ದಾವಣಗೆರೆ: ಎರಡು ವರ್ಷದ ಕಾಲಾವಧಿಯನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ಬಿಇಡಿ ಪ್ರಶಿಕ್ಷಣಾರ್ಥಿಗಳು ಉತ್ತಮ, ಪರಿಪೂರ್ಣ ಹಾಗೂ ಪರಿಪಕ್ವತೆಯ ಭಾವಿ ಶಿಕ್ಷಕರಾಗಿ ಹೊರ ಹೊಮ್ಮುವಂತಾಗಬೇಕು ಎಂದು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಉಪ ಪ್ರಾಚಾರ್ಯ ಕೆ.ಸಿ. ಮಲ್ಲಿಕಾರ್ಜುನ್ ಸಲಹೆ ನೀಡಿದರು.
ಮಾಕನೂರು ಮಲ್ಲೇಶಪ್ಪ ಶಿಕ್ಷಣ ಮಹಾವಿದ್ಯಾಲಯ ಆಶ್ರಯದಲ್ಲಿ ಮಂಗಳವಾರ ಜಿಲ್ಲಾ ಮತ್ತು ಶಿಕ್ಷಣ ತರಬೇತಿ ಸಂಸ್ಥೆಯಲ್ಲಿ ಏರ್ಪಡಿಸಿದ್ದ ಡಯಟ್ ಕಾರ್ಯಕ್ಷೇತ್ರ ಹಾಗೂ ಕಾರ್ಯವೈಖರಿ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಹಿಂದಿನಂತೆ ಬಿಇಡಿ ಒಂದು ವರ್ಷದ ಅವಧಿಯ ಕೋರ್ಸ್ ಆಗಿಲ್ಲ. ಎರಡು ವರ್ಷದಷ್ಟು ಸಮಯ ದೊರೆಯುತ್ತದೆ. ಓರ್ವ ಪರಿಪೂರ್ಣ ಹಾಗೂ ಪರಿಪಕ್ವತೆಯ ಭಾವಿ ಶಿಕ್ಷಕರಾಗಿ ಸಜ್ಜಾಗುವ ನಿಟ್ಟಿನಲ್ಲಿ ಸಮಯವನ್ನು ಬಳಸಿಕೊಳ್ಳಬೇಕು ಎಂದು ತಿಳಿಸಿದರು.
ಈ ಹಿಂದೆ ಒಂದು ವರ್ಷದ ಬಿಇಡಿಯಲ್ಲಿ ಪ್ರಶಿಕ್ಷಣಾರ್ಥಿಗಳಿಗೆ ಹೆಚ್ಚಿನ ಬೋಧನಾ ಕೌಶಲ್ಯ ಕಲಿಸಲು ಸಮಯ ಲಭ್ಯವಾಗುತ್ತಿರಲಿಲ್ಲ. ಇರುವಂತಹ ಸಮಯದಲ್ಲೇ ಮಾಹಿತಿ, ಪ್ರಾತ್ಯಕ್ಷಿಕೆ, ತರಬೇತಿ, ಬೋಧನಾ ಕೌಶಲ್ಯ.. ಎಲ್ಲವನ್ನೂ ಕಲಿಸಬೇಕಿತ್ತು. ಅದರಂತೆ ಪ್ರಶಿಕ್ಷಣಾರ್ಥಿಗಳು ಕಲಿಯಬೇಕಿತ್ತು. ಈಗ ಹೆಚ್ಚಿನ ಸಮಯ ಉಪನ್ಯಾಸಕರ ಹಾಗೂ ಪ್ರಶಿಕ್ಷಣಾರ್ಥಿಗಳಿಗೆ ಸಿಕ್ಕಿದೆ ಎಂದು ತಿಳಿಸಿದರು.
ಪ್ರಶಿಕ್ಷಣಾರ್ಥಿಗಳು ಪಠ್ಯದ ಜೊತೆಗೆ ಪ್ರಾಯೋಗಿಕತೆ, ಪ್ರಾತ್ಯಕ್ಷತೆಯತ್ತ ಹೆಚ್ಚಿನ ಗಮನ ನೀಡಬೇಕು. ಕೋರ್ಸ್ ಅವಧಿಯಲ್ಲಿಯೇ ಉತ್ತಮ ಗುಣಮಟ್ಟದ ಬೋಧನಾ ಕೌಶಲ್ಯ, ಶೈಲಿ ಬೆಳೆಸಿಕೊಳ್ಳಬೇಕು. ಈಗಲೇ ಎಲ್ಲವನ್ನೂ ಕಲಿಯುವುದರಿಂದ ಮುಂದೆ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಬಹುದು. ಅತ್ಯುತ್ತಮ ಶಿಕ್ಷಕರಾಗಬಹುದು ಎಂದು ತಿಳಿಸಿದರು.
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಪ್ರಾಚಾರ್ಯ ಎಚ್.ಕೆ. ಲಿಂಗರಾಜು ಮಾತನಾಡಿ, ಮ್ಯಾಂಚೆಸ್ಟರ್ ಎಂದೇ ಖ್ಯಾತವಾಗಿದ್ದ ದಾವಣಗೆರೆ ಈಗ ಶಿಕ್ಷಣದ ನಗರಿ ಆಗುತ್ತಿದೆ. ಉತ್ತಮ ಶಿಕ್ಷಣ ಒದಗಿಸುವ ಹಲವಾರು ಶಿಕ್ಷಣ ಸಂಸ್ಥೆ ಇವೆ. ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಅನೇಕಾನೇಕ ಉತ್ತಮ ಶಿಕ್ಷಕರನ್ನು ರೂಪಿಸಿ, ಸಮಾಜ, ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆಯಾಗಿ ನೀಡಿದೆ ಮತ್ತು ಈಗಲೂ ನೀಡುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು. ಶಿಕ್ಷಕರಾಗಲು ಸಹ ಎಲ್ಲ ಕ್ಷೇತ್ರದಂತೆ ತೀವ್ರ ಪೈಪೋಟಿ ಇದೆ. ಬಿಇಡಿ, ಡಿಇಡಿಯಲ್ಲಿ ಉತ್ತಮ ಮಟ್ಟದಲ್ಲಿ ಅಧ್ಯಯನ ಮಾಡಿ, ಒಳ್ಳೆಯ ಬೋಧನಾ ಶೈಲಿ, ಕೌಶಲ್ಯ ಬೆಳೆಸಿಕೊಂಡವರು ಮುಂದೆ ಎಲ್ಲರೂ ಮೆಚ್ಚುವ ಶಿಕ್ಷಕರಾಗುತ್ತಾರೆ.
ಹಾಗಾಗಿ ಪ್ರತಿಯೊಬ್ಬ ಪ್ರಶಿಕ್ಷಣಾರ್ಥಿ ಶ್ರದ್ಧೆ, ಪರಿಶ್ರಮ, ಒಳ್ಳೆಯ ಶಿಕ್ಷಕರಾಗಿ, ಸಮಾಜ ಸೇವೆ ಮಾಡಬೇಕು ಎಂಬ ಉದಾತ್ತ ಚಿಂತನೆಯೊಂದಿಗೆ ಅಭ್ಯಾಸ ಮಾಡಿ ಉತ್ತಮ ಶಿಕ್ಷಕರಾಗುವ ಜೊತೆಗೆ ಭವ್ಯಜೀವನ ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು. ಮಾಕನೂರು ಮಲ್ಲೇಶಪ್ಪ ಶಿಕ್ಷಣ ಮಹಾವಿದ್ಯಾಲಯ ಪ್ರಾಚಾರ್ಯ ಡಾ| ಎಚ್. ಮಲ್ಲಿಕಾರ್ಜುನಪ್ಪ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ
ಸಂಸ್ಥೆ ಉಪನ್ಯಾಸಕರಾದ ಜಿ.ಎಸ್. ರಾಜಶೇಖರ್, ಎನ್. ಲೋಲಾಕ್ಷಿ, ಸಹ ಪ್ರಾಧ್ಯಾಪಕ ಸಂತೋಷ್, ನಾಗರಾಜನಾಯ್ಕ ಇದ್ದರು.