Advertisement
ಪ್ರಸಕ್ತ ಸಾಲಿನ ನೂತನ “ಕಲಿಕಾ ಚೇತರಿಕೆ’ ಕಾರ್ಯಕ್ರಮದ ಅನುಷ್ಠಾನಕ್ಕೆ ಬೇಕಾದ ಅಗತ್ಯ ಕಲಿಕಾ ಹಾಳೆಗಳು, ಶಿಕ್ಷಕರ ಕೈಪಿಡಿಗಳು ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಕೈ ಸೇರದೇ ಇರುವುದರಿಂದ ಕಲಿಕಾ ಚೇತರಿಕೆ ಕಾರ್ಯಕ್ರಮ ಆರಂಭಿಕ ವಿಘ್ನ ಎದುರಿಸುವಂತಾಗಿದ್ದು, ಕಲಿಕಾ ಚೇತರಿಕೆಗೆ ಭಾರೀ ಹಿನ್ನಡೆಯಾಗಿದೆ.
Related Articles
Advertisement
ಕಲಿಕಾ ಚೇತರಿಕೆ ಕಾರ್ಯಕ್ರಮ ಈ ಹಿಂದಿನ ಶೈಕ್ಷಣಿಕ ವರ್ಷಗಳಲ್ಲಿದ್ದ “ಸೇತುಬಂಧ’ ಮಾದರಿ ಯಲ್ಲೇ ಇದ್ದರೂ ಮೂರು ವರ್ಷಗಳ ಕಲಿಕಾ ಕೊರತೆ ನೀಗಿಸಲು ವಿಶೇಷ ಚಟುವಟಿಕೆ ಅಳವಡಿಸಿ ರೂಪಿಸಿದ ಕಾರ್ಯಕ್ರಮ ಇದಾಗಿತ್ತು. ಸಾಮಾನ್ಯವಾಗಿ ಪ್ರತಿ ವರ್ಷ “ಸೇತುಬಂಧ’ ಕಾರ್ಯಕ್ರಮವನ್ನು ಒಂದು ತಿಂಗಳು ನಡೆಸಲಾಗುತ್ತದೆ. ಆದರೆ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳ ಹಿಂದಿನ ಮೂರು ವರ್ಷಗಳ ಕಲಿಕಾ ಕೊರತೆ ಸರಿದೂಗಿಸ ಬೇಕಾಗಿರುವುದರಿಂದ “ಕಲಿಕಾ ಚೇತರಿಕೆ’ ಕಾರ್ಯಕ್ರಮವನ್ನು ಒಂದೂವರೆ ತಿಂಗಳು ನಡೆಸಲು ಇಲಾಖೆ ಯೋಜನೆ ಹಾಕಿ ಕೊಂಡಿತ್ತು. ಆದರೆ ಒಂದು ತಿಂಗಳು ಕಳೆದರೂ ಶುರುವಾಗಿಲ್ಲ.
ಸಿದ್ಧವಾಗಿದೆ, ಪೂರೈಕೆಯಾಗಿಲ್ಲ: “ಕಲಿಕಾ ಚೇತರಿಕೆ’ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳ ಕಲಿಕಾ ಕೊರತೆ ಯಾವ ರೀತಿ ಸರಿದೂಗಿಸಬೇಕು ಎಂಬ ಕುರಿತು ಸಮಗ್ರ ಶಿಕ್ಷಣ ಕರ್ನಾಟಕದ ನಿರ್ದೇಶನದಂತೆ ಡಿಎಸ್‌ಇಆರ್‌ಟಿ ವತಿಯಿಂದ ಹೊಸ ಮಾರ್ಗಸೂಚಿ ಸಿದ್ಧಪಡಿಸುವ ಕಾರ್ಯ ಆಗಿದೆ. ಇದಕ್ಕೆ ಬೇಕಾದ ಕಲಿಕಾ ಹಾಳೆ, ಶಿಕ್ಷಕರ ಕೈಪಿಡಿಯೂ ಸಿದ್ಧವಾಗಿದೆ. ಇವುಗಳನ್ನು ಆನ್‌ಲೈನ್ ನಲ್ಲಿಯೂ ಪ್ರಕಟಿಸಲಾಗಿದೆ. ಆದರೆ ಅವುಗಳನ್ನು ಮುದ್ರಿಸಿ ಪೂರೈಸುವ ಕಾರ್ಯ ಆಗಿಲ್ಲ. ಹೀಗಾಗಿ ಕಲಿಕಾ ಚೇತರಿಕೆ’ ಕಾರ್ಯಕ್ರಮ ಆರಂಭಕ್ಕೂ ಮೊದಲೇ ಕಮರಿದಂತಾಗಿದೆ.
ಮಕ್ಕಳಲ್ಲಿನ ಕಲಿಕಾ ಕೊರತೆ ತುಂಬುವ ಉದ್ದೇಶದಿಂದ ಸಾರ್ವಜನಿಕ ಶಿಕ್ಷಣ ಇಲಾಖೆ, ಈ ವರ್ಷ 15 ದಿನ ಮುಂಚಿತವಾಗಿಯೇ ಅಂದರೆ ಮೇ 15ರಿಂದಲೇ ಶಾಲೆಗಳನ್ನು ಪುನಾರಂಭಗೊಳಿ ಸಿತ್ತು. ಶಿಕ್ಷಕರು ಬೇಸಿಗೆ ರಜೆಯಲ್ಲಿರುವಾಗಲೇ ಅವರನ್ನು ಕರೆಸಿ “ಕಲಿಕಾ ಚೇತರಿಕೆ’ ಕಾರ್ಯಕ್ರಮದ ಕುರಿತು ತರಬೇತಿ ನೀಡುವ ವ್ಯವಸ್ಥೆಯನ್ನೂ ಮಾಡಿತ್ತು.
ಆದರೆ ಸಕಾಲಕ್ಕೆ ಕಲಿಕಾ ಹಾಳೆ ಹಾಗೂ ಶಿಕ್ಷಕರ ಕೈಪಿಡಿ ಪೂರೈಕೆ ಮಾಡಲು ಆಸಕ್ತಿ ವಹಿಸದೇ ಇರುವುದರಿಂದ ಬಹು ನಿರೀಕ್ಷಿತ ಕಾರ್ಯಕ್ರಮಕ್ಕೆ ಭಾರೀ ಹಿನ್ನಡೆಯಾಗಿದೆ. ಇದು ಪರೋಕ್ಷವಾಗಿ ಮತ್ತೆ ಮಕ್ಕಳ ಕಲಿಕೆಯ ಮೇಲೆಯೇ ದುಷ್ಪರಿ ಣಾಮಕ್ಕೆ ದಾರಿಯಾಗಿರುವುದು ದುರಂತ.
ಮುದ್ರಣವೇ ಆಗಿಲ್ಲ?
ಕಲಿಕಾ ಕೊರತೆ ಸರಿದೂಗಿಸುವ “ಕಲಿಕಾ ಚೇತರಿಕೆ’ ಕಾರ್ಯಕ್ರಮ ಅನುಷ್ಠಾನಕ್ಕೆ ಬೇಕಾದ ಕಲಿಕಾ ಹಾಳೆಗಳು, ಶಿಕ್ಷಕರ ಕೈಪಿಡಿ ಇನ್ನೂ ಮುದ್ರಣವೇ ಆಗಿಲ್ಲ. ಮುದ್ರಣಕ್ಕೆ ಕಾಗದದ ಸಮಸ್ಯೆ ಎದುರಾಗಿದೆ ಎಂದು ಕೆಲವು ಮೂಲಗಳು ಹೇಳಿದರೆ, ಪಠ್ಯಪುಸ್ತಕ ಪರಿಷ್ಕರಣೆ ಗೊಂದಲದಿಂದಾಗಿ ಇಲಾಖೆ ಈ ಕಾರ್ಯಕ್ರಮ ಅನುಷ್ಠಾನದತ್ತ ಉದಾಸೀನ ಮಾಡಿದೆ ಎಂದು ಮತ್ತೆ ಕೆಲವರು ಆರೋಪಿಸುತ್ತಿದ್ದಾರೆ. ಇದಕ್ಕೆ ಇಲಾಖೆ ಮುಖ್ಯಸ್ಥರು ಹಾಗೂ ಇಲಾಖೆಯ ಸಚಿವರೇ ಸ್ಪಷ್ಟನೆ ನೀಡಬೇಕಿದೆ.
“ಕಲಿಕಾ ಚೇತರಿಕೆ’ ಕಾರ್ಯಕ್ರಮ ಅನುಷ್ಠಾನಕ್ಕೆ ಬೇಕಾದ ಕಲಿಕಾ ಹಾಳೆ, ಶಿಕ್ಷಕರ ಕೈಪಿಡಿ ಇನ್ನೂ ಪೂರೈಕೆಯಾಗಿಲ್ಲ. ಸದ್ಯಕ್ಕೆ ಶಾಲಾನುದಾನ ಬಳಸಿಕೊಂಡು ಝೆರಾಕ್ಸ್ ಮಾಡಿಸಿಕೊಳ್ಳಬೇಕು. ಅನುದಾನ ಬಾರದೇ ಇದ್ದರೆ ಶಿಕ್ಷಕರು ಸ್ವಂತ ಖರ್ಚಿನಲ್ಲಿ ಮಾಡಿಸಿಕೊಂಡು ಅನುದಾನ ಬಂದ ಬಳಿಕ ಹಣ ಪಡೆಯಲು ಶಾಲಾ ಮುಖ್ಯಾಧ್ಯಾಪಕರಿಗೆ ಸೂಚಿಸಿದ್ದೇವೆ. ●ನಿರಂಜನಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ, ದಾವಣಗೆರೆ
-ಎಚ್.ಕೆ. ನಟರಾಜ