Advertisement

ಪಿಒಪಿ ಗಣಪನ ಬಳಸಿದರೆ ಕಾನೂನು ಕ್ರಮ

12:37 PM Aug 17, 2017 | Team Udayavani |

ದಾವಣಗೆರೆ: ಈ ಬಾರಿಯ ಗಣೇಶೋತ್ಸವದಲ್ಲಿ ಯಾವುದೇ ಕಾರಣಕ್ಕೂ ಪ್ಯಾಸ್ಟರ್‌ ಆಫ್‌ ಪ್ಯಾರೀಸ್‌ (ಪಿಒಪಿ) ಗಣೇಶಮೂರ್ತಿಗಳಿಗೆ ಅವಕಾಶ ನೀಡುವುದೇ ಇಲ್ಲ. ಎಲ್ಲಿದ್ದರೂ ವಶಕ್ಕೆ ಪಡೆದು, ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಿ.ಎಸ್‌. ರಮೇಶ್‌ ಎಚ್ಚರಿಸಿದ್ದಾರೆ.

Advertisement

ಬುಧವಾರ ಜಿಲ್ಲಾ ಪೊಲೀಸ್‌ ಕಚೇರಿ ಸಭಾಂಗಣದಲ್ಲಿ ಗಣೇಶ ಹಾಗೂ ಬಕ್ರೀದ್‌ ಹಿನ್ನೆಲೆಯಲ್ಲಿ ಆಯೋಜಿಸಿದ್ದ ನಾಗರಿಕ ಸೌಹಾರ್ದ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಒಂದು ಪ್ಯಾಸ್ಟರ್‌ ಆಫ್‌ ಪ್ಯಾರೀಸ್‌(ಪಿಒಪಿ) ಗಣೇಶಮೂರ್ತಿಯನ್ನ ಕೆರೆಯಲ್ಲಿ ವಿಸರ್ಜಿಸಿದರೆ ಆ ಕೆರೆ ನೀರನ್ನು ಬಳಸಲು ಬರುವುದೇ ಇಲ್ಲ. ಪರಿಸರ ಮಾಲಿನ್ಯಕ್ಕೆ ಕಾರಣವಾಗುವ ಪ್ಯಾಸ್ಟರ್‌ ಆಫ್‌ ಪ್ಯಾರೀಸ್‌ (ಪಿಒಪಿ) ಗಣೇಶಮೂರ್ತಿ ಮಾರಾಟಗಾರರ ವಿರುದ್ಧ
ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ಕಳೆದ 6 ತಿಂಗಳಿನಿಂದ ಜಿಲ್ಲೆಯ 154 ಗ್ರಾಮಗಳಲ್ಲಿ ಟ್ಯಾಂಕರ್‌ ಮೂಲಕ ನೀರು ಒದಗಿಸಲಾಗುತ್ತಿದೆ. ಕುರುಡಿ, ಹೆಮ್ಮನಬೇತೂರು ಮುಂತಾದ ಕಡೆ 1 ಸಾವಿರ ಅಡಿ ಬೋರ್‌ ಕೊರೆಸಿದರೂ ನೀರು ಸಿಗದಂತ ಗಂಭೀರ ಸ್ಥಿತಿ ಇದೆ. ಏಷ್ಯಾದ 2ನೇ ಅತಿ ದೊಡ್ಡ ಕೆರೆ ಸೂಳೆಕೆರೆಯಲ್ಲೇ ನೀರಿಲ್ಲ. ಪರಿಸ್ಥಿತಿ
ಹೀಗಿರುವಾಗ ಇಡೀ ಕೆರೆಯ ನೀರಿಗೆ ಹಾನಿ ಉಂಟು ಮಾಡುವಂತಹ ಪಿಒಪಿ ಗಣಪತಿ ಬೇಕಾ ಎಂಬುದನ್ನು ಸಂಘ, ಸಂಸ್ಥೆಗಳು, ಸಾರ್ವಜನಿಕರು ಪ್ರಶ್ನಿಸಿಕೊಳ್ಳಬೇಕಿದೆ. ನನ್ನ ಪ್ರಕಾರ ಎಲ್ಲರ ಮನೆಯಲ್ಲಿ ಗಣೇಶನನ್ನು ಕೂರಿಸಬೇಕು. ಅಂದರೆ ಅವು ಸಣ್ಣದ್ದಾಗಿ, ಬಕೆಟ್‌ ನೀರಿನಲ್ಲೇ ವಿಸರ್ಜನೆ ಮಾಡುವಂತಿರಬೇಕು. ನಮ್ಮ ಆಲೋಚನಾ ಪದ್ಧತಿ ಬದಲಾಗಬೇಕು. ಪರಿಸರಸ್ನೇಹಿ ಗಣಪನ ಹುಡುಕಿ ಪ್ರಶಸ್ತಿ ಕೊಡುವುದು ದೊಡ್ಡದೇನೆಲ್ಲ ಎಂದು ತಿಳಿಸಿದರು.

ಗಣೇಶೋತ್ಸವ ಒಳಗೊಂಡಂತೆ ಯಾವುದೇ ಸಂದರ್ಭದಲ್ಲಿ ಅನುಮತಿ ಇಲ್ಲದೆ ಎಲ್ಲೆಂದರೆಲ್ಲಿ ಫ್ಲೆಕ್ಸ್‌ ಹಾಕಲು ಅವಕಾಶ ನೀಡದೇ ಮಹಾನಗರ ಪಾಲಿಕೆಯವರು ತೆರವುಗೊಳಿಸಬೇಕು. ಭೇದಭಾವ ಮಾಡುತ್ತಿದ್ದಾರೆ ಎಂಬ ಭಾವನೆ ಬರದಂತೆ ಎಲ್ಲದರ ಬಗ್ಗೆ ಸಮಾನ ಕ್ರಮ ತೆಗೆದುಕೊಳ್ಳಬೇಕು. ಹಬ್ಬದ ಸಂದರ್ಭದಲ್ಲಿ ಉಂಟಾಗುವ ಬಸ್‌ ಸೌಲಭ್ಯದ ಸಮಸ್ಯೆಯ ಬಗ್ಗೆ ಸಾರಿಗೆ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು
ತಿಳಿಸಿದರು.

ಜಿಲ್ಲಾ ರಕ್ಷಣಾಧಿಕಾರಿ ಡಾ| ಭೀಮಾಶಂಕರ್‌ ಎಸ್‌. ಗುಳೇದ್‌ ಮಾತನಾಡಿ, ಸಾರ್ವಜನಿಕ ಗಣೇಶೋತ್ಸವ ಸಮಿತಿಯವರು 10 ಲಕ್ಷ ರೂಪಾಯಿ ಬಾಂಡ್‌ ಇಡಬೇಕು ಎಂಬುದು ಸುಳ್ಳು ಸುದ್ದಿ. ಆ ರೀತಿಯ ಯಾವುದೇ ಆದೇಶ ಬಂದಿಲ್ಲ. ಯಾರಿಂದಲೂ ಬಾಂಡ್‌ ಕೇಳಿಯೂ ಇಲ್ಲ. ಇಲಾಖೆಗೆ ಯಾವುದೇ ಸಮುದಾಯದ ಧಾರ್ಮಿಕ ಭಾವನೆ ಹತ್ತಿಕ್ಕಬೇಕು ಎಂಬ ಇರಾದೆ ಇರುವುದೇ ಇಲ್ಲ. ಬೇರೆ ಎಲ್ಲಿಯೋ ಘಟನೆಯನ್ನು ಇಲ್ಲಿಗೆ ತಳಕು ಹಾಕಬಾರದು. ಉದ್ರೇಕಕಾರಿ, ಪ್ರಚೋದನಕಾರಿ ಹೇಳಿಕೆಯ ಫ್ಲೆಕ್ಸ್‌ ಹಾಕಿದ್ದು ಕಂಡು ಬಂದಲ್ಲಿ ಸಂಬಂಧಿತರ ಹಾಗೂ ಆ ಫ್ಲೆಕ್ಸ್‌ ಪ್ರಿಂಟ್‌ ಮಾಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಿದರು.

Advertisement

ದಾವಣಗೆರೆಯ ಹಳೆ ಭಾಗದಲ್ಲಿ 240, ಹೊಸ ಭಾಗದಲ್ಲಿ 231 ಸಾರ್ವಜನಿಕ ಗಣೇಶ ಪ್ರತಿಷ್ಠಾಪಿಸಲಾಗುತ್ತಿದೆ. ಪರವಾನಿಗೆ ಮತ್ತಿತರ ದಾಖಲೆಗಳ ಅನುಕೂಲಕ್ಕಾಗಿ ನಗರ ಮತ್ತು ಕೇಂದ್ರ ವೃತ್ತ ಕಚೇರಿಯಲ್ಲಿ ಏಕಗವಾಕ್ಷಿ ಕೇಂದ್ರ ಪ್ರಾರಂಭಿಸಲಾಗುವುದು. ಹಬ್ಬಗಳ ಉದ್ದೇಶ ಶಾಂತಿ ಮತ್ತು ಸೌಹಾರ್ದತೆ. ಅದರಂತೆ ಹಬ್ಬಗಳ ಆಚರಣೆಗೆ ಎಲ್ಲರೂ ಸಹಕರಿಸಬೇಕು. ಚನ್ನಗಿರಿಯ ಮಾದರಿಯಲ್ಲಿ ಒಂದೇ ಕಡೆ ಸಾರ್ವಜನಿಕ ಗಣೇಶೋತ್ಸವ ಮಾಡುವಂತಾಗಬೇಕು ಎಂದು ಮನವಿ ಮಾಡಿದರು.

ಹಿಂದೂ ಸಮಾಜದ ಮುಖಂಡ ಕೆ.ಬಿ. ಶಂಕರನಾರಾಯಣ, ಮುಸ್ಲಿಂ ಸಮಾಜದ ಮುಖಂಡ ಸಾದಿಕ್‌ ಪೈಲ್ವಾನ್‌, ಎಪಿಎಂಸಿ ನಿರ್ದೇಶಕ ಎನ್‌.ಜೆ. ಪುಟ್ಟಸ್ವಾಮಿ, ಯುವ ಜೆಡಿಎಸ್‌ ಜಿಲ್ಲಾ ಅಧ್ಯಕ್ಷ ಜೆ. ಅಮಾನುಲ್ಲಾಖಾನ್‌, ಸತೀಶ್‌ ಪೂಜಾರಿ, ಅವಿನಾಶ್‌, ಗಿರೀಶ್‌ ಎಸ್‌. ದೇವರಮನೆ, ಎಂ.ಜಿ. ಶ್ರೀಕಾಂತ್‌, ಎನ್‌. ನೀಲಗಿರಿಯಪ್ಪ ಇತರರು ತಮ್ಮ ಅಭಿಪ್ರಾಯ, ಸಲಹೆ, ಸೂಚನೆ ನೀಡಿದರು.

ಮಹಾನಗರ ಪಾಲಿಕೆ ಆಯುಕ್ತ ಜಿ.ಎಂ. ರವೀಂದ್ರ, ಜಿಲ್ಲಾ ಆರೋಗ್ಯಾಧಿಕಾರಿ ಡಾ| ಎಂ.ಎಸ್‌. ತ್ರಿಪುಲಾಂಬ, ಜಿಲ್ಲಾ ಆಸ್ಪತ್ರೆ ಅಧೀಕ್ಷಕಿ ಡಾ| ಎಚ್‌.ಡಿ. ನೀಲಾಂಬಿಕೆ ಇತರರು ಇದ್ದರು. ಹೆಚ್ಚುವರಿ ಪೊಲೀಸ್‌ ಅಧೀಕ್ಷಕಿ ಯಶೋಧಾ ಎಸ್‌. ವಂಟಿಗೋಡಿ ಸ್ವಾಗತಿಸಿದರು. ವೃತ್ತ ನಿರೀಕ್ಷಕ
ಇ. ಆನಂದ್‌ ನಿರೂಪಿಸಿದರು.

ಸ್ವಯಂ ನಿಯಂತ್ರಣವಿರಲಿ…
ಹಿಂದೆಲ್ಲಾ ಡಿಜೆ ಇರದೇ ಇದ್ದಾಗಲೂ ಗಣೇಶ ಹಬ್ಬ ಮಾಡಲಾಗುತ್ತಿತ್ತು. ಈಗ ಡಿಜೆ ಬಂದಿದೆ. ಜಿಲ್ಲಾಡಳಿತ ಡಿಜೆ ಬಳಕೆ ನಿಷೇಧಿಸುವುದಿಲ್ಲ. ಆದರೆ, ಕಾನೂನು ಪ್ರಕಾರ ಯಾವಾವ ಪ್ರದೇಶದಲ್ಲಿ ಎಷ್ಟೆಷ್ಟು ಡೆಸಿಬಲ್‌ ಸೌಂಡ್‌ ಇರಬೇಕೋ ಅದೇ ರೀತಿ ಬಳಕೆ ಮಾಡಬೇಕು. ಯಾವುದೇ
ಕಾರಣಕ್ಕೂ ಕಾನೂನು ಮೀರುವಂತಿಲ್ಲ. ಕಾನೂನುಗಿಂತಲೂ ಸಂಘ-ಸಂಸ್ಥೆಯವರೇ ಸ್ವಯಂ ನಿಯಂತ್ರಣದೊಂದಿಗೆ ಡಿಜೆ ಬಳಕೆ ಮಾಡಬೇಕು. ಡಿಜೆ ಬಳಕೆಯಿಂದ ಸಂಘಟಕರ ಮನೆಯವರಿಗೆ ತೊಂದರೆ ಆಗಬಹುದು ಅಥವಾ ಇನ್ನಾರಿಗೋ ಆಗಬಹುದು. ತೊಂದರೆ ಆದ ಮೇಲೆ ಬಳಕೆ ನಿಲ್ಲಿಸುವುದಕ್ಕಿಂತಲೂ ಅದಕ್ಕಿಂತಲೂ ಮೊದಲೇ ನಿಲ್ಲಿಸುವಂತಾಗಬೇಕು ಎಂದು ಜಿಲ್ಲಾಧಿಕಾರಿ ಡಿ.ಎಸ್‌. ರಮೇಶ್‌ ಸೂಕ್ಷ್ಮವಾಗಿ ಎಚ್ಚರಿಸಿದರು.

ಕಾನೂನು ರೀತ್ಯಾ ಡಿಜೆ ಬಳಸಿ…
ಕರ್ನಾಟಕ ಪೊಲೀಸ್‌ ಕಲಂ 36, Noise Pollution (Regulation and Control) Rules 2000 & Environment (Protection) Act  1986 ಪ್ರಕಾರ ವಸತಿ, ಕೈಗಾರಿಕೆ, ನಿಶ್ಯಬ್ದ ವಲಯಗಳಲ್ಲಿ ಡಿಜೆಯ ಡೆಸಿಬಲ್‌ ಪ್ರಮಾಣ ನಿಗದಿಪಡಿಸಲಾಗಿದೆ. ಕಾನೂನು ಪ್ರಕಾರ ಡಿಜೆ ಸೌಂಡ್‌ ಇದ್ದಲ್ಲಿ ಕ್ರಮ ತೆಗೆದುಕೊಳ್ಳುವುದಿಲ್ಲ. ಕಾನೂನು ಉಲ್ಲಂಘನೆ ಮಾಡಿದ್ದು ಕಂಡು ಬಂದಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು. ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚೋದನಕಾರಿ ಹೇಳಿಕೆಯನ್ನು ಫಾವರ್ಡ್‌ ಮಾಡುವುದಾಗಲಿ, ಲೈಕ್‌ ಮಾಡುವುದಾಗಲಿ ತಪ್ಪು. ಅದರ ವಿರುದ್ಧವೂ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾ ರಕ್ಷಣಾಧಿಕಾರಿ ಡಾ| ಭೀಮಾಶಂಕರ್‌ ಎಸ್‌. ಗುಳೇದ್‌ ಎಚ್ಚರಿಕೆಗೆ ಪೂರಕವಾಗಿ ಮಾತನಾಡಿದ ಜಿಲ್ಲಾಧಿಕಾರಿ
ಡಿ.ಎಸ್‌. ರಮೇಶ್‌, ಪ್ರಚೋದನಕಾರಿ, ಅವಹೇಳನಕಾರಿ ಹೇಳಿಕೆಯನ್ನು ಫಾವರ್ಡ್‌ ಮಾಡುವುದು ಮಾತ್ರವಲ್ಲ ಅದನ್ನು ನೋಡವುದೇ ಕಾನೂನು ಪ್ರಕಾರ ತಪ್ಪು ಎಂದು ಎಚ್ಚರಿಸಿದರು.

ಮಳೆಗಾಗಿ ಪ್ರಾರ್ಥನೆ..
ಬುಧವಾರ ಜಿಲ್ಲಾ ಪೊಲೀಸ್‌ ಕಚೇರಿ ಸಭಾಂಗಣದಲ್ಲಿ ಗಣೇಶ ಹಾಗೂ ಬಕೀದ್‌ ಹಿನ್ನೆಲೆಯಲ್ಲಿ ನಡೆದ ನಾಗರಿಕ ಸೌಹಾರ್ದ ಸಭೆಯ ಅಂತ್ಯದಲ್ಲಿ ಸರ್ವರೂ ದಾವಣಗೆರೆಯಲ್ಲಿ ಮಾತ್ರವಲ್ಲ ದೇಶದ್ಯಾಂತ ಉತ್ತಮ ಮಳೆಯಾಗಲಿ ಎಂದು ಸಾಮೂಹಿಕವಾಗಿ ಪ್ರಾರ್ಥಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next