ಚಿತ್ರದುರ್ಗ: ಕಾರು ಹಾಗೂ ದ್ವಿಚಕ್ರ ವಾಹನಗಳ ಮಧ್ಯೆ ಬೆಳಿಗ್ಗೆ ಸುಮಾರು 10 ಗಂಟೆಯ ವೇಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿರಿಗೆರೆ ಬಳಿ ಸಂಭವಿಸಿದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಒರ್ವ ಬಾಲಕ ಸೇರಿದಂತೆ ದಂಪತಿಯನ್ನು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಉಪಚರಿಸಿ ಆಸ್ಪತ್ರೆಗೆ ಸೇರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಹುಬ್ಬಳ್ಳಿಯ ಸ್ಥಳೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಶನಿವಾರ ಬೆಂಗಳೂರಿನಿಂದ ತೆರಳುತ್ತಿದ್ದ ಸಭಾಪತಿ ಬಸವರಾಜ ಹೊರಟ್ಟಿ ಸಿರೆಗೆರೆ ಬಳಿ ತಮ್ಮ ಕಣ್ಣೆದುರಿಗೆ ಸಂಭವಿಸಿದ ಅಪಘಾತ ಗಮನಿಸಿ ಕೂಡಲೇ ತಮ್ಮ ವಾಹನ ನಿಲ್ಲಿಸಿ ಗಾಯಾಳುಗಳಿಗೆ ತಕ್ಷಣವೇ ಪ್ರಥಮ ಚಿಕಿತ್ಸೆ ನೀಡಲು ಸಹಕರಿಸಿದ್ದಾರೆ.
ಇದನ್ನೂ ಓದಿ:ಬೆಲೆ ಮತ್ತೆ ಹೆಚ್ಚಳ: ಬೆಂಗಳೂರು, ಮುಂಬಯಿನಲ್ಲಿ ನೂರರ ಗಡಿ ದಾಟಿದ ಪೆಟ್ರೋಲ್ ಬೆಲೆ
ತಕ್ಷಣ ಸ್ಥಳೀಯ ಪೊಲೀಸರಿಗೆ ಸ್ಥಳಕ್ಕೆ ಆಗಮಿಸುವಂತೆ ಸೂಚಿಸಿ, ಆಂಬ್ಯುಲೆನ್ಸ್ ವಾಹನಕ್ಕೂ ಕರೆಮಾಡಿ ಮೂವರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುವಲ್ಲಿ ನೆರವಾಗಿದ್ದಾರೆ.
ಸುಮಾರು ಅರ್ಧ ಗಂಟೆಗಿಂತಲೂ ಹೆಚ್ಚು ಕಾಲ ಅಪಘಾತ ಸ್ಥಳದಲ್ಲಿಯೇ ಇದ್ದು ಗಾಯಾಳುಗಳಿಗೆ ಧೈರ್ಯ ಹೇಳಿ ಅವರಿಗೆ ತುರ್ತು ಚಿಕಿತ್ಸೆ ದೊರಕಿಸುವಲ್ಲಿ ಹೊರಟ್ಟಿ ಶ್ರಮಿಸಿದ್ದಾರೆ.