Advertisement

ಸದನದ ಗೌರವ ಎತ್ತಿ ಹಿಡಿಯುವುದು ಎಲ್ಲ ಸದಸ್ಯರ ಕರ್ತವ್ಯ

10:38 PM Feb 16, 2022 | Team Udayavani |

ಕೆಂಪುಕೋಟೆ ಮೇಲೆ ಕೇಸರಿ ಧ್ವಜ ಹಾರಾಟ ವಿಚಾರ ವಿಧಾನಮಂಡಲದ ಉಭಯ ಸದನಗಳಲ್ಲೂ ಬುಧವಾರ ಭಾರೀ ಗದ್ದಲ ಸೃಷ್ಟಿಸಿತು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌.ಈಶ್ವರಪ್ಪ ಅವರು ಮುಂದೊಂದು ದಿನ ಕೆಂಪುಕೋಟೆ ಮೇಲೆ ಕೇಸರಿ ಧ್ವಜ ಹಾರಿಸಬಹುದು ಎಂದು ಹೇಳಿದ್ದಾರೆ ಎನ್ನಲಾದ ಮಾಧ್ಯಮ ಹೇಳಿಕೆಯೇ ಇಷ್ಟೆಲ್ಲ ವಿವಾದಕ್ಕೆ ಕಾರಣವಾಗಿದೆ.

Advertisement

ಕೆಂಪುಕೋಟೆ ಮೇಲೆ ಕೇಸರಿ ಧ್ವಜ ಹಾರಿಸುತ್ತೇವೆ ಎಂದಿರುವ ಈಶ್ವರಪ್ಪ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಕು, ಅವರನ್ನು ಸಂಪುಟದಿಂದ ಕೈಬಿಡಬೇಕು ಎಂಬುದು ಕಾಂಗ್ರೆಸ್‌ ಆಗ್ರಹ. ಆದರೆ ಆಡಳಿತ ಪಕ್ಷ ಬಿಜೆಪಿ, ಈಶ್ವರಪ್ಪ ಮಾಧ್ಯಮಗಳ ಜತೆಗಿನ ಮಾತಿನ ಭರದಲ್ಲಿ ಮುಂದೊಂದು ದಿನ ಕೆಂಪುಕೋಟೆ ಮೇಲೆ ಕೇಸರಿ ಧ್ವಜ ಹಾರಿಸಿದರೂ ಹಾರಿಸಬಹುದು ಎಂದಿದ್ದಾರಷ್ಟೇ. ಈಗಲೇ ಹಾರಿಸುತ್ತೇವೆ ಎಂದಿಲ್ಲ. ಹಾಗೆಯೇ ರಾಷ್ಟ್ರಧ್ವಜಕ್ಕೆ ತನ್ನದೇ ಆದ ಗೌರವವಿದೆ. ಇದರ ವಿರುದ್ಧ ಮಾತನಾಡುವುದೂ ತರವಲ್ಲ ಎಂದೂ ಹೇಳಿದ್ದಾರೆ. ಹಾಗಾಗಿ ಅವರು ದೇಶದ್ರೋಹ ಎಸಗುವಂಥ ಯಾವುದೇ ಹೇಳಿಕೆ ನೀಡಿಲ್ಲ ಎಂದು ಸಮರ್ಥಿಸಿಕೊಂಡಿದೆ.

ಈ ಎಲ್ಲ ಸಂಗತಿಗಳ ನಡುವೆ ಬುಧವಾರ ಸದನದ ಗೌರವಕ್ಕೆ ಚ್ಯುತಿಯಾಗುವಂತೆ ಬಿಜೆಪಿ ಮತ್ತು ಕಾಂಗ್ರೆಸ್‌ ಸದಸ್ಯರು ನಡೆದುಕೊಂಡಿದ್ದಾರೆ. ಸಚಿವ ಕೆ.ಎಸ್‌.ಈಶ್ವರಪ್ಪ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ನಡುವೆ ಏಕವಚನದಲ್ಲೇ ವಾಕ್ಸಮರ ನಡೆದಿದೆ. ಒಂದು ಹಂತದಲ್ಲಿ ಇವರೀರ್ವರ ನಡುವಿನ ಸಮರ ಕೈ ಕೈ ಮಿಲಾಯಿಸುವ ಹಂತಕ್ಕೆ ಮುಟ್ಟಿತ್ತು. ಸಂಸದೀಯ ಭಾಷೆಯಲ್ಲಿ  ಸೂಕ್ತವಲ್ಲದ ಪದಗಳ ಬಳಕೆಯಾಗಿರುವುದು ಖಂಡಿತಾ ಅಕ್ಷಮ್ಯ.

ಈಗಾಗಲೇ ಜನರು ರಾಜಕಾರಣಿಗಳ ಮೇಲೆ ನಿಧಾನಗತಿಯಲ್ಲಿ ಗೌರವ ಕಳೆದುಕೊಳ್ಳುತ್ತಿದ್ದಾರೆ. ಸದನದಲ್ಲಿನ ಇಂಥ ವರ್ತನೆಗಳಿಂದ ರಾಜಕಾರಣಿಗಳ ಮೇಲಿನ ಅವರ ನಂಬಿಕೆ ಮತ್ತಷ್ಟು ಕುಸಿಯಬಹುದು. ಅಲ್ಲದೆ ವಿಧಾನಸಭೆ ಇರುವುದು ರಾಜ್ಯದ ಅಭಿವೃದ್ಧಿ, ಸಮಸ್ಯೆಗಳ ಕುರಿತಂತೆ ಚರ್ಚೆ ನಡೆಸುವುದಕ್ಕೆ ಮಾತ್ರ. ಇಲ್ಲಿ ವೈಯಕ್ತಿಕ ನಿಂದನೆ ಅಸಹನೀಯ. ಅಷ್ಟೇ ಅಲ್ಲ ಏಕವಚನಕ್ಕಿಂತಲೂ ಮೇಲಾಗಿ ಸದನದ ಒಳಗೇ ಕೀಳು ಪದ ಬಳಕೆ ಮಾಡುವುದು ನಾಗರಿಕ ಸಮಾಜ ಒಪ್ಪುವಂಥದ್ದಲ್ಲ.

ಈಗ ಉದ್ಭವವಾಗಿರುವ ರಾಷ್ಟ್ರಧ್ವಜದ ವಿಚಾರವೂ ಅಷ್ಟೇ. ನಿಜಕ್ಕೂ ಸಚಿವರ ಕಡೆಯಿಂದ ತಪ್ಪಾಗಿದೆ ಎನ್ನುವುದಾದರೆ ಸದನದಲ್ಲಿ ಈ ಬಗ್ಗೆಯೇ ಗಂಭೀರ ಚರ್ಚೆಯಾಗಲಿ. ಅಲ್ಲದೆ ಕಾನೂನು ಮಾರ್ಗದಲ್ಲಿ ಮುಂದಿನ ಹೆಜ್ಜೆ ಇಡಲು ಅವಕಾಶ ಇದೆ. ಅದನ್ನು ಬಿಟ್ಟು  ಸದನದ ಗೌರವಕ್ಕೆ ಚ್ಯುತಿ ಬರುವಂತೆ ವರ್ತಿಸುವುದು ತರವಲ್ಲ. ಕೆಂಪುಕೋಟೆ ಮೇಲೆ ರಾಷ್ಟ್ರಧ್ವಜವನ್ನು ಹೊರತುಪಡಿಸಿ ಬೇರಾವುದೇ ಧ್ವಜವನ್ನು ಹಾರಿಸುವುದನ್ನು ಯೋಚಿಸುವುದೂ ಕೂಡ ತಪ್ಪಾಗುತ್ತದೆ. ಇಂಥ ಹೇಳಿಕೆಗಳು ಎಲ್ಲಿಂದ ಬಂದರೂ ಅದು ಅಕ್ಷಮ್ಯವೇ.

Advertisement

ಹಾಗೆಯೇ ಸದನದಲ್ಲಿ ರಾಷ್ಟ್ರಧ್ವಜ ಇರಿಸಿಕೊಂಡು ಪ್ರತಿಭಟನೆ ನಡೆಸುವ ಕ್ರಮದ ಬಗ್ಗೆಯೂ ಸಾಕಷ್ಟು ತಕರಾರುಗಳಿವೆ. ಜನಪ್ರತಿನಿಧಿಗಳು ತಮ್ಮ ಮೂಲ ಉದ್ದೇಶವನ್ನು ಮರೆತು ಬೀದಿ ನಾಟಕದ ಮಾದರಿಯಲ್ಲಿ  ವರ್ತಿಸುವುದನ್ನು ಜನರು ಖಂಡಿತಾ ಕ್ಷಮಿಸಲಾರರು.

Advertisement

Udayavani is now on Telegram. Click here to join our channel and stay updated with the latest news.

Next