Advertisement

ಪರದೆ ಬಿಟ್ಟು ಎಲ್‌ಇಡಿ ಸ್ಕ್ರೀನ್‌ ಹಾದಿಯತ್ತ ಯಕ್ಷಗಾನ!

11:28 AM Jun 03, 2017 | |

ಜಗತ್ತು ಡಿಜಿಟಲೀಕರಣದತ್ತ ಸಾಗುತ್ತಿರುವ ಈ ಹೊತ್ತಿನಲ್ಲಿ, ಸಾಂಪ್ರದಾಯಿಕ ಜನಪದ ಕಲೆಗಳೂ ಬದಲಾವಣೆಗಳತ್ತ ಮುಖ ಮಾಡಿವೆ. ಯಕ್ಷಗಾನವೂ ಕೂಡ ಆಧುನಿಕ ಕಾಲಘಟ್ಟದಲ್ಲಿ ತನ್ನನ್ನು ತಾನು ಮರು ಅನ್ವೇಷಿಸಿಕೊಳ್ಳುತ್ತಾ ಸಾಗುತ್ತಿದೆ. ದೊಂದಿ ಬೆಳಕಿನಲ್ಲಿ, ಭಾರವಾದ ಅಟ್ಟೆಗಳನ್ನು ಕಟ್ಟಿಕೊಂಡು ಸಾಂಪ್ರದಾಯಿಕ ಕರಕುಶಲ ವೇಷಭೂಷಣಗಳನ್ನು ಧರಿಸಿ ಪ್ರದರ್ಶನ ನೀಡುವ ಕಾಲವೊಂದಿತ್ತು. ಹಾಗೆ ಆಡುತ್ತಿದ್ದ ಪ್ರಸಂಗಗಳನ್ನು ನೋಡಲೆಂದು ಮನೆ ಮಂದಿ ಸಮೇತ ಚಾಪೆ, ದಿಂಬುಗಳನ್ನು ಹೊತ್ತು ತಂದು ರಂಗದ ಮುಂದೆಯೇ ರಾತ್ರಿಯಿಡೀ ಕುಳಿತುಬಿಡುತ್ತಿದ್ದ ಕಾಲ ಅದು. 

Advertisement

ಈಗ ಕಾಲ ಬದಲಾಗಿದೆ. ಬಣ್ಣ ಬಣ್ಣದ ವಿದ್ಯುದ್ದೀಪದಡಿಯಲ್ಲಿ, ರೆಡಿಮೇಡ್‌ ಹಗುರ ವೇಷಭೂಷಣಗಳೊಂದಿಗೆ ಕಲಾವಿದರು ರಂಗಕ್ಕಿಳಿದರೆ, ಪ್ರೇಕ್ಷಕರು ಸುಖಾಸೀನದಲ್ಲಿ ಕುಳಿತು ವೀಕ್ಷಿಸುವವರೆಗೆ ಕಾಲ ಬದಲಾಗಿದೆ. ಪರಿಕರ, ಸಾಮಗ್ರಿಗಳು ಬದಲಾಗಿದ್ದರೂ ಯಕ್ಷಗಾನವನ್ನು ನೋಡುವ ಆ ತುಡಿತ ಮಾತ್ರ ಬದಲಾಗಿಲ್ಲ. ಈಗಲೂ ಅದೇ ಹುಮ್ಮಸ್ಸಿನಿಂದ ಈ ಕಲೆಯನ್ನು ಪ್ರೋತ್ಸಾಹಿಸುವ ಜನರಿಂದಲೇ ಈ ಕಲೆ ಉಳಿದುಕೊಂಡು ಬಂದಿರುವುದು.

ನಗರದಲ್ಲೊಂದು ಯಕ್ಷಗಾನ ಪ್ರದರ್ಶನ ಆಯೋಜನೆಗೊಂಡಿದೆ. ಕಲಾಧರ ಯಕ್ಷರಂಗ ಬಳಗ, ಜಲವಳ್ಳಿ ಮತ್ತು ರಾಘವೇಂದ್ರ ಚಾತ್ರಮಕ್ಕಿ ಸಂಯೋಜನೆಯಲ್ಲಿ “ರಂಗಾಂತರಂಗ-3′ ಯಕ್ಷಗಾನ ಮೇಳವನ್ನು ಆಯೋಜಿಸಲಾಗಿದೆ. ಮೇಳದಲ್ಲಿ ಮೂರು ಪ್ರಸಂಗಗಳು ಯಕ್ಷಪ್ರಿಯರನ್ನು ತಣಿಸಲು ಕಾದಿವೆ. ಏಕಲವ್ಯ, ಅಭಿಮನ್ಯು, ಪರಶುರಾಮ ಎಂಬ ಮೂರು ಪೌರಾಣಿಕ ಪ್ರಸಂಗಗಳೇ ಅವು.

ಯಕ್ಷಗಾನದ ಹಿಮ್ಮೇಳದಲ್ಲಿ ಕೊಳಗಿ, ಸುರೇಶ್‌ ಶೆಟ್ಟಿ, ಬಾಳ್ಕಲ್‌, ಕೆಸರ್‌ಕೊಪ್ಪ, ಎನ್‌. ಈ. ಹೆಗಡೆ, ಮುಮ್ಮೇಳದಲ್ಲಿ ಐರ್‌ಬೈಲ್‌, ಸು. ಚಿಟ್ಟಾಣಿ, ಹಳ್ಳಾಡಿ, ಹೆನ್ನಾಬೈಲ್‌, ಕಟ್ಟೆ, ಚಪ್ಪರಮನೆ, ಯಲಗುಪ್ಪ, ನಾಗೂರು, ಉಪ್ಪೂರು ಮುಂತಾದವರಿದ್ದಾರೆ. ಅತಿಥಿಗಳಾಗಿ ತೆಂಕಿನ ಮಾತಿನ ಮಲ್ಲ ಉಜಿರೆ, ದಿಗಿಣಗಳ ಸರದಾರ ಲೋಕೇಶ್‌ ಮಚ್ಚಾರು ಭಾಗವಹಿಸಲಿದ್ದಾರೆ. 

ಎಲ್‌ಇಡಿ ಸ್ಕ್ರೀನ್‌ ಪ್ರಯೋಗ
ಮುಂಚೆಯೇ ಹೇಳಿದಂತೆ ಕ್ಷಿಪ್ರ ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ಕಲೆಯನ್ನು ಉಳಿಸಿಕೊಳ್ಳಬೇಕಾದರೆ ಬದಲಾಣೆಗಳು ಅನಿವಾರ್ಯ. ಹೀಗಾಗಿ ಹೊಸದೊಂದು ಪ್ರಯೋಗಕ್ಕೆ ಮೇಳ ಸಾಕ್ಷಿಯಾಗಲಿದೆ. ರಂಗದ ಹಿನ್ನೆಲೆಯಲ್ಲಿ ಇರುತ್ತಿದ್ದ ಬಟ್ಟೆಯ ಪರದೆಗೆ ಬದಲಾಗಿ ಎಲ್‌ಇಡಿ ಸ್ಕ್ರೀನನ್ನು ಅಳವಡಿಸಲಾಗಿದೆ. ದೃಶ್ಯಗಳು ಬದಲಾಗುತ್ತಿದ್ದ ಹಾಗೆ ರಂಗದ ಮೇಲೆ ಸನ್ನಿವೇಶಕ್ಕೆ ತಕ್ಕಂತೆ ಹಿನ್ನೆಲೆಯಲ್ಲಿ ಹಾಕಲಾಗುವ ಪರದೆಯೂ ಬದಲಾಗುತ್ತಾ ಹೋಗುತ್ತವೆ. ಈ ಮೊದಲು ಕಾಡಿನ ಸನ್ನಿವೇಶಕ್ಕೆ ಮರಗಿಡಗಳ ಪರದೆ, ಯುದ್ಧದ ದೃಶ್ಯಕ್ಕೆ ರಣರಂಗದ ಪರದೆ, ಅರಮನೆಯ ಸನ್ನಿವೇಶಕ್ಕೆ ಆಸ್ಥಾನದ ದರ್ಬಾರಿನ ಪರದೆ ಹೀಗೆ ಬದಲಾಯಿಸುತ್ತಿದ್ದರು. ಈಗ ಪರದೆ ಬದಲಾಯಿಸುವ ಗೊಡವೆಯೇ ಬೇಡವೆಂದು ಎಲ್‌ಇಡಿ ಸ್ಕ್ರೀನನ್ನು ಅಳವಡಿಸುತ್ತಿದ್ದಾರೆ. ಸನ್ನಿವೇಶಕ್ಕೆ ತಕ್ಕ ಹಾಗೆ ಸ್ಕ್ರೀನ್‌ ಮೇಲೆ ಕಾಣಿಸಿಕೊಳ್ಳುವ ದೃಶ್ಯವೂ ಬದಲಾಗುತ್ತವೆ. 

Advertisement

 ಪ್ರದರ್ಶನಗೊಳ್ಳುತ್ತಿರುವ 3 ಪ್ರಸಂಗಗಳು
ಏಕಲವ್ಯ
ಅಭಿಮನ್ಯು
ಪರಶುರಾಮ 

ಎಲ್ಲಿ?: ರವೀಂದ್ರ ಕಲಾಕ್ಷೇತ್ರ, ಜೆ. ಸಿ. ರಸ್ತೆ
ಯಾವಾಗ? : ಜೂನ್‌ 3, ರಾತ್ರಿ 10
ಟಿಕೆಟ್‌: 200 ರೂ.ಯಿಂದ ಪ್ರಾರಂಭ

Advertisement

Udayavani is now on Telegram. Click here to join our channel and stay updated with the latest news.

Next