ಬೆಂಗಳೂರು: ಕಳೆದ ಮೂರು ದಿನದಿಂದ ವಿಧಾನಸಭೆಯಲ್ಲಿ ಆಡಳಿತ-ವಿಪಕ್ಷ ಸದಸ್ಯರ ನಡುವೆ ವಾಕ್ಸಮರಕ್ಕೆ ಕಾರಣವಾಗಿದ್ದ ವಾಲ್ಮೀಕಿ ನಿಗಮದ ಹಣ ವರ್ಗಾವಣೆ ಪ್ರಕರಣಕ್ಕೆ ವಿಪಕ್ಷಗಳ ಧರಣಿ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರಿಸುವ ಮೂಲಕ ತೆರೆ ಎಳೆಯುವ ಪ್ರಯತ್ನ ವಿಧಾನಸಭೆಯಲ್ಲಿ ಮಾಡಿದ್ದಾರೆ. ವಿಪಕ್ಷದ ಸದಸ್ಯರ ಗದ್ದಲ, ಘೋಷಣೆ ನಡುವೆ ಪ್ರಕರಣದ ಬಗ್ಗೆ ವಿಸ್ತೃತ ವಿವರ ನೀಡಿದರು.
ಶುಕ್ರವಾರ ಬೆಳಗ್ಗೆ ಕಲಾಪ ಆರಂಭವಾದಾಗಿನಿಂದಲೂ ಬಾವಿಗಿಳಿದು ಧರಣಿ ಮುಂದುವರಿಸಿದ್ದ ವಿಪಕ್ಷ ಸದಸ್ಯರು ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಸಿದ್ರಾಮಣ್ಣ ಸಿದ್ರಾಮಣ್ಣ… ನುಂಗಿದ್ರಣ್ಣ ನುಂಗಿದ್ರಣ್ಣ ದಲಿತರ ದುಡ್ಡು ನುಂಗಿದ್ರಣ್ಣ… ಡೆತ್‌ನೋಟ್‌ನಲ್ಲಿದ್ದ ಮಾಹಿತಿ ಬಿಟ್ಟರಣ್ಣ ಬಿಟ್ಟರಣ್ಣ ಎಂದು ಚಪ್ಪಾಳೆ ತಟ್ಟುತ್ತಾ ಪ್ರತಿಭಟಿಸಿದರು.
ಇದೇನು ವಿಧಾನಸಭೆಯೋ? ನಿಮ್ಹಾನ್ಸ್ ಆಸ್ಪತ್ರೆಯೋ? ಏಕೆ ಹೀಗೆಲ್ಲಾ ಆಡುತ್ತೀರಿ? ಏನ್ ನಡೆಯುತ್ತಿದೆ ಇಲ್ಲಿ? ಇದೇನು ನಾಟಕದ ಕಂಪೆನಿಯೇ ಎಂದು ಸ್ಪೀಕರ್ ಖಾದರ್ ಗರಂ ಆದರು. ಕೊನೆಗೆ ಹತ್ತು ನಿಮಿಷ ಕಲಾಪ ಮುಂದೂಡಿದ ಸ್ಪೀಕರ್, ಸಂಧಾನ ನಡೆಸಿದರಾದರೂ ವಿಪಕ್ಷಗಳ ನಾಯಕರು ಸಿಬಿಐ ತನಿಖೆಗೆ ಪಟ್ಟು ಹಿಡಿದಿದ್ದರಿಂದ ಸಂಧಾನ ವಿಫಲವಾಯಿತು.
ಪುನಃ ಸಮಾವೇಶಗೊಂಡಾಗಲೂ ಧರಣಿ ಮುಂದುವರಿಸಿದರು. ಮುಖ್ಯಮಂತ್ರಿಗಳ ಉತ್ತರಕ್ಕೂ ಅವಕಾಶ ನೀಡದೆ ಈ ರೀತಿ ನಡೆದುಕೊಳ್ಳುತ್ತಿರುವ ವಿಪಕ್ಷಗಳ ವರ್ತನೆ ಸರಿಯಲ್ಲ ಎಂದ ಸ್ಪೀಕರ್, ಅತಿವೃಷ್ಟಿ ಕುರಿತು ಅಲ್ಪಾವಧಿ ಚರ್ಚೆಗೆ ಅನುವು ಮಾಡಿಕೊಟ್ಟರು.
ಇದಕ್ಕೆ ಆಕ್ಷೇಪವೆತ್ತಿದ ವಿಪಕ್ಷ ನಾಯಕ ಆರ್.ಅಶೋಕ, ಸ್ಪೀಕರ್ ಅವರೇ ಇದಕ್ಕೆ ನಿಮ್ಮ ಮನಸ್ಸಾಕ್ಷಿ ಒಪ್ಪುತ್ತದೆಯೇ? ಈ ರೀತಿ ಸದನ ನಡೆಸುವುದು ಸರಿಯೇ? ಕಾರ್ಯಕಲಾಪಗಳ ಪಟ್ಟಿಯಲ್ಲಿ ಇಲ್ಲದ ವಿಷಯವನ್ನು ಚರ್ಚೆಗೆ ಕೊಡುತ್ತಿರುವುದು ಸರಿಯಲ್ಲ ಎಂದು ಒತ್ತಾಯಿಸಿದರು.
ಅಷ್ಟರಲ್ಲಿ ಮೂರು ಮಸೂದೆಗಳ ಮಂಡನೆಗೆ ಅವಕಾಶ ಕೊಟ್ಟ ಸ್ಪೀಕರ್, ಪ್ರಸ್ತಾವದ ಪರವಾಗಿರುವವರು ಹೌದು ಎನ್ನಿ’ ಎನ್ನುತ್ತಿದ್ದಂತೆ ಅಶೋಕ್, ದಲಿತರ ಹಣ ನುಂಗಿದ್ರಾ? ಪ್ರಕರಣ ಮುಚ್ಚಿ ಹಾಕಿದ್ರಾ? ವಾಲ್ಮೀಕಿ ನಿಗಮದ ಹಣ ತೆಲಂಗಾಣಕ್ಕೆ ಟಕಾಟಕ್ ಹೋಯ್ತಾ? ಪ್ರಸ್ತಾವವು ಲೂಟಿಕೋರರ ಪರವಾಗಿದೆಯಾ? ಎಂದು ಪ್ರಶ್ನಿಸಿದರು. ಕೊನೆಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರಿಸುವ ಮೂಲಕ ವಿಧಾನಸಭೆಯಲ್ಲಿ ವಾಲ್ಮೀಕಿ ನಿಗಮದ ಹಣ ವರ್ಗಾವಣೆ ಕುರಿತ ಚರ್ಚೆಗೆ ತೆರೆ ಬಿತ್ತು. ಆದರೆ ಇದನ್ನು ಇಷ್ಟಕ್ಕೆ ಬಿಡುವುದಿಲ್ಲ ಎಂದಿರುವ ವಿಪಕ್ಷಗಳು, ಹೋರಾಟ ಮುಂದುವರಿಸುವ ಎಚ್ಚರಿಕೆ ನೀಡಿವೆ.