ನವದೆಹಲಿ: ಅಲಿಗಢ ಮುಸ್ಲಿಂ ವಿವಿಯ ಹೆಸರಿಂದ “ಮುಸ್ಲಿಂ’ ಮತ್ತು ಬನಾರಸ್ ಹಿಂದೂ ವಿವಿಯ ಹೆಸರಿನಿಂದ “ಹಿಂದೂ’ ಪದ ತೆಗೆಯಬೇಕು. ಅದರ ಬದಲಾಗಿ ಅವುಗಳು ಸಂಸ್ಥಾಪಕರ ಅಥವಾ ಸ್ಥಳನಾಮದಿಂದಲೇ ಗುರುತಿಸಲ್ಪಡಬೇಕು. ವಿವಿಗಳು ಜಾತ್ಯತೀತ ವ್ಯವಸ್ಥೆಯನ್ನು ಪ್ರತಿನಿಧಿಸುತ್ತವೆ ಎಂಬುದನ್ನು ಸೂಚಿಸಲು ಇಂಥ ಕ್ರಮ ಕೈಗೊಳ್ಳಬೇಕು ಎಂದು ವಿಶ್ವವಿದ್ಯಾನಿಲಯ ಧನ ಸಹಾಯ ಆಯೋಗ (ಯುಜಿಸಿ)ದ ಸಮಿತಿ ಶಿಫಾರಸು ಮಾಡಿದೆ.
ಕೇಂದ್ರೀಯ ವಿವಿಗಳ ಆಡಳಿತ ಮತ್ತು ಇತರ ವ್ಯವಸ್ಥೆಗಳ ಬಗ್ಗೆ ಮೌಲ್ಯಮಾಪನ ನಡೆಸಲು ಏ.25ರಂದು ರಚಿಸಲಾಗಿದ್ದ ಸಮಿತಿ ಈ ಶಿಫಾರಸು ಮಾಡಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್, ಸರ್ಕಾರದ ಮುಂದೆ ಅಂಥ ಯಾವುದೇ ಪ್ರಸ್ತಾಪಗಳಿಲ್ಲ ಎಂದು ಹೇಳಿದ್ದಾರೆ.
ಅಲಿಗಢ ಮುಸ್ಲಿಂ ವಿವಿಯ ಹೆಸರಿನ ಬಗ್ಗೆ ಆಕ್ಷೇಪವೆತ್ತಿರುವ ಸಮಿತಿ ವಿವಿಯನ್ನು ಅದರ ಸಂಸ್ಥಾಪಕ ಸರ್ ಸಯ್ಯದ್ ಅಹಮದ್ ಖಾನ್ ಅಥವಾ “ಅಲಿಗಢ ವಿವಿ’ ಎಂಬ ಹೆಸರಿನಿಂದ ಕರೆಯಬೇಕು ಎಂದು ಸಲಹೆ ನೀಡಿದೆ. ಬನಾರಸ್ ಹಿಂದೂ ವಿವಿಯ ಹೆಸರನ್ನೂ ಅದೇ ರೀತಿ ಬದಲಿಸಲು ಸೂಚಿಸಿದೆ. ಎರಡೂ ವಿವಿಗಳಿಗೆ ಕೇಂದ್ರದಿಂದಲೇ ನೆರವು ದೊರೆಯುತ್ತಿರುವುದರಿಂದ ಜಾತ್ಯತೀತವಾಗಿರಬೇಕು ಎಂದು ಸಮಿತಿ ಅಭಿಪ್ರಾಯಪಟ್ಟಿದೆ. ಅಲಿಗಢ ಮುಸ್ಲಿಂ ವಿವಿಯಲ್ಲಿ ಮುಸ್ಲಿಂ ಸಮುದಾಯದ ಅಭಿವೃದ್ಧಿಗೆ ಹೆಚ್ಚಿನ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ಮಾಡಿದೆ. ಜತೆಗೆ ವಿವಿಯಲ್ಲಿ “ಊಳಿಗಮಾನ್ಯ ಪದ್ಧತಿ’ ಇದೆ ಎಂದು ಟೀಕಿಸಿದೆ.
ಆದರೆ ಅದಕ್ಕೆ ನೀಡಲಾಗಿರುವ ಅಲ್ಪಸಂಖ್ಯಾತ ವಿವಿ ಎಂಬ ಸ್ಥಾನಮಾನ ಹಿಂಪಡೆಯಬೇಕು ಎಂಬುದರ ಬಗ್ಗೆ ಸಮಿತಿ ಮೌನ ವಹಿಸಿದೆ. ವಿವಿಯಲ್ಲಿ ಹಳೆ ವಿದ್ಯಾರ್ಥಿಗಳೇ ಪ್ರಾಧ್ಯಾಪಕರ ಹುದ್ದೆಗೆ ನೇಮಕವಾಗುವುದಕ್ಕೆ ಆಕ್ಷೇಪ ವ್ಯಕ್ತಪಡಿಸಲಾಗಿದ್ದು, ಸ್ನಾತಕೋತ್ತರ ಪದವಿ ಪಡೆದು 5 ವರ್ಷಗಳ ಬಳಿಕ ಅವರನ್ನು ನೇಮಕ ಮಾಡಿಕೊಳ್ಳಬಹುದು ಎಂದು ಪ್ರತಿಪಾದಿಸಿದೆ. ವಿವಿಯಲ್ಲಿ ಬಡ್ತಿಗೆ ಆಸ್ಪದವಿಲ್ಲದಿದ್ದರೂ ಅಂಥ ಕ್ರಮ ಕೈಗೊಂಡಿರುವುದಕ್ಕೆ ಸಮಿತಿ ಆಕ್ಷೇಪಿಸಿದೆ.