ಕೊಕೊ ಕೋಲಾ, ಮಿರಿಂಡಾ, ಥಂಬ್ಸ್ಅಪ್‌ನಂಥ ಪಾನೀಯಗಳ ಜಾಹೀರಾತನ್ನು ನೋಡಿದ್ದೀರಲ್ವಾ? ಒಂದೇ ಒಂದು ಟಿನ್ ಪಾನೀಯಕ್ಕೋಸ್ಕರ ಹೀರೋ, ಹತ್ತಾರು ಲಾರಿಗಳ ಮೇಲೆ ಜಿಗಿದು, ಕಟ್ಟಡಗಳನ್ನು ಹಾರಿ, ಏಳುತ್ತಾ ಬೀಳುತ್ತಾ ಕೊನೆಗೂ ಬಾಟಲಿಯನ್ನು ಎತ್ತಿ ಗಟಗಟನೆ ಕುಡಿದು ಬಿಡುತ್ತಾನೆ!…ಅಬ್ಬಬ್ಟಾ ಒಂದು ಟಿನ್‌ಗೊಸ್ಕರ ಎಷ್ಟೊಂದು ಸರ್ಕಸ್ ಮಾಡ್ತಾರಲ್ವಾ? ಆದರೆ, ಅದೇ ಟಿನ್‌ಗಳನ್ನು ಬಳಸಿ ತುಂಬಾ ಸುಲಭವಾಗಿ ಮ್ಯಾಜಿಕ್ ಮಾಡಬಹುದು. ನೀವು ಹಾರಿ, ಎಗರೋದೇ ಬೇಡ, ಹಾಗೆಯೇ ಟಿನ್ ಜೊತೆಗೆ ಲೋಟವನ್ನೂ ತೇಲಿಸಿಬಿಡಬಹುದು. ಹಾಂ, ಹಾಗಂದ ಮಾತ್ರಕ್ಕೆ ಪಾನೀಯ ಕುಡಿದವರಿಗೆಲ್ಲಾ ಆ ಶಕ್ತಿ ಬರುವುದಿಲ್ಲ. ಮತ್ತೆ ಆ ಶಕ್ತಿ ಪಡೆದುಕೊಳ್ಳೋದು ಹೇಗಂತೀರಾ…
ಬೇಕಾಗುವ ವಸ್ತುಗಳು: ಮೆಟಲ್ ಟಿನ್, ಸ್ವಲ್ಪ ದಪ್ಪನೆಯ ಪ್ಲಾಸ್ಟಿಕ್ ಲೋಟ, ತಂತಿ, ಕಪ್ಪು ದಾರ, ಹುಕ್ (ಕೊಂಡಿ)
ಪ್ರದರ್ಶನ: ಜಾದೂಗಾರನ ಬಳಿ ಮುಚ್ಚಳ ತೆಗೆದ ಒಂದು ಮೆಟಲ್ ಟಿನ್ ಹಾಗೂ ಪ್ಲಾಸ್ಟಿಕ್ ಲೋಟ ಇರುತ್ತದೆ. ಆತ ಟಿನ್‌ನಿಂದ ಪಾನೀಯವನ್ನು ಲೋಟಕ್ಕೆ ಸುರಿಯುತ್ತಾನೆ. ಹಾಗೆ ಸುರಿಯುತ್ತಾ ನಿಧಾನಕ್ಕೆ ಟಿನ್‌ಅನ್ನು ಮೇಲಕ್ಕೆತ್ತುತ್ತಾನೆ. ಟಿನ್‌ನ ಜೊತೆ ಜೊತೆಗೆ ಲೋಟವೂ ಕೂಡ ಗಾಳಿಯಲ್ಲಿ ಮೇಲಕ್ಕೆ ಬರುತ್ತದೆ.
ತಯಾರಿ: ಈ ಜಾದೂವಿನ ರಹಸ್ಯ ಅಡಗಿರುವುದು ಪ್ಲಾಸ್ಟಿಕ್ ಲೋಟ ಮತ್ತು ದಾರವನ್ನು ಸೇರಿಸಿ ಕಟ್ಟಲಾಗಿರುವ ಒಂದು ಕಪ್ಪು ದಾರದಲ್ಲಿ. ಅಂದರೆ, ಮೊದಲಿಗೆ ಲೋಟದ ಬಾಯಿಗೆ ಅಡ್ಡಲಾಗಿ ತೆಳ್ಳನೆಯ ತಂತಿ ಕಟ್ಟಬೇಕು. ನಂತರ ಒಂದು ಕಪ್ಪು ದಾರವನ್ನು ತಂತಿ ಮತ್ತು ಟಿನ್‌ನ ನಡುವೆ ಕಟ್ಟಬೇಕು. ಪಾನೀಯವನ್ನು ಟಿನ್‌ನಿಂದ ಸುರಿಯುತ್ತಾ, ಇನ್ನೊಂದು ಕೈಯಲ್ಲಿ ಹಿಡಿರುವ ಲೋಟವನ್ನು ಸಡಿಲಬಿಡಿ. ಈಗ ಟಿನ್‌ಅನ್ನು ಮೇಲಕ್ಕೆತ್ತಿದಾಗ ಅದರ ಜೊತೆಗೆ ಲೋಟವೂ ಮೇಲಕ್ಕೆ ಬರುತ್ತದೆ. ಮೇಲಕ್ಕೆತ್ತದೆ ಅಲ್ಲೇ ಬಿಟ್ಟರು ಒಳ್ಳೆಯದೇ. ಈ ಜಾದೂವನ್ನು ಪ್ರಯೋಗಿಸುವಾಗ ನೀವು ಯಾವ ಬಣ್ಣದ ದಾರವನ್ನು ಬಳಸುತ್ತೀರೋ, ಹಿಂಭಾಗದಲ್ಲಿ ಅದೇ ಬಣ್ಣದ ಸ್ಕ್ರೀನ್ ಇದ್ದರೆ ಉತ್ತಮ. ಆಗ ಕಟ್ಟಿರುವ ದಾರ ಪ್ರೇಕ್ಷಕರಿಗೆ ಕಾಣಿಸುವುದಿಲ್ಲ. ಪ್ರದರ್ಶನಕ್ಕೂ ಮೊದಲು ಪ್ರಯೋಗಿಸಿ ಕರಗತ ಮಾಡಿಕೊಳ್ಳಿ.
ವಿನ್ಸೆಂಟ್ ಲೋಬೋ