ಪ್ರತಿಮೆ ಮುಂಭಾಗ ಜಿಲ್ಲಾ ಬಿಜೆಪಿ ಘಟಕದ ನೇತೃತ್ವದಲ್ಲಿ ರಾಜ್ಯಪಾಲರ ವಿರುದ್ಧ ಕಾಂಗ್ರೆಸ್‌ ನಾಯಕರ ಅವಹೇಳನ ಖಂಡಿಸಿ ಹಾಗೂ ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಒತ್ತಾಯಿಸಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿ ಮುಡಾದಲ್ಲಿ 5 ಸಾವಿರ ಕೋಟಿ ರೂ. ಲೂಟಿ ಮಾಡಲಾಗಿದೆ. ಸಿದ್ದರಾಮಯ್ಯ 14 ನಿವೇಶನ ಮಾಡಿದ್ದರೆ, ಅವರ ಬೆಂಬಲಿಗರಿಗೆ 700 ನಿವೇಶನ ನೀಡಲಾಗಿದೆ. ಸಿದ್ದರಾಮಯ್ಯ, ನಾನು ಒಂದು ಸೈಟನ್ನೂ ಅಕ್ರಮವಾಗಿ ಪಡೆದಿಲ್ಲ ಎನ್ನುತ್ತಾರೆ. ನನ್ನ ಹೆಂಡ್ತಿ ಅರ್ಜಿಯೇ ಕೊಟ್ಟಿಲ್ಲ ಅಂತಾರೆ. ವೈಟ್ನರ್‌ ಹಾಕಿರುವ ದಾಖಲೆ ಸಿಕ್ಕಿದ್ದು, ವೈಟ್ನರ್‌ ಏಕೆ ಹಾಕಿದ್ದೀರಾ?. ನನಗೆ ವಿಜಯನಗರದಲ್ಲೇ ಸೈಟು ಎಂದು ಬರೆದಿರುವ ಮೇಲೆಯೇ ವೈಟ್ನರ್‌ ಹಾಕಿದ್ದಾರೆ. ದಾಖಲೆಗಳನ್ನು ತಿದ್ದುತ್ತಿದ್ದಾರೆ. ನೀವು ಕ್ಲೀನ್‌ ಸಿದ್ದರಾಮಯ್ಯ ಅಲ್ಲ, ವೈಟ್ನರ್‌ ಸಿದ್ದರಾಮಯ್ಯ ಎಂದು ದೂರಿದರು.

ಠಾಣೆಗಳಲ್ಲಿ ಇಂಥ ಜಾತಿಯವರು ಬಂದ್ರೆ ದೂರು ತೆಗೆದುಕೊಳ್ಳಿ ಎಂದು ಬೋರ್ಡ್‌ ಹಾಕಿ ಕಾನೂನು ತಿದ್ದುಪಡಿ ಮಾಡಿ, ಸುತ್ತೋಲೆ ಹೊರಡಿಸಿಬಿಡಿ. ಅದು ಬಿಟ್ಟು ಬೀದಿಯಲ್ಲಿ ನಾನು ಆ ಜಾತಿ, ಈ ಜಾತಿ ಎಂದು ಬಾಯಿ ಬಡಿದುಕೊಳ್ಳುವುದನ್ನು ನಿಲ್ಲಿಸಿ. ಕಳ್ಳ ಎಂದು ಪೊಲೀಸರಿಗೆ ಸಿಕ್ಕಿ ಹಾಕಿಕೊಂಡು ಏಟು ತಿನ್ನುವಾಗ ಅಣ್ಣಾ ನಾನು ನಿಮ್ಮ ಜಾತಿಯವನೆಂದು ಹೇಳುವುದು. ಸಿಕ್ಕಿ ಹಾಕಿಕೊಳ್ಳದಿದ್ದಾಗ ಎಲ್ಲರೂ ನಮ್ಮವರೇ ಎನ್ನುವುದು.

ಇಂಥ ಜಾತಿ ರಾಜಕಾರಣ ಮೊದಲು ಬಿಡಿ. ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ರಾಜ್ಯಪಾಲರನ್ನು ಜಾತಿ ಆಧಾರದ ಮೇಲೆ ನೇಮಕ ಮಾಡಿಲ್ಲ ಎನ್ನುತ್ತಾರೆ. ನಿಮ್ಮ ಮುಖ್ಯಮಂತ್ರಿಯನ್ನು ಕೂಡ ಜಾತಿ ಆಧಾರದ ಮೇಲೆ ಮಾಡಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಿ. ಅವರು ಇಡೀ ರಾಜ್ಯದ ಜನರಿಗೂ ಮುಖ್ಯಮಂತ್ರಿ, ಒಂದು ಜಾತಿಗೆ ಸೀಮಿತವಲ್ಲ ಎಂದು ತಿರುಗೇಟು ನೀಡಿದರು.

ಮುಡಾ ಹಗರಣದಲ್ಲಿ ಸಾವಿರಕ್ಕೂ ಹೆಚ್ಚು ನಿವೇಶನಗಳನ್ನು ನುಂಗಲಾಗಿದೆ. ದೊಡ್ಡ ದೊಡ್ಡ ತಿಮಿಂಗಿಲಗಳಿವೆ. ಆದ್ದರಿಂದ ಸಿಬಿಐ ಅಥವಾ ಲೋಕಾಯುಕ್ತ ತನಿಖೆಯಾಗಬೇಕು. ರಾಜ್ಯಪಾಲರಿಗೆ ದೂರು ಬಂದಿದೆ. ಅದರಂತೆ ತನಿಖೆ ಮಾಡಿ ಎಂದು ಅನುಮತಿ ನೀಡಿದ್ದಾರೆಯೇ ಹೊರತು, ಜೈಲಿಗೆ ಹಾಕಿ ಎಂದು ಹೇಳಿಲ್ಲ. ಆರೋಪ ಕೇಳಿಬಂದಾಗ ತನಿಖೆ ಸಹಜ. ಆದರೆ ನೀವು ಕಳೆದ ಬಾರಿ ನಮ್ಮ ಮೇಲೆ 40 ಪರ್ಸೆಂಟ್‌ ಆರೋಪ ಮಾಡಿದ್ದೀರಿ. ಆದರೆ, ನೀವು ಬಂದು 14 ತಿಂಗಳಾದರೂ ಏಕೆ ತನಿಖೆ ಮಾಡಿಸಿಲ್ಲ. ನಾನೇ ಇವರ ಮೇಲೆ ಪ್ರಕರಣ ದಾಖಲಿಸಿದ್ದೇನೆ. ಇದೀಗ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌, ರಾಹುಲ್‌ಗಾಂಧಿ  ಜಾಮೀನಿನ ಮೇಲೆ ಹೊರಗಿದ್ದಾರೆ ಎಂದು ಟೀಕಿಸಿದರು.

Advertisement

ಐವಾನ್‌ ಡಿಸೋಜಾ ಶಾಸಕನಾಗಿರುವುದೇ ನಾಲಾಯಕ್‌
ರಾಜ್ಯಪಾಲರು ದಲಿತರಲ್ಲೇ ಹಿಂದುಳಿದ ವರ್ಗದವರು. ಅಂಥವರನ್ನು ಏಕವಚನದಲ್ಲಿ ಅವಹೇಳನ ಮಾಡುತ್ತೀರಾ. ನಿಮ್ಮನ್ನು ನೇಮಿಸಿದವರು ರಾಜ್ಯಪಾಲರೆಂಬುದು ನೆನಪಿರಲಿ. ಅವರ ಆದೇಶ ಇಲ್ಲದಿದ್ದರೆ ನಿಮ್ಮ ಸರ್ಕಾರದ ಆದೇಶಗಳೇ ನಡೆಯುವುದಿಲ್ಲ. ಐವಾನ್‌ ಡಿಸೋಜಾ ಎಂಬುವನು ರಾಜಭವನ ಬಾಂಗ್ಲಾದೇಶ ಆಗುತ್ತೆ ಎಂದಿದ್ದಾರೆ. ಕಾಂಗ್ರೆಸ್‌ ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ಹಲ್ಲೆ, ಅತ್ಯಾಚಾರ, ಕೊಲೆ ಮಾಡಲಾಗಿದೆ. ಅದೇ ಅರ್ಥದಲ್ಲಿ ಹೇಳಿದ್ದಾರೆ. ನಿಮಗೆ ನಾಚಿಕೆಯಾಗುವುದಿಲ್ಲವೇ? ಏನು ಮಾಡಲು ಹೊರಟಿದ್ದೀರಾ? ಶಾಸಕನಾಗಿರುವುದು ನಾಲಾಯಕ್‌ ಎಂದು ಆರ್‌.ಅಶೋಕ್‌ ಕಿಡಿಕಾರಿದರು.

ಐವಾನ್‌ ಡಿಸೋಜಾ ಅವರನ್ನು ನಾವು ಇಲ್ಲಿಗೆ ಬಿಡುವುದಿಲ್ಲ. ಕಾಂಗ್ರೆಸ್‌ನವರು ಗಂಭೀರವಾಗಿ ತೆಗೆದುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ದೊಡ್ಡ ಚರ್ಚೆಯಾಗಲಿದೆ. ದಲಿತರಾಗಿರುವ ರಾಜ್ಯಪಾಲರನ್ನು ಅವಮಾನ ಮಾಡಿರುವುದು ಸರಿಯಲ್ಲ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್‌.ಎಸ್‌.ಇಂದ್ರೇಶ್‌, ರೈತ ಮುಖಂಡ ಕೆ.ಎಸ್‌.ನಂಜುಂಡೇಗೌಡ, ಮುಖಂಡರಾದ ಅಶೋಕ್‌ ಜಯರಾಂ, ಎಸ್‌.ಪಿ.ಸ್ವಾಮಿ, ಡಾ.ಸದಾನಂದ, ಸಿ.ಟಿ.ಮಂಜುನಾಥ್‌, ನಾಗಾನಂದ, ಶಿವಕುಮಾರ್‌ ಆರಾಧ್ಯ, ಶಿವಕುಮಾರ್‌, ಪ್ರಸನ್ನಕುಮಾರ್‌, ಅಶೋಕ್‌ಕುಮಾರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next