Advertisement

ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರ ಮಸೂದೆಗೆ ಅಸ್ತು

06:00 AM Feb 23, 2018 | |

ವಿಧಾನಸಭೆ: ಕರಾವಳಿ ಭಾಗದ ಪ್ರಸಿದ್ದ ಪ್ರವಾಸಿ ಕ್ಷೇತ್ರ ಪಿಲಿಕುಳ ನಿಸರ್ಗ ಧಾಮದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರ ರಚಿಸುವ ವಿಧೇಯಕಕ್ಕೆ ಸದನ ಒಪ್ಪಿಗೆ ನೀಡಿದೆ.

Advertisement

ಯೋಜನೆ, ಸಾಂಖೀಕ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎಂ.ಆರ್‌.ಸೀತಾರಾಮ್‌ ಮಂಡಿಸಿದ ಪಿಲಿಕುಳ ಅಭಿವೃದ್ಧಿ ಫ್ರಾಧಿಕಾರ ವಿಧೇಯಕ-2018ಕ್ಕೆ ಪ್ರಾಧಿಕಾರದಲ್ಲಿ ಸ್ಥಳೀಯ ಜನಪ್ರತಿನಿಧಿಗಳಿಗೆ ಹೆಚ್ಚು ಅವಕಾಶ ಕಲ್ಪಿಸಬೇಕು ಎಂಬ ಒತ್ತಾಯದೊಂದಿಗೆ ಸದನ ಧ್ವನಿಮತದ ಅನುಮೋದನೆ ನೀಡಿತು.

ವಿಧೇಯಕ ಮಂಡಿಸಿದ ಸಚಿವ ಎಂ.ಆರ್‌.ಸೀತಾರಾಮ್‌, ಪಶ್ಚಿಮ ಘಟ್ಟಗಳ ಮತ್ತು ರಾಜ್ಯ ಕರಾವಳಿಯ ಜೀವವೈವಿದ್ಯತೆ, ಪರಂಪರೆ ಮತ್ತು ಸಂಸ್ಕೃತಿ ರಕ್ಷಣೆಗಾಗಿ ಹಾಗೂ ವಿದ್ಯಾರ್ಥಿಗಳಲ್ಲಿ ವಿಜ್ಞಾನ ಕಲಿಕೆಗಾಗಿ ಉತ್ತೇಜಕ ಪರಿಸರ ಸೃಷ್ಟಿಸಲು ಮತ್ತು ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್‌, ಗಣಿತ ಆಧರಿತ ಅಭಿವೃದ್ಧಿಗಳ ಬಗ್ಗೆ ಸಾಮಾನ್ಯ ಜನರಲ್ಲಿ ಅರಿವು ಮೂಡಿಸುವುದರ ಜತೆಗೆ ಮಂಗಳೂರಿನ ಪಿಲಿಕುಳ ಪ್ರದೇಶದಲ್ಲಿ ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ನೀಡಲು ಈ ಪ್ರಾಧಿಕಾರ ರಚಿಸಲಾಗುತ್ತದೆ ಎಂದು ಹೇಳಿದರು.

ಪಿಲಿಕುಳದಲ್ಲಿ ತನ್ನ ಕೇಂದ್ರ ಸ್ಥಾನ ಹೊಂದಿರುವ ಪ್ರಾಧಿಕಾರಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಅಧ್ಯಕ್ಷರಾಗಿದ್ದು, ಮಂಗಳೂರು ದಕ್ಷಿಣ, ಉತ್ತರ ಮತ್ತು ಮೂಡಬಿದರೆ ವಿಧಾನಸಭಾ ಕ್ಷೇತ್ರಗಳ ಶಾಸಕರು, ಪಿಲಿಕುಳ ಗಾಲ್ಫ್ಕೋರ್ಸ್‌ ಕ್ಯಾಪ್ಟನ್‌ ಹಾಗೂ ಮೂಡುಷೆಡ್ಡೆ ಗ್ರಾಮ ಪಂಚಾಯ್ತಿ ಅಧ್ಯಕ್ಷರು ಇದರ ಸದಸ್ಯರಾಗಿರುತ್ತಾರೆ. ಇದರ ಜತೆಗೆ ಅಧಿಕಾರಿಗಳನ್ನೊಳಗೊಂಡ 17 ಪದನಿಮಿತ್ತ ಸದಸ್ಯರು, ಮೂವರು ಸರ್ಕಾರೇತರ ಸದಸ್ಯರು ಇರಲಿದ್ದು, ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಪದನಿಮಿತ್ತ ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ.

ಇದಲ್ಲದೆ, ಪ್ರಾಧಿಕಾರಕ್ಕೆ ಸರ್ಕಾರದ ವಿಜ್ಞಾನ ಮತ್ತು ತಾಂತ್ರಿಕ ಸಚಿವರು ಅಧ್ಯಕ್ಷರಾಗಿರುವ 28 ಮಂದಿಯ ರಾಜ್ಯ ಮಟ್ಟದ ಸಲಹಾ ಸಮಿತಿಯೂ ಇರುತ್ತದೆ. ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಪ್ರವಾಸೋದ್ಯಮ ಸಚಿವರು ಸಹಾಧ್ಯಕ್ಷರಾಗಿದ್ದು, ಸ್ಥಳೀಯ ಕೆಲವು ಜನಪ್ರತಿನಿಧಿಗಳು ಸದಸ್ಯರಾಗಿರುತ್ತಾರೆ.

Advertisement

ಪಿಲಿಕುಳ ಕೇಂದ್ರವನ್ನು ಸಮಗ್ರ ಮತ್ತು ವೈಜ್ಞಾನಿಕ ಮಾರ್ಗದಲ್ಲಿ ಪ್ರವಾಸೋದ್ಯಮದ ಮೂಲಕ ವಿಜ್ಞಾನ ಕಲಿಯುವ ಅವಕಾಶ ಕಲ್ಪಿಸುವಂತೆ ಅಭಿವೃದ್ಧಿಪಡಿಸುವುದು, ಮಾನವ ಕಲ್ಯಾಣಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಜನಪ್ರಿಯಗೊಳಿಸುವುದು, ಜ್ಞಾನ ಹೆಚ್ಚಿಸಿಕೊಳ್ಳಲು ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಉತ್ತಮ ಶೈಕ್ಷಣಿಕ ಮತ್ತು ಸಂಪನ್ಮೂಲ ಕೇಂದ್ರ ಅಭಿವೃದ್ಧಿಪಡಿಸುವುದು, ಪರಿಸರದ ವೈಜ್ಞಾನಿಕ ಮನೋಭಾವದ ಅರಿವು ಮತ್ತು ಅಭಿವೃದ್ಧಿ ಮಾಡುವುದು, ಜೀವವೈವಿದ್ಯತೆಯ ಸಂರಕ್ಷಣೆ, ಸಂಶೋಧನೆ ಮತ್ತು ಅಭಿವೃದ್ಧಿಗೆ ಸೌಲಭ್ಯ ಒದಗಿಸುವುದು, ಪಶ್ಚಿಮ ಘಟ್ಟ ಮತ್ತು ಕರಾವಳಿ ಸಂಸ್ಕೃತಿ ಮತ್ತು ಪರಂಪರೆ ರಕ್ಷಿಸುವುದು, ಪರಿಸರ ಅಭಿವೃದ್ಧಿಪಡಿಸುವ, ಪರಿಸರ ಶಿಕ್ಷಣ ಮತ್ತು ಪರಿಸರ ಪ್ರವಾಸೋದ್ಯಮ ಉತ್ತೇಜಿಸುವ ವೈಜ್ಞಾನಿಕ ಮನೋಭಾವ ಬೆಳೆಸುವುದು, ವೈಜ್ಞಾನಿಕ ಮಾಹಿತಿ ಮತ್ತು ಉತ್ತಮ ಪದ್ಧತಿಗಳ ಪ್ರಸಾರ, ಮಕ್ಕಳು ಮತ್ತು ಯುವಕರಲ್ಲಿ ಸೃಜನಾತ್ಮಕ ವೈಜ್ಞಾನಿಕ ಪ್ರತಿಭೆ ಗುರುತಿಸುವುದು ಮತ್ತು ಪ್ರೋತ್ಸಾಹಿಸುವುದು, ವಿಜ್ಞಾನ ಮತ್ತು ತಂತ್ರಜ್ಞಾನದ ಆದ್ಯತಾ ಪ್ರದೇಶ ಗುರುತಿಸುವುದು ಪ್ರಾಧಿಕಾರದ ಉದ್ದೇಶಗಳಾಗಿವೆ.

ಅಲ್ಲದೆ, ತರಬೇತಿ ಕೋರ್ಸ್‌, ಕಾರ್ಯಾಗಾರ, ಸಮ್ಮೇಳನ, ವಿಚಾರಗೋಷ್ಠಿ, ಆಹ್ವಾನಿತರ ಭಾಷಣ, ಸಮಾಲೋಚನಾ ಸೇವೆ, ವಸ್ತುಪ್ರದರ್ಶನ ಆಯೋಜಿಸುವುದು, ಖಗೋಳ ಶಾಸ್ತ್ರ ಆಧಾರಿತ ಶಿಕ್ಷಣ, ಬಾಹ್ಯಾಕಾಶ ವಿಜ್ಞಾನ, ತಂತ್ರಜ್ಞಾನ, ಮತ್ತು ನಾವೀನ್ಯತೆಯಂತಹ ವಿಭಾಗಗಳಲ್ಲಿ ಆಸಕ್ತಿ ಮೂಡಿಸಿ ಕಲಿಕೆ ಉತ್ತೇಜಿಸುವುದು ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಪ್ರಾಧಿಕಾರದಿಂದ ಹಮ್ಮಿಕೊಳ್ಳಲಾಗುತ್ತದೆ.

ಹಣಕಾಸು ಹೊಂದಾಣಿಕೆ:
ಪ್ರಾಧಿಕಾರದ ಕಾರ್ಯಕ್ರಮಗಳಿಗಾಗಿ ಪ್ರತಿ ವರ್ಷ 6 ಕೋಟಿ ರೂ. ವೆಚ್ಚ ಮಾಡಲಾಗುತ್ತದೆ. ಈ ಪೈಕಿ 3.5 ಕೋಟಿ ರೂ. ಪಿಲಿಕುಳ ನಿಸರ್ಗಧಾಮಕ್ಕೆ ಬರುವವರಿಂದ ಸಂಗ್ರಹಿಸುವ ಶುಲ್ಕದಿಂದ ಭರಿಸಿದರೆ ಉಳಿದ 2.5 ಕೋಟಿ ರೂ. ಸರ್ಕಾರ ನೀಡುತ್ತದೆ. ಉಳಿದಂತೆ ಇತರೆ ಪ್ರಾಧಿಕಾರಿಗಳಿಗೆ ಸಂಬಂಧಿಸಿದ ನಿಯಮಾವಳಿಗಳು ಇದಕ್ಕೂ ಅನ್ವಯವಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next