ಹುಬ್ಬಳ್ಳಿ: ಕನ್ನಡ ಮಾಧ್ಯಮದಲ್ಲಿ ಕಲಿತ ಮಕ್ಕಳಿಗೆ ಮಾತ್ರ ಸರ್ಕಾರಿ ಉದ್ಯೋಗ ನೀಡಲಾಗುವುದೆಂಬ ಕಾಯ್ದೆ ಮಾಡಿದರೆ ಮಾತ್ರ ಕನ್ನಡ ಮಾಧ್ಯಮ ಶಾಲೆಗಳು ಉಳಿಯಲು ಸಾಧ್ಯ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮಿಗಳು ಹೇಳಿದರು.
ಸದ್ಗುರು ಸಿದ್ಧಾರೂಢ ಪ್ರೌಢಶಾಲೆ ಹಾಗೂ ಗುರುದೇವ ವಿದ್ಯಾ ಸಮಿತಿಯ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ವಿಜ್ಞಾನ ಮಂದಿರ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು. ಸರ್ಕಾರ ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚುವ ಅವಶ್ಯಕತೆಯಿಲ್ಲ.
ಸರ್ಕಾರಿ ಉದ್ಯೋಗವನ್ನು ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕಲಿತವರಿಗೆ ಮಾತ್ರ ನೀಡುವಂತಾದರೆ ಸಿರಿವಂತರು ಹಾಗೂ ಬಡವರ ಮಕ್ಕಳು ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕಲಿಯುತ್ತಾರೆ ಎಂದರು. ಪಾಲಕರು ಮಕ್ಕಳ ಮೇಲೆ ಬಂಡವಾಳ ಹೂಡುತ್ತಿದ್ದಾರೆ. ಅವರು ಮುಂದೆ ಪದವಿ ಪಡೆದು ಹಣ ಗಳಿಸಬಹುದೆಂಬ ಮಹದಾಸೆ ಪಾಲಕರದಾಗಿದೆ.
ಆದರೆ ಸಂಸ್ಕಾರ ನೀಡದೇ ಕೇವಲ ಶಿಕ್ಷಣ ನೀಡಿದರೆ ಮುಂದೆ ಮಕ್ಕಳು ಪಾಲಕರನ್ನು ವೃದ್ಧಾಶ್ರಮಕ್ಕೆ ಸೇರಿಸಿ ಪಾಲಕರು ಹೂಡಿದ ಬಂಡವಾಳವನ್ನು ಹಿಂದಿರುಗಿಸುತ್ತಾರೆ ಎಂದು ತಿಳಿಸಿದರು. ವಿಜ್ಞಾನ ಮಂದಿರ ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ಮಕ್ಕಳಿಗೆ ಅಂಕಗಳ ಆಧಾರಿತ ಶಿಕ್ಷಣ ನೀಡದೇ ನೀತಿ ಪಾಠ ಹೇಳಿಕೊಡಲು ಆದ್ಯತೆ ನೀಡಬೇಕು.
ಹೆಚ್ಚಿನ ಕಾನ್ವೆಂಟ್ ಶಾಲೆಗಳಲ್ಲಿ ಅಂಕಗಳಿಗೆ ಪ್ರಾಧಾನ್ಯತೆ ನೀಡಲಾಗುತ್ತದೆಯೇ ಹೊರತು ಪಠ್ಯೇತರ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವುದಿಲ್ಲ ಎಂದು ತಿಳಿಸಿದರು. ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ದೀನ ದಲಿತ ಮಕ್ಕಳಿಗೆ ಶಿಕ್ಷಣ ನೀಡುತ್ತಿರುವ ಶಾಲೆಯ ಕಾರ್ಯ ಶ್ಲಾಘನೀಯ. ಶಾಲೆ ಆವರಣದಲ್ಲಿ ಪೇವರ್ ಜೋಡಿಸಲು ಹಾಗೂ ಸಭಾಭವನ ನಿರ್ಮಿಸಲು ಅಗತ್ಯ ಅನುದಾನ ನೀಡುವುದಾಗಿ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರನ್ನು ಸತ್ಕರಿಸಲಾಯಿತು. 7ನೇ ಹಾಗೂ 10ನೇ ತರಗತಿ ವಿದ್ಯಾರ್ಥಿಗಳನ್ನು ಬೀಳ್ಕೊಡಲಾಯಿತು. ಎಲ್. ಎಂ. ಅಯ್ಯನಗೌಡರ ವರದಿ ವಾಚಿಸಿದರು. ಪಾಲಿಕೆ ಸದಸ್ಯ ದಶರಥ ವಾಲಿ, ಶಿವಾಜಿ ಮಧೂರಕರ, ಜಿಪಂ ಸದಸ್ಯ ಉಮೇಶ ಹೆಬಸೂರ ಇದ್ದರು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.