ಪಾಂಡವಪುರ: ಬೇಬಿಬೆಟ್ಟದಲ್ಲಿ ನಡೆಯುತ್ತಿರುವ ಎಲ್ಲಾ ಅಕ್ರಮ, ಸಕ್ರಮ ಕಲ್ಲು ಗಣಿಗಾರಿಕೆ ಮತ್ತು ಸ್ಟೋನ್ ಕ್ರಷರ್‌ಗಳನ್ನು ನಿಷೇಧಿಸಲಾಗಿದೆ ಎಂದು ಉಪವಿಭಾಗಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹುಣಸೋಡು ಪ್ರಕರಣದ ನಂತರ ಕೇವಲ ಬೇಬಿಬೆಟ್ಟದಲ್ಲಿ ಮಾತ್ರವಲ್ಲ, ಪಾಂಡವಪುರ ಉಪವಿಭಾಗದ 4 ತಾಲೂಕುಗಳಲ್ಲಿ
ನಡೆಯುತ್ತಿರುವ ಕಲ್ಲು ಗಣಿಗಾರಿಕೆ ಮೇಲೆ ದಾಳಿ ನಡೆಸಿ, ಅಕ್ರಮ ಕಲ್ಲುಗಣಿಗಾರಿಕೆ ಸ್ಥಗಿತಗೊಳಿಸಿದ್ದೇವೆ.
ಅಕ್ರಮವಾಗಿ ಗಣಿಗಾರಿಕೆ ಮಾಡುತ್ತಿರುವ ವ್ಯಕ್ತಿಗಳ ಮೇಲೆ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲು ಕ್ರಮವಹಿಸಲಾಗುತ್ತಿದೆ ಎಂದರು.
ಗಣಿ ಮಾಲೀಕರು ದಾಖಲೆ ಸಲ್ಲಿಸಿ: ಬೇಬಿಬೆಟ್ಟದಲ್ಲಿ 21 ಕ್ರಷರ್, 1 ಕಲ್ಲು ಗಣಿಗಾರಿಕೆ ಅನುಮತಿ ನೀಡಲಾಗಿತ್ತು. ಬೇಬಿಬೆಟ್ಟದ ಅನುಮತಿ ಪಡೆದಿರುವ 21 ಸ್ಟೋನ್ ಕ್ರಷರ್, 1 ಕಲ್ಲು ಕ್ವಾರಿ ಸೇರಿದಂತೆ ಗಣಿಗಾರಿಕೆ, ಸ್ಟೋನ್ ಕ್ರಷರ್‌ಗಳನ್ನು ನಿಷೇಧಿಸಲಾಗುತ್ತಿದೆ. ಅನುಮತಿ ಇರುವ ಗಣಿ ಹಾಗೂ ಕ್ರಷರ್ ಮಾಲೀಕರು ಎಲ್ಲಾ ದಾಖಲಾತಿಗಳನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿ, ಪರಿಶೀಲಿಸಿದ ನಂತರ ಗಣಿ ಅಧಿಕಾರಿಗಳಿಂದ ಅನುಮತಿ ಪಡೆಯುವವರೆಗೂ ಅಲ್ಲಿ ಯಾವುದೇ ಚಟುವಟಿಕೆ ನಡೆಸುವಂತಿಲ್ಲ. ಕಲ್ಲುಗಣಿಗಾರಿಕೆ, ಕ್ರಷರ್ ನಡೆಸುವುದು ಕಂಡುಬಂದರೆ ಅಂವರ ವಿರುದ್ಧ ದೂರು ದಾಖಲಿಸಲಾಗುವುದು ಎಂದು ಎಚ್ಚರಿಸಿದರು.
ಇದನ್ನೂ ಓದಿ:ಕೆಂಪುಕೋಟೆಗೆ ನುಗ್ಗಿದ ರೈತರು: ಧ್ವಜಸ್ತಂಭ ಏರಿ ರೈತ ಬಾವುಟ ಹಾರಿಸಿದ ರೈತರು!
ಪ್ರತ್ಯೇಕ ಅಧಿಕಾರಿ ತಂಡ ನಿಯೋಜನೆ: ಗಣಿಗಾರಿಕೆ ತಡೆಗೆ ಬೇಬಿಬೆಟ್ಟದ ಪ್ರದೇಶದಲ್ಲಿ ಎರಡು ಪ್ರತ್ಯೇಕ ಅಧಿಕಾರಿ ತಂಡ ನಿಯೋಜಿಸಲಾಗುತ್ತಿದೆ. ಅಧಿಕಾರಿಗಳ ತಂಡ ದಿನದ 24 ಗಂಟೆ ಕಾರ್ಯಾಚರಣೆ ನಡೆಸಲಿದ್ದಾರೆ. ಅಕ್ರಮ ಕಲ್ಲು ಗಣಿಗಾರಿಕೆ, ಕಲ್ಲು ಸಾಗಾಣಿಕೆ ನಡೆಸುವುದು ಕಂಡುಬಂದರೆ ತಕ್ಷಣವೇ ಸ್ಥಳೀಯರು, ಸಾರ್ವಜನಿಕರು ಕಂಟ್ರೋಲ್ ರೂಂ ಅಥವಾ ಅಧಿಕಾರಿಗಳು ಮಾಹಿತಿ ನೀಡಿದರೆ ತಕ್ಷಣವೇ ಸ್ಥಳಕ್ಕೆ ತೆರಳಿ ಕ್ರಮವಹಿಸಲಿದ್ದಾರೆ. ತಹಶೀಲ್ದಾರ್ ಪ್ರಮೋದ್ ಎಲ್.ಪಾಟೀಲ್- 7022386586, ಗಣಿ ಮತ್ತು ಭೂ ವಿಜ್ಞಾನಿ ಪುಷ್ಪ-8152072000, ಗಣಿ ಅಧಿಕಾರಿ ನಟಶೇಖರ್ -7892520614 ಹಾಗೂ ಕಂಟ್ರೋಲ್ ರೂಂ
ನಂ.08236-255128 ಸಾರ್ವಜನಿಕರು ಸಂಪರ್ಕಿಸಿ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ತಹಶೀಲ್ದಾರ್ ಪ್ರಮೋದ್ ಎಲ್ .ಪಾಟೀಲ್, ಸರ್ಕಲ್ ಇನ್ಸ್‌ಪೆಕ್ಟರ್ ಕೆ.ಪ್ರಭಾಕರ್ ಸೇರಿದಂತೆ ಗಣಿ ಅಧಿಕಾರಿಗಳು ಹಾಜರಿದ್ದರು.