ಚಿಕ್ಕನಾಯಕನಹಳ್ಳಿ: ಸಚಿವ ಜೆ.ಸಿ.ಮಾಧುಸ್ವಾಮಿ ವಿರುದ್ಧ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳ ಪ್ರತಿಭಟನೆಗೆ ಕೆಲ ಉಪನ್ಯಾಸಕರ ಕುಮ್ಮಕ್ಕೇ ಕಾರಣ. ಉಪನ್ಯಾಸಕರ ವಿರುದ್ಧ ಕ್ರಮ ಜರುಗಿಸಬೇಕು ಎಂದು ರಾಜ್ಯ ಮಾದಿಗ ದಂಡೋರ ಸಮಿತಿ ಕಾರ್ಯದರ್ಶಿ ಬೇವಿನಹಳ್ಳಿ ಚನ್ನಬಸವಯ್ಯ ತಿಳಿಸಿದರು.
ಅಮಾನತುಗೊಳಿಸಿ: ಸರ್ಕಾರದಿಂದ ಮಂಜೂರಾಗಿರುವ ಜಗಜೀವನರಾಂ ಭವನ ಸ್ಥಳ ಪರಿಶೀಲನೆಯಲ್ಲಿದ್ದಾಗ ಪ್ರಾಂಶುಪಾಲರೇ ಕಾಲೇಜು ಆವರಣದಲ್ಲಿ ನಿರ್ಮಿಸಬಹುದು ಎದು ಮೌಕಿಕವಾಗಿ ಸಚಿವರಿಗೆ ತಿಳಿಸಿದ್ದಕ್ಕೆ ಸ್ಥಳ ಪರಿಶೀಲಿಸಿದ್ದರು. ನಂತರ ಕಾಲೇಜು ಅಭಿವೃದ್ಧಿ ಸಭೆಯಲ್ಲಿ ಕಾಲೇಜಿನ ಶೈಕ್ಷಣಿಕ ಪ್ರಗತಿ ಹಿನ್ನಡೆ ಬಗ್ಗೆ ಉಪನ್ಯಾಸಕರಿಗೆ ತರಾಟೆ ತೆಗೆದುಕೊಂಡರು. ಫಲಿತಾಂಶದ ಬಗ್ಗೆ ಗಮನ ನೀಡಬೇಕು ಎಂದು ಬುದ್ಧಿವಾದ ಹೇಳಿ ಸಭೆಯಿಂದ ನಿರ್ಗಮಿಸಿದ್ದರು.
ಕೆಲ ವಿದ್ಯಾರ್ಥಿಗಳ ಜೊತೆ ಮತ್ತೆ ಸಭೆ ನಡೆಸಿ ಉಪನ್ಯಾಸಕರು ಬಾಬು ಜಗಜೀವನರಾಂ ಭವನಕ್ಕೆ ಜಾಗ ನೀಡುವುದಿಲ್ಲ ಎಂದು ತಿಳಿಸಿದ್ದಕ್ಕೆ ಸಚಿವರು ಪ್ರಗತಿ ಪರಿಶೀಲನೆ ಸಭೆ ನೆಪ ಮಾಡಿ ನಿಂದಿಸಿದರು ಎಂದು ಅಪಪ್ರಚಾರ ಮಾಡಿ ವಿದ್ಯಾರ್ಥಿಗಳನ್ನು ಕೆರಳುವಂತೆ ಮಾಡಿದ್ದಾರೆ. ಅಂತಹ ಉಪನ್ಯಾಸಕರ ವಿರುದ್ಧ ಕ್ರಮ ಜರುಗಿಸಿ ಕೆಲಸದಿಂದ ಅಮಾನತುಗೊಳಿಸಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಅಂಬೇಡ್ಕರ್ ಶಿಕ್ಷಣ ಸಂಸ್ಥೆ ಕಾರ್ಯಾದರ್ಶಿ ಗೋನಿ ವಸಂತಕುಮಾರ್ ಮಾತನಾಡಿ, ಭವನದಿಂದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರಗತಿಗೆ ಪೂರಕ ಆಡಿಟೋರಿಯಂ ನಿರ್ಮಿಸಿ ಗ್ರಂಥಾಲಯ, ಅಂಬೇಡ್ಕರ್ ಅಧ್ಯಯನ ಪೀಠ ಸ್ಥಾಪಿಸುವ ಉದ್ದೇಶವಿತ್ತು. ಮದುವೆ, ನಾಮಕರಣ ಇತರ ಸಮಾರಂಭಗಳಿಗೆ ಭವನ ನೀಡುವ ಉದ್ದೇಶವಿರಲಿಲ್ಲ ಎಂದರು. ತಾಲೂಕು ಮಾದಿಗ ದಂಡೋರ ಅಧ್ಯಕ್ಷ ಗೋವಿಂದರಾಜ್ , ಡಿ.ಎಸ್.ಎಸ್ ಅಧಕ್ಷ ಚಂದ್ರಶೇಖರ್ , ಬೆಳಗೀಹಳ್ಳಿ ರಾಜು ಇತರರಿದ್ದರು.
ಭವನ ನಿರ್ಮಾಣಕ್ಕೆ ವಿರೋಧವಿಲ್ಲ
ಚಿಕ್ಕನಾಯಕನಹಳ್ಳಿ: ಪಟ್ಟಣದಲ್ಲಿ ಬಾಬು ಜಗಜೀವನರಾಂ ಭವನ ನಿರ್ಮಾಣವಾಗುತ್ತಿರುವುದು ಸಂತೋಷದ ವಿಷಯ. ಕಾಲೇಜಿನಲ್ಲಿ ಎಲ್ಲಾ ಜಾತಿಯ ವಿದ್ಯಾರ್ಥಿಗಳಿದ್ದಾರೆ. ಭವನ ನಿರ್ಮಾಣ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಿಲ್ಲ ಎಂದು ಕಾಲೇಜಿನ ವಿದ್ಯಾರ್ಥಿಗಳು ತಿಳಿಸಿದ್ದಾರೆ.
ಖಾಸಗಿ ಕಾಲೇಜುಗಳ ಪೈಪೋಟಿಯಲ್ಲಿ ಸರ್ಕಾರಿ ಕಾಲೇಜು ಶೈಕ್ಷಣಿಕವಾಗಿ ಪೈಪೋಟಿ ನೀಡಲು ಮೂಲಸೌಲಭ್ಯ ಪೂರೈಸಲು ಹಾಗೂ ಪಿ.ಜಿ. ಕೋರ್ಸ್ ಪ್ರಾರಂಭಿಸುವ ಅವಶ್ಯಕತೆ ಇದೆ. ಅವೈಜ್ಞಾನಿಕವಾಗಿ ಈಗಾಗಲೇ ಕಟ್ಟಡ ನಿರ್ಮಿಸಿ ಜಾಗ ಹಾಳು ಮಾಡಿದ್ದಾರೆ. ಜಗಜೀವನರಾಂ ಭವನ ನಿರ್ಮಾಣವಾದರೆ ಮದುವೆ, ನಾಮಕರಣ, ಇತರ ಸಭೆ, ಸಮಾರಂಭಗಳು ನಡೆಸುವುದರಿಂದ ವಿದ್ಯಾರ್ಥಿಗಳಿಗೆ ಕಿರಿಕಿರಿ ಉಂಟಾಗುತ್ತದೆ.
ಭವನ ನಿರ್ಮಿಸಲು ತಿ.ನಂ.ಶ್ರೀ ಭವನ ಬಳಿ ಹಾಗೂ ರಾಯಪ್ಪನಪಾಳ್ಯ ಬಳಿ ಜಾಗವಿದೆ. ಅಲ್ಲಿ ನಿರ್ಮಾಣ ಮಾಡುವುದು ಸೂಕ್ತವಾಗಿದೆ. ದಲಿತ ವರ್ಗ, ಹಿಂದುಳಿದ ವರ್ಗದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಓದುತ್ತಿದ್ದಾರೆ. ಕಾಲೇಜಿನ ಬಳಿ ಭವನ ನಿರ್ಮಾಣ ಮಾಡಬೇಡಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.