ಬನಹಟ್ಟಿ: ಪ್ರತಿಯೊಬ್ಬರು ತಮ್ಮ ತಮ್ಮ ವೃತ್ತಿಯನ್ನು ಪ್ರೀತಿಸುವುದನ್ನು ಕಲಿಯಬೇಕು. ಅದೇ ರೀತಿ ನಾನು ನನ್ನ ಶಿಕ್ಷಕ ವೃತ್ತಿಯನ್ನು ಪ್ರೀತಿಸುವುದರಿಂದ ನಾನು ಶಿಕ್ಷಕಿ ಎಂದು ಹೆಮ್ಮೆಯಿಂದ ಹೇಳುತ್ತೇನೆ ಎಂದು ಜಮಖಂಡಿಯ ಸಾಹಿತಿ ಡಾ. ಶಾರದಾ ಮುಳ್ಳೂರ ಹೇಳಿದರು. ನಗರದ ಸ.ಜ. ನಾಗಲೋಟಿಮಠ ಸಾಹಿತ್ಯ ಪ್ರತಿಷ್ಠಾನ ವೇದಿಕೆಯಲ್ಲಿ ಜರುಗಿದ ಪತ್ರಿಕಾ ದಿನಾಚರಣೆಯಲ್ಲಿ ಪಾಲ್ಗೊಂಡು ಅವರು ಉಪನ್ಯಾಸ ನೀಡಿ ಮಾತನಾಡಿದರು. ಸಮನ್ವಯ ಹಾಗೂ ಬಹು ಭಾಷೆ, ಭಿನ್ನ ಸಂಸ್ಕೃತಿಯನ್ನು ಕ್ರೋಢೀಕರಿಸುವ ತಾಕತ್ತು ಪತ್ರಿಕಾ ರಂಗಕ್ಕಿದೆ. ಇದು ನಿತ್ಯ ಜಗತ್ತಿನ ದಿನಚರಿಯನ್ನು ತೋರಿಸುತ್ತದೆ. ಸ್ಥಳೀಯ ಪತ್ರಿಕೆಗಳನ್ನು ನಿರ್ಲಕ್ಷಿಸಬಾರದು. ಪತ್ರಿಕೆಯು ತನ್ನ ಜವಾಬ್ದಾರಿಯನ್ನು ಅರಿತು ಸಮಾಜ ತಿದ್ದುವ ಕಾರ್ಯದಲ್ಲಿ ತೊಡಗುತ್ತಿದ್ದು, ಸಂಪೂರ್ಣ ಸ್ವಾತಂತ್ರ್ಯದ ಹಕ್ಕು ಸ್ಥಾಪಿಸಿರುವ ಪತ್ರಿಕಾ ರಂಗವು ಎಂದಿಗೂ ಮಾನವೀಯ ಮೌಲ್ಯಗಳನ್ನು ಕಳೆದುಕೊಳ್ಳಬಾರದು ಎಂದರು.
ಶಾಸಕ ಸಿದ್ದು ಸವದಿ ಮಾತನಾಡಿ, ದೇಶದ ಸರ್ವ ಶ್ರೇಷ್ಠ ರಂಗ ಅದು ಪತ್ರಿಕಾ ರಂಗವಾಗಿದೆ. ನೈಜ ವರದಿಗೆ ಪತ್ರಕರ್ತ ಪ್ರಾಧಾನ್ಯತೆ ನೀಡುವ ಮೂಲಕ ಆಸೆ-ಆಮಿಷಗಳಿಂದ ದೂರ ಉಳಿದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಕಾರಣವಾಗುವುದು. ಒಟ್ಟಾರೆ ಪತ್ರಿಕಾ ರಂಗವು ಸಮಾಜದ ಅಂಕು-ಡೊಂಕುಗಳನ್ನು ತಿದ್ದಲು ಬಾರು ಕೋಲುವಿದ್ದಂತೆ ಎಂದು ಹೇಳಿದರು. ಪ್ರಸಕ್ತ ವರ್ಷದಲ್ಲಿಯೇ ರಬಕವಿ-ಬನಹಟ್ಟಿ ತಾಲೂಕಿಗೆ ಸಂಬಂಧ ನೂತನ ಪತ್ರಿಕಾ ಭವನ ನಿರ್ಮಿಸಿ ಕೊಡುವುದಾಗಿ ಭರವಸೆ ನೀಡಿದರು.
ಜೆಡಿಎಸ್ ಮುಖಂಡ ಬಸವರಾಜ ಕೊಣ್ಣೂರ ಮಾತನಾಡಿ, ಜಾಗತೀಕರಣದಲ್ಲಿ ಪತ್ರಕರ್ತರ ಜವಾಬ್ದಾರಿ ಹೆಚ್ಚಾಗಿದೆ. ಯುವ ಜನತೆಗೆ ಹಿತ ಬಯಸುವ ಹಾಗೂ ಹೊಸ ಆಯಾಮಗಳಿಂದ ಕೂಡಿದ ಪತ್ರಿಕೆಗಳಾಗಿ ಹೊರಹೊಮ್ಮುತ್ತ, ದೇಶವನ್ನು ಅಭಿವೃದ್ಧಿಯತ್ತ ಸಾಗಲು ಪತ್ರಿಕಾ ರಂಗದ ಪಾತ್ರ ಹಿರಿದಾಗಿದೆ ಎಂದರು.
ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಮಹೇಶ ಅಂಗಡಿ ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಕಾಶ ಬಾಳಕ್ಕನವರ, ಜಿಲ್ಲಾ ಉಪಾಧ್ಯಕ್ಷ ಆನಂದ ದಲಭಂಜನ ಮಾತನಾಡಿದರು. ಸಂಘದ ಗೌರವಾಧ್ಯಕ್ಷ ಮಲ್ಲಿಕಾರ್ಜುನ ಹುಲಗಬಾಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾನಿಪ ಸಂಘದ ಅಧ್ಯಕ್ಷ ಕಿರಣ ಆಳಗಿ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಕಾಶ ಬಾಳಕ್ಕನವರ, ಜಿಲ್ಲಾ ಉಪಾಧ್ಯಕ್ಷ ಆನಂದ ದಲಭಂಜನ ಆಗಮಿಸಿದ್ದರು. ಸಂಘದ ಗೌರವಾಧ್ಯಕ್ಷ ನೀಲಕಂಠ ದಾತಾರ, ಸಾಹಿತಿಗಳಾದ ಜಯವಂತ ಕಾಡದೇವರ, ಜಿ.ಎಸ್. ವಡಗಾಂವಿ, ಶಿವಜಾತ ಉಮದಿ, ಶ್ರೀಶೈಲ ಕೋಪರ್ಡೆ, ವಿಶ್ವಜ ಕಾಡದೇವರ, ಯಶವಂತ ವಾಜಂತ್ರಿ, ಎಸ್.ಎಂ. ಮೇಟಿಪಾಟೀಲ, ಪ್ರಕಾಶ ಕುಂಬಾರ, ಜೆ.ಯು. ಮೊಹ್ಮದ್, ಚಂದ್ರಶೇಖರ ಮೋರೆ, ರಾಮು ಕಾಡಾಪುರ, ಬಸವರಾಜ ಪಟ್ಟಣ, ಶಂಭು ಗುಣಕಿ, ರವೀಂದ್ರ ಅಷ್ಟಗಿ, ಮಹಾದೇವ ತೋಟಗೇರ, ಪ್ರಭು ಗುಣಕಿ ಉಪಸ್ಥಿತರಿದ್ದರು. ಮಲ್ಲಿಕಾರ್ಜುನ ತುಂಗಳ ಸ್ವಾಗತಿಸಿದರು. ಚಿದಾನಂದ ಕಾರಜೋಳ ನಿರೂಪಿಸಿದರು. ಬಸಯ್ಯ ವಸ್ತ್ರದ ವಂದಿಸಿದರು.