ಬೆಂಗಳೂರು: ರಂಗ ಮಂದಿರಗಳ ಎದುರು ಬಟ್ಟೆ ಬ್ಯಾನರ್ ಪ್ರದರ್ಶನಕ್ಕೆ ಪಾಲಿಕೆ ಅವಕಾಶ ನೀಡಬೇಕು ಎಂದು ಆಗ್ರಹಿಸಿ ರವೀಂದ್ರ ಕಲಾಕ್ಷೇತ್ರದ ಎದುರು ಸೋಮವಾರ ರಂಗಕರ್ಮಿಗಳು ಪ್ರತಿಭಟನೆ ನಡೆಸಿದರು.
ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಜೆ.ಲೋಕೇಶ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ರಂಗಕರ್ಮಿಗಳು, ರವೀಂದ್ರ ಕಲಾಕ್ಷೇತ್ರ ಮತ್ತು ಕಲಾಗ್ರಾಮ ಸೇರಿದಂತೆ ಇನ್ನಿತರ ರಂಗ ಮಂದಿರಗಳ ಮುಂದೆ ಬಟ್ಟೆ ಬ್ಯಾನರ್ ಕಟ್ಟಲು ಅವಕಾಶ ನೀಡುವಂತೆ ಒತ್ತಾಯಿಸಿದರು.
ಈ ವೇಳೆ ಮಾತನಾಡಿದ ರಂಗಕರ್ಮಿ ಶಶಿಕಾಂತ್ ಯಡಹಳ್ಳಿ, ರಂಗ ತಂಡದ ಅನುಕೂಲಕ್ಕಾಗಿ ನಗರದ ರಂಗಮಂದಿರ, ಬಸ್ ಮತ್ತು ರೈಲು ನಿಲ್ದಾಗಳ ಎದುರು ಪರಿಸರಕ್ಕೆ ಹಾನಿಯಾಗದ ಬಟ್ಟೆ ಬ್ಯಾನರ್ ಕಟ್ಟಲು ಪಾಲಿಕೆ ಅವಕಾಶ ನೀಡಬೇಕು. ಬ್ಯಾನರ್ ಕಟ್ಟುವ ವಿಚಾರವಾಗಿ ಪಾಲಿಕೆ ಆಯುಕ್ತರು ಮಾಧ್ಯಮಗಳ ಮುಂದೆ ಗೊಂದಲದ ಹೇಳಿಕೆಗಳನ್ನು ನೀಡುತ್ತಿದ್ದು, ಈ ಬಗ್ಗೆ ಸ್ಪಷ್ಪ ಹೇಳಿಕೆ ನೀಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆ ವಾಪಸ್: ಕಲಾ ಗ್ರಾಮದಲ್ಲಿರುವ ಸಾಂಸ್ಕೃತಿಕ ಸಮುತ್ಛಯದ ಮೂಲ ಸೌಕರ್ಯ ಕೊರತೆ ನೀಗಿಸಲು ಒತ್ತಾಯಿಸಿ ಮತ್ತು ನಯನ ರಂಗಮಂದಿರದಲ್ಲಿನ ಆನ್‌ಲೈನ್ ಬುಕ್ಕಿಂಗ್ ವ್ಯವಸ್ಥೆ ಸರಿಪಡಿಸಲು ಆಗ್ರಹಿಸಿ ರಂಗಕಲಾವಿದರು ಸೋಮವಾರ ಪ್ರತಿಭಟನೆಗೆ ಮುಂದಾಗಿದ್ದರು. ಅಕ್ಕ ಸಮ್ಮೇಳನದಲ್ಲಿ ಪಾಲ್ಗೊಂಡಿರುವ ಇಲಾಖೆ ನಿರ್ದೇಶಕರು, ಸಮಸ್ಯೆ ಪರಿಹರಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ವಾಪಸ್ ಪಡೆಯಲಾಯಿತು.
ಸದ್ಯದ ಪರಿಸ್ಥಿತಿಯಲ್ಲಿ ರಂಗತಂಡಗಳು, ಜಾಹೀರಾತು ನೀಡಿ ಪ್ರಚಾರ ಮಾಡುವಷ್ಟು ಆರ್ಥಿಕವಾಗಿ ಸಲಬವಾಗಿಲ್ಲ. ಈ ಹಿನ್ನೆಲೆಯಲ್ಲಿ ಪಾಲಿಕೆ ಅಧಿಕಾರಿಗಳು ರಂಗಮಂದಿರಗಳ ಮುಂದೆ ಬಟ್ಟೆ ಬ್ಯಾನರ್ ಪ್ರದರ್ಶನಕ್ಕೆ ಅವಕಾಶ ನೀಡಬೇಕು.
-ಜೆ.ಲೋಕೇಶ್, ನಾಟಕ ಅಕಾಡೆಮಿ ಅಧ್ಯಕ್ಷ