ಕಲಬುರಗಿ: ದೇಶದ ನಾಳಿನ ಭವಿಷ್ಯವಾಗಿರುವ ಶಾಲೆ-ಕಾಲೇಜು ವಿದ್ಯಾರ್ಥಿಗಳು ಕಾನೂನಿನ ಅರಿವು ಹೊಂದುವುದು ಮುಖ್ಯವಾಗಿದೆ ಎಂದು ಫರತಾಬಾದ್ ಠಾಣೆ ಸರ್ಕಲ್ ಇನ್ಸ್‌ಪೆಕ್ಟರ್ ರಾಘವೇಂದ್ರ ಹೇಳಿದರು.
ನಗರ ಹೊರ ವಲಯದಲ್ಲಿರುವ ಖಣದಾಳದ ಶ್ರೀಗುರು ವಿದ್ಯಾಪೀಠದ ಪ್ರೌಢ ಶಾಲೆ, ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.
ವಿದ್ಯಾರ್ಥಿಗಳು ಮೋಟಾರ್ ಆ್ಯಕ್ಟ್ ಕುರಿತು ತಿಳಿದುಕೊಳ್ಳಬೇಕು. ಅದೇ ರೀತಿ ಮೂಲ ಹಕ್ಕುಗಳ ಬಗ್ಗೆಯೂ ಮಾಹಿತಿ ಹೊಂದಿರಬೇಕು. ಪ್ರಮುಖವಾಗಿ ಕಾನೂನನ್ನು ಯಾವ ಸಂದರ್ಭದಲ್ಲಿ ಕೈಗೆತ್ತಿಕೊಳ್ಳಬಾರದು ಎಂದರು.
ಫೋಸ್ಕೋ ಕಾಯ್ದೆ ಮಹಿಳೆಯರು, ಅಪ್ರಾಪ್ತ ಬಾಲಕಿಯರ ಮೇಲೆ ನಡೆಯುವ ದೌರ್ಜನ್ಯ ತಡೆಯುವುದಾಗಿದೆ. ಈ ಕಾಯ್ದೆ ಅತ್ಯಂತ ಬಲಿಷ್ಠವಾಗಿದ್ದು, ಆರೋಪಿಗಳಿಗೆ ಯಾವ ರೀತಿ ಕಠಿಣ ಶಿಕ್ಷೆಗೆ ಒಳಪಡಿಸಲಾಗುತ್ತದೆ ಎಂದು ಹೇಳಿದರು.
ಶ್ರೀಗುರು ವಿದ್ಯಾಪೀಠದ ಕಾರ್ಯದರ್ಶಿ ಶಿವರಾಜ ಡಿಗ್ಗಾವಿ ಮಾತನಾಡಿ, ಕಾನೂನು ಅರಿತು ಮುನ್ನಡೆದರೆ ಸಮಸ್ಯೆಗಳನ್ನು ಸರಳವಾಗಿ ನಿಭಾಯಿಸಬಹುದು. ಕಾನೂನಿಗೆ ಗೌರವ ನೀಡಿದರೆ ವ್ಯಕ್ತಿತ್ವ ಬೆಳವಣಿಗೆಗೆ ಪೂರಕವಾಗುತ್ತದೆ. ಆದ್ದರಿಂದ ಪಠ್ಯದ ಜತೆ ಕಾನೂನು ಅರಿವನ್ನು ಹೊಂದುವುದು ಮುಖ್ಯವಾಗಿದೆ ಎಂದರು.
ಕಾಲೇಜಿನ ಪ್ರಾಂಶುಪಾಲ ಶರಣಗೌಡ ಬಿ. ಪಾಟೀಲ, ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಮುಖ್ಯಶಿಕ್ಷಕ ಪವಕುಮಾರ, ಉಪನ್ಯಾಸಕ ಮತ್ತು ಶಿಕ್ಷಕರು ಇದ್ದರು. ಶಿಕ್ಷಕ ರಾಜು ನಿರೂಪಿಸಿದರು.