Advertisement

ಉತ್ತಮ ಜೀವನಕ್ರಮದಿಂದ ಯಶಸ್ಸು: ಗೌರ್‌ ಗೋಪಾಲ್‌ ದಾಸ್‌ 

03:49 PM Oct 29, 2018 | |

ಮೂಡಬಿದಿರೆ : ಯಶಸ್ಸು ಎನ್ನುವುದು ನಾವು ಏನನ್ನು ಹೊಂದಿರುತ್ತೇವೆ ಎನ್ನುವುದನ್ನು ಅವಲಂಬಿಸಿರುವುದಿಲ್ಲ ಬದಲಾಗಿ ನಾವು ಹೇಗೆ ಬದುಕುತ್ತೇವೆ ಎನ್ನುವುದನ್ನು ಅವಲಂಬಿಸಿರುತ್ತದೆ. ನಾವು ಜೀವನದಲ್ಲಿ ಏನನ್ನಾದರೂ ಪಡೆಯುವ ಪ್ರಯತ್ನದಲ್ಲಿ ಜೀವಿಸುವುದನ್ನು ಮರೆಯಬಾರದು ಎಂದು ಅಂತಾರಾಷ್ಟ್ರೀಯ ಖ್ಯಾತಿಯ ಜೀವನಕೌಶಲ ಗುರು ಗೌರ್‌ ಗೋಪಾಲ್‌ ದಾಸ್‌ ಹೇಳಿದರು.

Advertisement

ಆಳ್ವಾಸ್‌ ಕಾಲೇಜಿನ ರೋಸ್ಟ್ರಮ್‌ ಸ್ಪೀಕರ್ ಕ್ಲಬ್‌- ವಿದ್ಯಾರ್ಥಿ ವೇದಿಕೆ ಆಯೋಜಿಸಿದ್ದ ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಯಶಸ್ಸಿನ ರಹಸ್ಯ’ದ ಕುರಿತು ಆರಂಭ ದಲ್ಲಿ ತುಳುವಿನಲ್ಲಿ ಮಾತು ಪ್ರಾರಂಭಿಸಿದ ಅವರು, ಸೇರಿನ ಮಾತೆರೆಗ್ಲಾ ಸೊಲ್ಮೆಲು, ಎಂಕ್‌ ನಿಕ್ಲೆನ್‌ ತೂದ್‌ ಮಸ್ತ್ ಖುಷಿ ಆಂಡ್‌, ಎಂಕ್‌ ತುಳು ಬರ್ಪುಜಿ ಎಂದರು.

ಯಶಸ್ಸಿನ ವ್ಯಾಖ್ಯಾನವು ಬದಲಾಗುತ್ತಲೇ ಇರುತ್ತದೆ. ಒಂದು ಕ್ಷೇತ್ರದಿಂದ ಇನ್ನೊಂದು ಕ್ಷೇತ್ರಕ್ಕೆ ಯಶಸ್ಸಿನ ವ್ಯಾಖ್ಯಾನವು ವಿಭಿನ್ನವಾಗಿರುತ್ತದೆ. ನಮ್ಮ ಪ್ರತಿಭೆ, ಸಾಮರ್ಥ್ಯ, ಕೌಶಲ, ವ್ಯಕ್ತಿತ್ವವು ನಮ್ಮನ್ನು ಯಶಸ್ಸಿನೆಡೆಗೆ ಕೊಂಡೊಯ್ಯುವುದಿಲ್ಲ ಬದಲಾಗಿ ನಮ್ಮ ಮನೋಭಾವ, ಯೋಚನಾ ಲಹರಿಗಳು ನಮ್ಮನ್ನು ಯಶಸ್ಸಿನೆಡೆಗೆ ಮುನ್ನಡೆಸುತ್ತದೆ. ಒಬ್ಬ ವ್ಯಕ್ತಿ ತನ್ನ ಜೀವನದ ಸವಾಲುಗಳನ್ನು, ಸಮಸ್ಯೆಗಳನ್ನು ಹೇಗೆ ಪರಿಹರಿಸಿಕೊಳ್ಳುತ್ತಾನೆ ಎಂಬುದರ ಮೇಲೆ ಅವನ ಯಶಸ್ಸನ್ನು ನಿರ್ಧರಿಸಲಾಗುತ್ತದೆ.

ಇಂತಹ ವ್ಯಕ್ತಿಗಳು ಇತರರ ಜೀವನದ ಬಗ್ಗೆ ಕುತೂಹಲಿಗಳಾಗಿರುವುದಿಲ್ಲ, ಬದಲಾಗಿ ತಮ್ಮ ಜೀವನದಲ್ಲಿ ಯಾವ ಮಟ್ಟವನ್ನು ತಲುಪಬಹುದು ಎಂಬುದರ ಬಗ್ಗೆ ಯೋಚಿಸುತ್ತಿರುತ್ತಾರೆ. ಹೀಗಾಗಿ ಅವರು ಅದ್ಭುತ ಯಶಸ್ಸು ಸಾಧಿಸುತ್ತಾರೆ ಎಂದು ಹೇಳಿದರು.

ಮೂರು ‘ಸಿ’
ನಮ್ಮ ಯಶಸ್ಸಿನ ಗುಟ್ಟು ಚೂಸ್‌, ಚೇಂಜ್‌, ಕನೆಕ್ಟ್ ಎಂಬ ಮೂರು ‘ಸಿ’ಗಳಲ್ಲಿ ಅಡಗಿದೆ. ನಾವು ಇತರರನ್ನು ಅನುಕರಿಸದೇ ನಮ್ಮ ಜೀವನದ ಉತ್ತಮ ಆವೃತ್ತಿಯಾಗಿ ಹೊರಹೊಮ್ಮಬೇಕು. ನಾವು ಎಂತಹ ಸಂದರ್ಭದಲ್ಲೂ ಅವಕಾಶಗಳನ್ನು ಬಿಟ್ಟುಕೊಡಬಾರದು. ಇಂತಹ ಗುಣಗಳಿಂದ ಮಾತ್ರ ನಾವು ಉನ್ನತ ಸ್ಥಾನಕ್ಕೇರಬಹುದು. ಜತೆಗೆ ಕಾಲಕ್ಕೆ ತಕ್ಕಂತೆ ಬದಲಾಗುವುದು. ನಿರಂತರವಾಗಿ ಅಪ್‌ಡೇಟ್‌ ಆಗುವುದು ಕೂಡ ನಮ್ಮನ್ನು ಯಶಸ್ಸಿನೆಡೆಗೆ ಕೊಂಡೊಯ್ಯುತ್ತದೆ. ಇದರೊಂದಿಗೆ ನಮಗೆ ಭಾವನಾತ್ಮಕವಾದ ಅಥವಾ ಆಧ್ಯಾತ್ಮಿಕವಾದ ಬೆಂಬಲ ಇರಬೇಕಾದುದು ಕೂಡ ಮುಖ್ಯವಾಗಿದೆ ಎಂದರು.

Advertisement

ಪುಸ್ತಕ ಬಿಡುಗಡೆ
ಇದೇ ಸಂದರ್ಭದಲ್ಲಿ ‘ಲೈಫ್‌’ಸ್‌ ಅಮೇಜಿಂಗ್‌ ಸೀಕ್ರೆಟ್‌’ ಎಂಬ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಮೂಡಬಿದಿರೆಯ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ, ಆಳ್ವಾಸ್‌ ಶಿಕ್ಷಣ ಪ್ರತಿಷ್ಟಾನದ ಅಧ್ಯಕ್ಷ ಡಾ| ಎಂ ಮೋಹನ್‌ ಆಳ್ವ, ಮ್ಯಾನೇಜಿಂಗ್‌ ಟ್ರಸ್ಟಿ ವಿವೇಕ್‌ ಆಳ್ವ ಉಪಸ್ಥಿತರಿದ್ದರು.

ಆಳ್ವಾಸ್‌ ಕಾಲೇಜಿನ ವಿದ್ಯಾಗಿರಿ ಆವರಣದ ನುಡಿಸಿರಿ ವೇದಿಕೆಯಲ್ಲಿ ನಡೆದ ಗೋಪಾಲ್‌ದಾಸ್‌ ಕಾರ್ಯಕ್ರಮದಲ್ಲಿ ಮೂಡಬಿದಿರೆ ಪರಿಸರದ ರಾಜಕೀಯ, ಉದ್ಯಮ, ಸಿನಿಮಾ, ರಂಗಭೂಮಿ ಸಹಿತ ವಿವಿಧ ಕ್ಷೇತ್ರಗಳ ಸುಮಾರು 3,500 ಮಂದಿ ಗಣ್ಯರು ಪಾಲ್ಗೊಂಡಿದ್ದರು. ಆಯನಾ ಡಿ’ಸೋಜಾ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.

ಹಣಕ್ಕಿಂತ ಆಲೋಚನೆ ಮುಖ್ಯ
ನಮ್ಮ ಜೀವನದಲ್ಲಿ ಆಸ್ತಿ, ಹಣ, ಅಂತಸ್ತು ಎಂದಿಗೂ ಮುಖ್ಯವಾಗುವುದಿಲ್ಲ. ಅಂತಸ್ತು ಹೆಚ್ಚಾಗಬಹುದಷ್ಟೇ ಆದರೆ ಜೀವನಕ್ಕೆ ಬೇಕಾದ ಮೂಲಭೂತ ಅವಶ್ಯಕತೆಗಳು ಎಂದಿಗೂ ಹಾಗೆಯೇ ಉಳಿದುಕೊಳ್ಳುತ್ತದೆ. ನಮ್ಮ ಆಲೋಚನೆಗಳು ಶ್ರೀಮಂತವಾಗಬೇಕು, ನಮ್ಮ ಮನೋಭಾವ ಉನ್ನತ ಮಟ್ಟದ್ದಾಗಿರಬೇಕು. ಆಗ ಜೀವನ ಶ್ರೀಮಂತವಾಗಿರುತ್ತದೆ.
ಗೌರ್‌ ಗೋಪಾಲ್‌ ದಾಸ್‌,
  ಆಧ್ಯಾತ್ಮಿಕ ಗುರು

Advertisement

Udayavani is now on Telegram. Click here to join our channel and stay updated with the latest news.

Next