Advertisement
ಸಾರ್ವಜನಿಕ ಹಿತದೃಷ್ಟಿಯಿಂದ ಹಲವು ಕಡೆ ಕರ್ತವ್ಯಕ್ಕೆ ಹಾಜರಾಗುತ್ತಿದ್ದ ನಮ್ಮ ನೌಕರರನ್ನು ತಡೆಗಟ್ಟುವ ಪ್ರಯತ್ನಕ್ಕೆ ಮತ್ತು ಅವರ ಮೇಲೆ ಹಲ್ಲೆ ನಡೆಸುವುದಕ್ಕೆ ಕೆಲವರು ಮುಂದಾಗಿದ್ದು, ಅಂಥವರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಕುರಿತು ಪೊಲೀಸ್ ಠಾಣೆಗಳಲ್ಲೂ ಪ್ರಕರಣ ದಾಖಲಾಗಿವೆ. ಮುಂದೆಯೂ ಇದೇ ರೀತಿ ಪ್ರಕರಣಗಳು ವರದಿಯಾದರೆ ಸಂಬಂಧಪಟ್ಟ ಪೊಲೀಸ್ ಠಾಣೆಗೆ ದೂರು ದಾಖಲಿಸಲು ಮತ್ತು ನಮ್ಮ ನಿಗಮಗಳ ಅಧಿಕಾರಿಗಳ ಗಮನಕ್ಕೆ ತರಲು ಕೋರುತ್ತೇನೆ ಹಾಗೂ ಕರ್ತವ್ಯಕ್ಕೆ ಹಾಜರಾದ ನಮ್ಮ ಸಿಬ್ಬಂದಿಗಳಿಗೆ ಜೀವಬೆದರಿಕೆ ಎದುರಾದಾಗಲೂ ಎದೆಗುಂದದೆ ಸಾರ್ವಜನಿಕರಿಗೆ ಸಾರಿಗೆ ಸೇವೆ ಕಲ್ಪಿಸುವಲ್ಲಿ ಬದ್ಧತೆ ತೋರಿದ ನೌಕರರ ಮತ್ತು ಅಧಿಕಾರಿಗಳ ಕರ್ತವ್ಯ ಪ್ರಜ್ಞೆಯನ್ನು ನಮ್ಮ ಸರ್ಕಾರ ಮುಕ್ತಕಂಠದಿಂದ ಪ್ರಶಂಸಿಸುತ್ತದೆ.
Related Articles
Advertisement
ಪ್ರಸ್ತುತ ಕೋವಿಡ್ 2ನೇ ಅಲೆಯ ಅಪಾಯದ ಸಂದರ್ಭ ಎದುರಾಗಿದೆ. ಅಷ್ಟೇಅಲ್ಲ ಯುಗಾದಿ ಪ್ರಯುಕ್ತ ನೌಕರ ವರ್ಗದವರು ಮತ್ತು ವಿದ್ಯಾರ್ಥಿಗಳು, ಮತ್ತಿತರರು ತಮ್ಮ ಊರುಗಳಿಗೆ ತೆರಳಬೇಕಾದ ಅನಿವಾರ್ಯತೆ ಇರುವ ಪ್ರಯುಕ್ತ ಅವರಿಗೆ ಅನುಕೂಲವಾಗಲು ನೌಕರರು ಕೂಡಲೇ ಕರ್ತವ್ಯಕ್ಕೆ ಮರಳಬೇಕು. ಚುನಾವಣಾ ನೀತಿ ಸಂಹಿತೆಯ ಅವಧಿ ಮುಕ್ತಾಯಗೊಂಡ ನಂತರ ನಮ್ಮ ನೌಕರ ಬಾಂಧವರ ವೇತನ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ನಾವು ಹಲವಾರು ಬಾರಿ ಮುಷ್ಕರ ನಿರತ ನೌಕರರಲ್ಲಿ ಈಗಾಗಲೇ ಮನವಿ ಮಾಡಿಕೊಂಡಿದ್ದೇವೆ. ಆದರೆ ಇದಕ್ಕೆ ಕೆಲವು ಹೊರಗಿನ ಪಟ್ಟಭದ್ರ ಹಿತಾಸಕ್ತಿಗಳು ಹುಳಿಹಿಂಡುತ್ತಾ ಸಮಸ್ಯೆಯನ್ನು ಮತ್ತಷ್ಟು ಜಟಿಲಗೊಳಿಸುತ್ತಿದ್ದಾರೆ. ಇದರಿಂದಾಗಿ ದಿನದಿಂದ ದಿನಕ್ಕೆ ಈ ಮುಷ್ಕರವು ಸಾರ್ವಜನಿಕರ ಸಹಾನುಭೂತಿಯನ್ನೂ ಕಳೆದುಕೊಳ್ಳುತ್ತಿದೆ.
ಇದರಿಂದ ಹತಾಶೆಗೊಂಡಿರುವ ಕೆಲವರು ದಿನದಿಂದ ದಿನಕ್ಕೆ ವಾಮಮಾರ್ಗದ ಪ್ರತಿಭಟನೆಗೆ ಕುಮ್ಮಕ್ಕು ನೀಡುತ್ತಾ ಸಾರ್ವಜನಿಕರ ದೃಷ್ಟಿಯಲ್ಲಿ ನಗೆಪಾಟಲಿಗೆ ಈಡಾಗುತ್ತಿದ್ದಾರೆ. ಇದು ಕಂಡವರ ಮಕ್ಕಳನ್ನು ಬಾವಿಗೆ ತಳ್ಳಿ ಖುಷಿಪಡುವ ಯತ್ನ ಎಂಬ ಕಟುಸತ್ಯವನ್ನು ಮುಷ್ಕರನಿರತ ಸಾರಿಗೆ ನೌಕರರು ಅರ್ಥ ಮಾಡಿಕೊಳ್ಳುವುದು ಅಗತ್ಯ. ಆದಷ್ಟೂ ಸಹನೆಯಿಂದ ಈ ಸಮಸ್ಯೆಯನ್ನು ಬಗೆಹರಿಸಲು ಅತ್ಯಂತ ವಿವೇಚನೆಯಿಂದ ಸರ್ಕಾರವು ಹೆಜ್ಜೆ ಇಡುತ್ತಿದೆ. ಆದರೆ ಇದನ್ನು ನಮ್ಮ ದೌರ್ಬಲ್ಯ ಎಂದು ಯಾರೂ ಪರಿಗಣಿಸಬಾರದು ಮತ್ತು ನಮ್ಮ ತಾಳ್ಮೆಯನ್ನು ಮತ್ತಷ್ಟು ಪರೀಕ್ಷಿಸಲು ಯಾರಾದರೂ ಮುಂದಾದರೆ ಅಂಥವರ ವಿರುದ್ಧ ಮುಂದಿನ ಕ್ರಮಗಳು ಮತ್ತಷ್ಟು ಗಂಭೀರವಾಗಿರುತ್ತದೆ ಎಂದು ಮತ್ತೊಮ್ಮೆ ಎಚ್ಚರಿಕೆ ನೀಡಲು ಬಯಸುತ್ತೇನೆ.
ಇದು ಬೇವು ಬೆಲ್ಲದ ಹಬ್ಬವಾದ ಯುಗಾದಿಯ ಪುಣ್ಯ ಸಂದರ್ಭ. ಈ ಸಂದರ್ಭದಲ್ಲಿ ನಮ್ಮ ಸಾರಿಗೆ ನೌಕರರ ಬದುಕಿನಲ್ಲಿ ಬೇವಿಗಿಂತ ಬೆಲ್ಲದ ಸಿಹಿಯೇ ಹೆಚ್ಚು ಸಿಗುವಂತಾಗಲಿ ಎಂದು ಶುಭ ಹಾರೈಸುತ್ತೇನೆ. ಆದ್ದರಿಂದ ಅವರ ಬದುಕಿನಲ್ಲಿ ಬೆಲ್ಲದ ಸವಿ ಹೆಚ್ಚಾಗಲು ಸಾರಿಗೆ ನೌಕರರು ಕೂಡಲೇ ತಮ್ಮ ಕರ್ತವ್ಯಕ್ಕೆ ಹಾಜರಾಗಿ ಜನರ ಪ್ರೀತಿ ವಿಶ್ವಾಸಕ್ಕೆ ಭಾಜನರಾಗಬೇಕೆಂದು ನಾನು ಪುನರುಚ್ಛರಿಸುತ್ತೇನೆ ಎಂದು ಲಕ್ಷ್ಮಣ ಸವದಿ ತಿಳಿಸಿದರು.