ಸೂರತ್: ಎರಡನೇ ಆವೃತ್ತಿಯ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಕಪ್ ನ್ನು ಮಣಿಪಾಲ್ ಟೈಗರ್ಸ್ ತಂಡವು ಗೆದ್ದುಕೊಂಡಿದೆ. ರವಿವಾರ ನಡೆದ ಅರ್ಬನ್ ರೈಸರ್ಸ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಐದು ವಿಕೆಟ್ ಗಳ ಅಂತರದ ಗೆಲುವು ಕಂಡ ಮಣಿಪಾಲ್ ಟೈಗರ್ಸ್ ಪ್ರಶಸ್ತಿ ತನ್ನದಾಗಿಸಿಕೊಂಡಿದೆ.
ಫೈನಲ್ ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸುರೇಶ್ ರೈನಾ ನಾಯಕತ್ವದ ಹೈದರಾಬಾದ್ 20 ಓವರ್ ಗಳಲ್ಲಿ 187 ರನ್ ಮಾಡಿದರೆ, ಹರ್ಭಜನ್ ಸಿಂಗ್ ನಾಯಕತ್ವದ ಮಣಿಪಾಲ್ ತಂಡವು 19 ಓವರ್ ಗಳಲ್ಲಿ 193 ರನ್ ಗಳಿಸಿತು.
ಟಾಸ್ ಸೋತರೂ ಬ್ಯಾಟಿಂಗ್ ಅವಕಾಶ ಪಡೆದ ಹೈದರಾಬಾದ್ ತಂಡಕ್ಕೆ ಆರಂಭದಲ್ಲಿ ಎರಡು ವಿಕೆಟ್ ಕಳೆದುಕೊಂಡಿತ್ತು. ಆದರೆ ಬಳಿಕ ರಿಕ್ಕಿ ಕ್ಲಾರ್ಕ್ ಮತ್ತು ಗುರುಕೀರತ್ ಮಾನ್ 122 ರನ್ ಜೊತೆಯಾಟವಾಡಿದರು. ಕ್ಲಾರ್ಕ್ 80 ರನ್ ಮಾಡಿದರೆ, ಗುರುಕೀರತ್ 64 ರನ್ ಗಳಿಸಿದರು.
ಗುರಿ ಬೆನ್ನತ್ತಿದ ಮಣಿಪಾಲ ತಂಡಕ್ಕೆ ರಾಬಿನ್ ಉತ್ತಪ್ಪ ಮತ್ತು ಚಾಡ್ವಿಕ್ ವಾಲ್ಟನ್ ಉತ್ತಮ ಆರಂಭ ನೀಡಿದರು. ಉತ್ತಪ್ಪ 40 ರನ್ ಗಳಿಸಿದರೆ, ವಾಲ್ಟನ್ 29 ರನ್ ಬಾರಿಸಿದರು. ಆ್ಯಂಜಲೋ ಪೆರೇರಾ 30 ರನ್ ಮಾಡಿದರು. ಉತ್ತಮ ಫಾರ್ಮ್ ಮುಂದುವರಿಸಿದ ಅಸೆಲಾ ಗುಣರತ್ನೆ ಅಜೇಯ 51 ರನ್ ಗಳಿಸಿದರೆ ತಿಸ್ಸರಾ ಪೆರೇರಾ 25 ರನ್ ಮಾಡಿದರು.
ಅಸೆಲಾ ಗುಣರತ್ನೆ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರೆ, ತಿಸ್ಸರಾ ಪೆರೇರಾ ಅವರು ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.