Advertisement

ತರಬೇತಿಯಲ್ಲಿ ಕಾಲಹರಣ ಮಾಡದೇ ಕೆಲಸ ಕಲಿಯಿರಿ

09:16 PM Feb 29, 2020 | Lakshmi GovindaRaj |

ಚಿಕ್ಕಬಳ್ಳಾಪುರ: ವೈದ್ಯಕೀಯ ಕ್ಷೇತ್ರದಲ್ಲಿ ತಜ್ಞರಿಗೆ ವಿಫ‌ುಲವಾದ ಅವಕಾಶಗಳು ಇರುವುದರಿಂದ ವಿದ್ಯಾರ್ಥಿಗಳು ತರಬೇತಿ ಅವಧಿಯಲ್ಲಿ ಕಾಲಹರಣ ಮಾಡದೇ ಕೆಲಸ ಚೆನ್ನಾಗಿ ಕಲಿಯಬೇಕು. ಕೈಯಲ್ಲಿ ಒಳ್ಳೆಯ ಕೆಲಸ ಇದ್ದಾಗ ಉದ್ಯೋಗ ಲಭಿಸುತ್ತದೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಎನ್‌.ನಾಗಾಂಬಿಕಾದೇವಿ ಹೇಳಿದರು.

Advertisement

ನಗರದ ಜಿಲ್ಲಾಡಳಿತ ಭವನದಲ್ಲಿರುವ ಸಭಾಂಗಣದ ಜಿಲ್ಲಾಡಳಿತ, ಜಿಪಂ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಕೌಶಲ್ಯ ತರಬೇತಿ ಹಾಗೂ ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿ, ವೈದ್ಯಕೀಯ ರಂಗದಲ್ಲಿ ಉದ್ಯೋಗಿಗಳಿಗೆ ಹೆಚ್ಚು ಬೇಡಿಕೆ ಇರುವುದರಿಂದ ವಿದ್ಯಾರ್ಥಿಗಳು ಕೌಶಲ್ಯ ತರಬೇತಿ ಸದ್ಬಳಕೆ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು.

ಸೇವಾ ಮನೋಭಾವದಿಂದ ನೋಡಿ: ಉದ್ಯೋಗ ಗಿಟ್ಟಿಸಿಕೊಳ್ಳುವುದಕ್ಕಾಗಿ ಅಥವಾ ಶಿಷ್ಯ ವೇತನ ಪಡೆಯಲಿಕ್ಕೆ ಯಾರು ಕೂಡ ತರಬೇತಿ ಪಡೆಯಬಾರದು. ಒಳ್ಳೆಯ ತರಬೇತಿ ಪಡೆದು ಜ್ಞಾನವಂತರಾದರೆ ಸಮಾಜಕ್ಕೆ ಒಳ್ಳೆಯ ಸೇವೆ ಸಿಗುತ್ತದೆ. ಆದ್ದರಿಂದ ಯಾವುದೇ ತರಬೇತಿಯನ್ನು ವ್ಯವಹಾರಿಕ ದೃಷ್ಟಿಯಿಂದ ನೋಡದೇ ಸೇವಾ ಮನೋಭಾವನೆಯಿಂದ ಪಡೆಯಬೇಕೆಂದರು.

ಜಿಪಂ ಸಿಇಒ ಬಿ.ಫೌಝೀಯಾ ತರುನ್ನುಮ್‌ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಯಾವುದೇ ಕೆಲಸಕ್ಕೆ ಕೌಶಲ್ಯಭರಿತ ವಿದ್ಯಾರ್ಥಿಗಳ ಅವಶ್ಯಕತೆಯಿದ್ದು, ಇದರಿಂದ ಕೌಶಲ್ಯಯುಕ್ತ ತರಬೇತಿ ಪ್ರತಿಯೊಬ್ಬ ಅಭ್ಯರ್ಥಿಗಳು ಪಡೆದುಕೊಳ್ಳಬೇಕು. ಇದರಿಂದ ಸಮಾಜದಲ್ಲಿ ಸ್ವಾವಲಂಬಿ ಜೀವನ ನಡೆಸಬಹುದು ಎಂದರು. ತರಬೇತಿ ಪಡೆಯುವ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಬಹಳ ಮುಖ್ಯ. ಯಾರು ಕೂಡ ಇಂತಹ ಅವಕಾಶಗಳಿಂದ ದೂರ ಉಳಿಯಬಾರದು ಎಂದರು.

ತಾಂತ್ರಿಕ ಹುದ್ದೆಗಳಿಗೆ ಕೌಶಲ್ಯಾಭಿವೃದ್ಧಿ ತರಬೇತಿ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ.ಎಂ.ಬಿ.ಯೋಗೇಶ್‌ಗೌಡ ಮಾತನಾಡಿ, ಉದ್ಯೋಗ ಮೇಳದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾನ್ಯತೆ ಪಡೆದ ಬೆಂಗಳೂರಿನ ಅಪೋಲೊ ಮೆಡಿಸ್ಕಿಲ್ಸ್‌, ಎಂ.ಎಸ್‌. ರಾಮಯ್ಯ ಆಸ್ಪತ್ರೆ, ನಾರಾಯಣ ಹೃದಯಾಲಯ ಖಾಸಗಿ ಆಸ್ಪತ್ರೆಗಳಲ್ಲಿ ವಿವಿಧ ತಾಂತ್ರಿಕ ಹುದ್ದೆಗಳಿಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡಲಾಗುತ್ತದೆ.

Advertisement

ಇಂದಿನ ಮೇಳದಲ್ಲಿ 165 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ವಿವಿಧ ಆಸ್ಪತ್ರೆಗಳಿಗೆ ಆಯ್ಕೆಗೊಳ್ಳುವ ಅಭ್ಯರ್ಥಿಗಳಿಗೆ ಆಯಾ ಆಸ್ಪತ್ರೆಗಳಲ್ಲಿಯೇ ಊಟ, ವಸತಿ, ಶಿಷ್ಯ ವೇತನ ನೀಡಿ ತರಬೇತಿ ನೀಡಲಾಗುತ್ತದೆ. ತರಬೇತಿ ನಂತರ ಆಸ್ಪತ್ರೆಗಳಲ್ಲಿ ಉದ್ಯೋಗಾವಕಾಶ ಕಲ್ಪಿಸಲಾಗುತ್ತದೆ ಎಂದರು. ಅಪರ ಜಿಲ್ಲಾಧಿಕಾರಿ ಆರತಿ, ಜಿಪಂ ಉಪಕಾರ್ಯದರ್ಶಿ ನೋಮೇಶ್‌ ಕುಮಾರ್‌, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಸೇರಿದಂತೆ ಉದ್ಯೋಗಾಕಾಂಕ್ಷಿಗಳು ಉಪಸ್ಥಿತರಿದ್ದರು.

165 ವಿದ್ಯಾರ್ಥಿಗಳು ನೋಂದಣಿ: ರಾಜಧಾನಿ ಬೆಂಗಳೂರಿನ ಅಪೋಲೋ, ಎಂ.ಎಸ್‌.ರಾಮಯ್ಯ ಹಾಗೂ ನಾರಾಯಣ ಹೃದಯಲಯದಲ್ಲಿ ವಿವಿಧ ತಾಂತ್ರಿಕ ಹುದ್ದೆಗಳು ಸುಮಾರು 250 ಕ್ಕೂ ಹೆಚ್ಚು ಇದ್ದರೂ ಮೇಳಕ್ಕೆ ಆಗಮಿಸಿದ್ದು ಮಾತ್ರ ಬರೀ 165 ವಿದ್ಯಾರ್ಥಿಗಳು ಮಾತ್ರ. ಹೀಗಾಗಿ ಬೇಡಿಕೆಗೆ ತಕ್ಕಂತೆ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳು ಮೇಳಕ್ಕೆ ಆಗಮಿಸಲಿಲ್ಲ. ಬೆಳಗ್ಗೆಯಿಂದ ಮಧ್ಯಾಹ್ನ 3 ಗಂಟೆಯವರೆಗೂ ನೋಂದಣಿ ನಡೆದರೂ ಕೇವಲ 165 ಮಂದಿ ಮಾತ್ರ ನೋಂದಣಿಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next