Advertisement

“ಮಾತೃಪೂರ್ಣ ಯೋಜನೆ  ಕೈಬಿಡಿ, ಮಡಿಲು ಯೋಜನೆ  ಕೊಡಿ’

07:05 AM Oct 26, 2017 | Harsha Rao |

ಉಡುಪಿ: ರಾಜ್ಯ ಸರಕಾರ ಹೊಸದಾಗಿ ಜಾರಿಗೊಳಿಸಿರುವ ಮಾತೃಪೂರ್ಣ ಯೋಜನೆಯಿಂದ ಗರ್ಭಿಣಿಯರಿಗೆ ಪ್ರಯೋಜನವಾಗುತ್ತಿಲ್ಲ. ಹೀಗಾಗಿ ಉಡುಪಿ ತಾಲೂಕಿನಲ್ಲಿ ಮಾತೃಪೂರ್ಣ ಯೋಜನೆ ಕೈಬಿಟ್ಟು ಈ ಹಿಂದಿನ ಮಡಿಲು ಯೋಜನೆಯ ರೀತಿಯಲ್ಲೇ ಗರ್ಭಿಣಿಯರಿಗೆ ಪೌಷ್ಟಿಕ ಆಹಾರ ನೀಡಬೇಕು ಎಂದು ಉಡುಪಿ ತಾ.ಪಂ. ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.  

Advertisement

ಬುಧವಾರ ತಾ.ಪಂ. ಸಭಾಂಗಣದಲ್ಲಿ ನಡೆದ ತಾ.ಪಂ. ಸಾಮಾನ್ಯ ಸಭೆಯಲ್ಲಿ ಸದಸ್ಯ ಸುಧೀರ್‌ ಶೆಟ್ಟಿ ಮಾತೃಪೂರ್ಣ ಯೋಜನೆಯ ಕುರಿತು ಪ್ರಸ್ತಾಪಿಸಿ, ದ.ಕ. ಮತ್ತು ಉಡುಪಿ ಜಿಲ್ಲೆಯ ಎಲ್ಲ ಭಾಗಗಳಲ್ಲಿ ಒಂದೊಂದು ಅಂಗನವಾಡಿ ಕೇಂದ್ರಗಳಿಗೆ 3-4 ಕಿ.ಮೀ ದೂರವಿದೆ. ಹೀಗಾಗಿ ಗರ್ಭಿಣಿಯರಿಗೆ ಅಂಗನವಾಡಿ ಕೇಂದ್ರಗಳಿಗೆ ತೆರಳುವುದು ಅಸಾಧ್ಯ. ಈ ಹಿಂದೆ ವಿವಿಧ ಧಾನ್ಯಗಳಿರುವ ಕಿಟ್‌ ನೀಡಲಾಗುತ್ತಿತ್ತು. ಕೇವಲ ಬೆಳ್ತಿಗೆ ಅಕ್ಕಿ ಊಟಕ್ಕಾಗಿ ಅಂಗನವಾಡಿಗೆ ತೆರಳಬೇಕಾಗುತ್ತದೆ ಎಂದು ತಿಳಿಸಿದರು. ಇದಕ್ಕೆ ಕೆಲವು ಸದಸ್ಯರು ದನಿಗೂಡಿಸಿದರು. 

ಯೋಜನೆ ಪ್ರಾರಂಭದಲ್ಲಿ ಕೆಲವು ಸಮಸ್ಯೆಗಳು ಎದುರಾಗುತ್ತವೆ. ಅದನ್ನು ಪರಿಹರಿಸಬೇಕು ಹೊರತು ಯೋಜನೆ ಕೈಬಿಡಬಾರದು. ಕೆಲವು ಯೋಜನೆಗಳ ಪ್ರಾರಂಭದಲ್ಲಿ ಈ ಹಿಂದೆಯೂ ಸಮಸ್ಯೆಗಳಾಗಿತ್ತು ಎಂದು ಕಾಂಗ್ರೆಸ್‌ ಸದಸ್ಯರು ತಿಳಿಸಿದರು. 

ಕೆಂಜೂರು ಭಾಗದಲ್ಲಿ ರಸ್ತೆ ನಿರ್ಮಿಸಲು ಅರಣ್ಯ ಇಲಾಖೆ ಅಡ್ಡಿಪಡಿಸುತ್ತಿದೆ. ಆದರೆ ಅಕ್ರಮವಾಗಿ ಕಟ್ಟಿಗೆ ಸಾಗಾಟ ಮಾಡಲು ರಸ್ತೆ ಮಾಡಲಾಗಿದೆ. ಹಿಂದಿನ ಸಭೆಯಲ್ಲಿ ಚರ್ಚೆ ನಡೆಸಿದೂ ಅರಣ್ಯ ಇಲಾಖೆ ಅಧಿಕಾರಿಗಳು ಸರಿಯಾಗಿ ಮಾಹಿತಿ ನೀಡಲಿಲ್ಲ. ಸಮಸ್ಯೆ ಬಗೆಹರಿಯದಿದ್ದರೆ ಸಭೆ ನಡೆಸಿ ಏನು ಪ್ರಯೋಜನ ಎಂದು ಸದಸ್ಯೆ ಡಾ| ಸುನಿತಾ ಶೆಟ್ಟಿ ಪ್ರಶ್ನಿಸಿದರು. 

ಅರಣ್ಯ ಇಲಾಖೆ ಒಂದು ವಾರದೊಳಗೆ ಎಲ್ಲೆಲ್ಲಿ ರಸ್ತೆ ನಿರ್ಮಾಣವಾಗಬೇಕು ಎಂದು ಪಟ್ಟಿ ಮಾಡಿ ಕೊಡಬೇಕು. ತಪ್ಪಿದಲ್ಲಿ ಸಂಬಂಧಿಸಿದವರಿಗೆ ನೋಟಿಸ್‌ ಜಾರಿಗೊಳಿಸಲಾಗುವುದು ಎಂದರು. 

Advertisement

ಬೆಳಪು ಗ್ರಾ.ಪಂ. ಮತ್ತು ಅರಣ್ಯ ಇಲಾಖೆ ಜಂಟಿಯಾಗಿ ಅರಣ್ಯ ಕಟಾವು ನಡೆಸಿದೆ. ಆದರೆ ಅರಣ್ಯ ಇಲಾಖೆ  ಗ್ರಾ.ಪಂ.ಗೆ ನೀಡಬೇಕಾದ ಪಾಲನ್ನು ನೀಡಿಲ್ಲ. ಕಟಾವು ಮಾಡಿ 8 ತಿಂಗಳು ಕಳೆದರೂ ಗಿಡಗಳನ್ನು ನೆಟ್ಟಿಲ್ಲ. ಅರಣ್ಯ ಇಲಾಖೆಯೇ ಪರಿಸರ ಸಂರಕ್ಷಣೆಗೆ ವಿರುದ್ಧವಾಗಿದೆ ಎಂದು ಬೆಳಪು ಗ್ರಾ.ಪಂ. ದೇವಿಪ್ರಸಾದ್‌ ಶೆಟ್ಟಿ ತಿಳಿಸಿದರು. 

ಮಾಹಿತಿ ಇಲ್ಲದೇ ಸಭೆಗೆ ಬರಬೇಡಿ
ಈ ಹಿಂದಿನ ಸಭೆಯಲ್ಲಿ ಚರ್ಚೆಗೆ ಬಂದ ವಿಷಯಗಳ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿಲ್ಲ ಎಂದು ಸದಸ್ಯರು ದೂರಿದರು. ಸರಿಯಾಗಿ ಮಾಹಿತಿ ಇಲ್ಲದೇ ಯಾವುದೇ ಅಧಿಕಾರಿಗಳು ಸಭೆಗೆ ಆಗಮಿಸಬೇಡಿ ಎಂದು ಅಧ್ಯಕ್ಷೆ ನಳಿನಿ ಪ್ರದೀಪ್‌ ರಾವ್‌ ಅಧಿಕಾರಿಗಳಿಗೆ ಖಡಕ್‌ ಸೂಚನೆ ನೀಡಿದರು. 

ಸದಸ್ಯರ ವಿರುದ್ಧ  ಕೇಸ್‌..|
  ಮುದರಂಗಡಿ ಶಾಲಾ ಮೈದಾನದ ಕಾಮಗಾರಿ ಪರಿಶೀಲನೆಗೆ ತೆರಳಿದ ನನ್ನ ಮೇಲೆ ಅಲ್ಲಿನ ಗ್ರಾ.ಪಂ. ಪಿಡಿಒ ನನ್ನ ಮೇಲೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ತಾ.ಪಂ. ಇಒಗೆ ತಿಳಿಸದೇ ನನ್ನ ಬಂಧನಕ್ಕೆ ಹೊರಟಿರುವುದು ಸರಿಯೇ ಎಂದ ಅವರು ಇದರಲ್ಲಿ ತಾ.ಪಂ. ಅಧ್ಯಕ್ಷೆಯೂ ಕೈವಾಡ ಇದೆ ಎಂದು ಸದಸ್ಯ ಮೈಕಲ್‌ ಡಿಸೋಜಾ ಆರೋಪಿಸಿದರು. ಈ ಬಗ್ಗೆ ಆಧಾರರಹಿತವಾಗಿ ಆರೋಪಿಸುವುದು ಸರಿಯಲ್ಲ . ನ. 8ರಂದು ಗ್ರಾ.ಪಂ. ಅಧ್ಯಕ್ಷೆ, ಪಿಡಿಒ ಒಟ್ಟಾಗಿ ಚರ್ಚಿಸೋಣ ಎಂದು ತಾ.ಪಂ. ಅಧ್ಯಕ್ಷೆ ನಳಿನಿ ಪ್ರದೀಪ್‌ ರಾವ್‌ ತಿಳಿಸಿದರು.  ಪ್ರತಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಕುಡಿಯುವ ನೀರು ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಕೇಂದ್ರದ 14ನೇ ಹಣಕಾಸು ಯೋಜನೆಯಡಿಯಲ್ಲಿ ಮೂರು ವರ್ಷಗಳಲ್ಲಿ 24.80 ಕೋ. ರೂ. ಅನುದಾನ ಉಡುಪಿಗೆ ಬಂದಿದ್ದು, ಈ ಹಿನ್ನೆಲೆಯಲ್ಲಿ ಬಿಜೆಪಿ ಸದಸ್ಯರು ಅಭಿನಂದನೆ ಸಲ್ಲಿಸಿದರು.

ತಾ.ಪಂ. ಉಪಾಧ್ಯಕ್ಷ ರಾಜೇಂದ್ರ ಪಂದುಬೆಟ್ಟು, ತಹಶೀಲ್ದಾರ್‌ ಪ್ರದೀಪ್‌ ಕುಡೇìಕರ್‌, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ನೀತಾ ಗುರುರಾಜ್‌, ತಾ.ಪಂ. ಸದಸ್ಯರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next