ಮೈಸೂರು ಜಿಲ್ಲೆಯ ಹುಣಸೂರಿನ ಹನಗೋಡು ಹೋಬಳಿಯ ಗೌಡಿಕೆರೆ ರೈತ ಗೋಪಾಲೇಗೌಡರ ಪುತ್ರ ಬಿ.ಎ. ಪದವೀಧರ ಮಂಜುನಾಥ ಅಪ್ಪನ ಕಾಲದ ತಂಬಾಕು ಬೆಳೆ ಬಿಟ್ಟಿದ್ದಾರೆ. ಬದಲಾಗಿ ಟೊಮೆಟೊ ಹಿಂದೆ ಬಿದ್ದಿದ್ದಾರೆ. ಹೀಗೆ ಮಾಡಿದ್ದರಿಂದ ಲಾಸ್ ಏನೂ ಆಗಿಲ್ಲ. ಲಾಭವೇ ಎಲ್ಲಾ. ಮಂಜುನಾಥ್‌ರ ತಂದೆ ಗೋಪಾಲೇಗೌಡರಿಗೆ ಒಟ್ಟು 9 ಎಕರೆ ಜಮೀನಿದೆ. 3 ಎಕರೆ ಜಮೀನಿನಲ್ಲಿ ಮಂಜುನಾಥ್ ಮತ್ತು ಅವರ ಸಹೋದರ ಉಳುಮೆ ಮಾಡುತ್ತಾರೆ. ಈ ಮೊದಲು ಜಮೀನಿನ ಮೇಲೆ ಸಾಲಸೋಲ ಮಾಡಿ ಹೊಗೆಸೊಪ್ಪು ಬೆಳೆಯುತ್ತಿದ್ದರು.
ಆಗ ಕೈ ಸೇರುತ್ತಿದ್ದದ್ದು ಲಕ್ಷ ರೂ! ಮತ್ತೆ ಭೂಮಿ ಹದ ಮಾಡಲು ಆರಂಭಿಸುತ್ತಿದ್ದರು, ಈ ಕಡೆ ಬದುಕೂ ನಡೆಯಬೇಕು. ಅತ್ತ ಕೃಷಿ ಕೆಲಸವೂ ಸಾಗಬೇಕು… ಹಾಗಿತ್ತು ಪರಿಸ್ಥಿತಿ ಹಾಗಾಗಿ ಮೇಲಿಂದ ಮೇಲೆ ಮತ್ತೆ ಕಾರ್ಮಿಕರಿಗೆ ಬಟವಾಡೆ, ಮನೆಗೆ ದವಸ ಧಾನ್ಯಗಳ ಖರೀದಿಯಿಂದಾಗಿ ಗಳಿಸಿದ ಹಣವೆಲ್ಲ ಮೂರು ತಿಂಗಳಲ್ಲೇ ಖರ್ಚಾಗಿ ಬಿಡುತ್ತಿತ್ತು. ಮತ್ತೆ ಸಾಲಕ್ಕಾಗಿ ಕೈಕಟ್ಟಿ ನಿಲ್ಲುವ ಪರಿಸ್ಥಿತಿ ಇತ್ತು. ಇದರಿಂದಾಗಿ ಕೃಷಿಯ ಸಹವಾಸಕ್ಕೆ ಗುಡ್‌ಬೈ ಹೇಳಲೂ ಇವರು ನಿರ್ಧರಿಸಿದ್ದರು. ಸ್ನೇಹಿತರ ಸಲಹೆ ಮೇರೆಗೆ ಬೆಂಗಳೂರಿನ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳಾದ ಡಾ. ಸದಾಶಿವ ಹಾಗೂ ಹೆಬ್ಟಾರ್‌ರನ್ನು ಭೇಟಿ ಮಾಡಿದರು. ಅರ್ಕಾ ರಕ್ಷಕ್ ಟೊಮ್ಯಾಟೋ ಬೆಳೆಯ ಸಲಹೆ ಪಡೆದರು. ಬೆಳೆಯಲು ಶುರುಮಾಡಿದರು.
ಬೆಂಗಳೂರಿನಿಂದ ಗ್ರಾಮಕ್ಕಾಗಮಿಸಿದವರೇ ಕುಟುಂಬದವರೊಂದಿಗೆ ಚರ್ಚಿಸಿ, ಮತ್ತೆ ಬೆಂಗಳೂರಿನತ್ತ ಪಯಣ ಬೆಳೆಸಿ, ಹೆಸರುಗಟ್ಟ ರಸ್ತೆಯಲ್ಲಿರುವ ಐ.ಎ.ಎಚ್.ಆರ್.ಸಿ.ಕೇಂದ್ರದಲ್ಲಿ ಸಿಗುವ ಅರ್ಕಾ ರಕ್ಷಕ್ ಟೊಮ್ಯಾಟೋ ಬೀಜವನ್ನು ಪ್ಯಾಕೆಟಿಗೆ 350 ರೂ ಕೊಟ್ಟು 25 ಪ್ಯಾಕೆಟ್ ಖರೀದಿಸಿದರು. ಹಿಂದೆ ತಂಬಾಕು ಬೆಳೆಯುತ್ತಿದ್ದುದರಿಂದಾಗಿ ಭೂಮಿಯಲ್ಲಿ ಸಾರ ಕಡಿಮೆಯಾಗುವ ಜೊತೆಗೆ ಕಳೆಯ ಭಯವೂ ಇತ್ತು. ಇದಕ್ಕಾಗಿ 10 ಟ್ರಾಕ್ಟರ್‌ನಷ್ಟು ಕೊಟ್ಟಿಗೆ ಗೊಬ್ಬರ ಹಾಕಿ ನಾಟಿ ಮಾಡಿದರು. ಮಲಿcಂಗ್ ಶೀಟ್ ತಂದು ಹಾಸಿದ್ದರಿಂದಾಗಿ ಅಷ್ಟಾಗಿ ಕಳೆ ಮೇಲೇಳಲಿಲ್ಲ. ಜಮೀನಿನಲ್ಲಿ ಬೋರ್ ವೆಲ್ ಇದ್ದುದ್ದರಿಂದ ಈ ಬಾರಿಯ ಬರವೂ ತಟ್ಟಲಿಲ್ಲ, ಸಸಿ ಮೇಲೆದ್ದು ಟೊಮೆಟೊ ಕಾಯಿ ಬಿಡುವ ಹಂತಕ್ಕೆ ಬಂದಾಗ, ದಾರಿಯಲ್ಲಿ ಹೋಗುವವರೂ ಇವರ ತೋಟದ ಕಡೆ ತಿರುಗಿನೋಡುವಂತಾಯಿತು.
ಈಗ 10-15 ಟನ್‌ನಷ್ಟು ಟೊಮೆಟೊ ಕಟಾವು ಮಾಡಿ ಸ್ಥಳೀಯ ಎ.ಪಿ.ಎಂ.ಸಿ. ಮಾರುಕಟ್ಟೆಯಲ್ಲಿ ಮಾರಾಟ ಮಾಡಿದ್ದರು.
ಮಾರುಕಟ್ಟೆಯಲ್ಲಿನ ದಲ್ಲಾಳಿಗಳ ಹಾವಳಿ ಇದ್ದುದ್ದನ್ನ ಮನಗಂಡು ಸ್ವತಃ ಮಾರಾಟಕ್ಕೂ ನಿಂತರು. ಈತನಕ 25 ಟನ್ ನಷ್ಟು ಮಾರಾಟ ಮಾಡಿದ್ದಾರೆ. ಬಿರು ಬೇಸಿಗೆಯಲ್ಲಿ 1,200ರಿಂದ 1,350 ರೂ. ಪ್ರತಿ ಕ್ರೇಟಿಗೆ (ಟನ್‌ಗೆ ಸರಾಸರಿ 50-54 ಸಾವಿರ) ಸಿಗುತ್ತಿದೆ. ಇದೀಗ ಮಳೆ ಆರಂಭವಾದಂದಿನಿಂದ 700 ರಿಂದ 800ರೂ ಸಿಗುತ್ತಿದೆ. ಈಗಾಗಲೇ 40 ಲಕ್ಷರೂ ನಷ್ಟು ಟೊಮೆಟೊ ಮಾರಾಟ ಮಾಡಿದ್ದಾರೆ. ಇರುವ 6 ಎಕರೆ ಭೂಮಿಯಲ್ಲಿ ತಂಬಾಕು ಬೆಳೆಯಿಂದ ವಾರ್ಷಿಕ ಸರಾಸರಿ 4-5 ಲಕ್ಷರೂ. ಆದಾಯ ಬರುತ್ತಿತ್ತು. ತಂಬಾಕು ಕೂಡ ಟೊಮೆಟೊನಂತೆ ನಾಲ್ಕು ತಿಂಗಳ ಬೆಳೆ. ಆದರೆ ಹೆಚ್ಚಿನ ಲಾಭ ಮಾತ್ರ ಟೊಮೆಟೊದಲ್ಲಿ. ಟೊಮ್ಯಾಟೋ ಎಂದಾಗ ಆರಂಭದಲ್ಲಿ ಭಯವಿತ್ತು. ಕುಟುಂಬದವರೊಂದಿಗೆ ಚರ್ಚಿಸಿದೆ. ಬೆಳೆಯ ಪ್ರತಿಹಂತದಲ್ಲೂ ತೊಡಗಿಕೊಂಡದ್ದರಿಂದ ಲಾಭ ಹೆಚ್ಚಾಗಿದೆ ಎನ್ನುತ್ತಾರೆ ಮಂಜುನಾಥ. ಮಂಜುನಾಥ ಕೃಷಿ ರೈತ ಮೋರ್ಚಾ ಅಧ್ಯಕ್ಷರೂ ಆಗಿದ್ದಾರೆ. ಬಿಡುವಿಲ್ಲದೆ ಇದ್ದರೂ ಕೃಷಿಯೊಂದಿಗಿನ ಒಡನಾಟದಿಂದ ದೂರವಾಗಿಲ್ಲ.
– ಸಂಪತ್ ಕುಮಾರ್ ಹುಣಸೂರು