ಹುಬ್ಬಳ್ಳಿ: ಪ್ರಪಂಚದ ದೇಶಗಳೆಲ್ಲ ಭಾರತೀಯ ಸಿರಿವಂತ ಸಂಸ್ಕೃತಿ ಅರಿತುಕೊಳ್ಳಲು ಉತ್ಸುಕವಾಗಿದ್ದು, ನಾವು ಭಾರತೀಯರು ನಮ್ಮ ಸಂಸ್ಕೃತಿ ಉಳಿಸಿ-ಬೆಳೆಸಲು ಮುಂದಾಗಬೇಕು ಎಂದು ಬೆಂಗಳೂರಿನ ಅಲಾಯನ್ಸ್ ವಿಶ್ವವಿದ್ಯಾಲಯದ ಪ್ರದರ್ಶಕ ಕಲೆಗಳ ವಿಭಾಗದ ಮುಖ್ಯಸ್ಥ ಡಾ| ವಸಂತ ಕಿರಣ ಹೇಳಿದರು.
ಪಿ.ಸಿ.ಜಾಬಿನ್ ವಿಜ್ಞಾನ ಮಹಾವಿದ್ಯಾಲಯದಲ್ಲಿ ಸೋಮವಾರ ಆಯೋಜಿಸಿದ್ದ ಭಾರತೀಯ ಸಾಂಸ್ಕೃತಿಕ ಪರಂಪರೆಯ ಅಂತಾರಾಷ್ಟ್ರೀಯ ಉತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ಸಂಸ್ಕೃತಿ ಬಗ್ಗೆ ಎಲ್ಲ ದೇಶಬಾಂಧವರಿಗೆ ಹೆಮ್ಮೆ ಇರಬೇಕು. ವೈವಿಧ್ಯತೆಯಲ್ಲಿ ಏಕತೆ ನಮ್ಮ ಸಂಸ್ಕೃತಿಯ ವಿಶೇಷತೆ ಎಂದರು.
ನೃತ್ಯವನ್ನು ವಿಶ್ವಕ್ಕೆ ನೀಡಿದ್ದೇ ಭಾರತ. ಪಾಶ್ಚಾತ್ಯರಿಗೆ ಭಾರತೀಯರನ್ನು ಗೌರವಿಸುವುದಕ್ಕೆ ಮುಖ್ಯ ಕಾರಣವೇ ನಮ್ಮ ಸಂಸ್ಕೃತಿ. ನಾನು ಸುಮಾರು 25 ದೇಶಗಳಿಗೆ ಹೋಗಿ ಬಂದಿದ್ದು, ಅಲ್ಲಿನ ಜನರಿಗೆ ಭಾರತದ ಪರಂಪರೆ ಬಗ್ಗೆ ತಿಳಿದುಕೊಳ್ಳಬೇಕೆಂಬ ಮಹದಾಸೆಯಿರುವುದು ಗೊತ್ತಾಗುತ್ತದೆ ಎಂದು ತಿಳಿಸಿದರು.
ನಾವು ಏನೇ ಸಾಧನೆ ಮಾಡಿದರೂ ನಾವು ಕಲಿತ ಕಾಲೇಜು ಹಾಗೂ ನಮಗೆ ಬೋಧಿಸಿದ ಗುರುಗಳನ್ನು ಎಂದಿಗೂ ಮರೆಯಬಾರದು. ಜಾಬಿನ್ ಕಾಲೇಜಿನಲ್ಲಿ ನನಗೆ ನೃತ್ಯ ಪ್ರದರ್ಶನಕ್ಕೆ ಅವಕಾಶ ನೀಡಿದ್ದರಿಂದ ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆಯಲು ಸಾಧ್ಯವಾಯಿತು. ವಿದ್ಯಾರ್ಥಿಗಳ ಪ್ರತಿ ಯಶಸ್ಸು ನಮಗೆ ಕಲಿಸಿದ ಗುರುಗಳ ಸಂತಸವನ್ನು ಇಮ್ಮಡಿಗೊಳಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಕೆನಡಾದ ಎಮಿಲಿ ಮಾತನಾಡಿ, ಭಾರತದ ಸಂಸ್ಕೃತಿ ಅದ್ಭುತವಾಗಿದೆ. ಇಲ್ಲಿನ ಸಂಸ್ಕೃತಿಯನ್ನು ಅರಿತುಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ಭಾರತದ ಪ್ರತಿಯೊಂದು ಭಾಗವೂ ವಿಭಿನ್ನವಾಗಿ ಗೋಚರಿಸುತ್ತದೆ. ಜನರ ಭಾಷೆ, ಸಂಸ್ಕೃತಿಯಲ್ಲಿ ಭಿನ್ನತೆಯಿದ್ದರೂ ಎಲ್ಲರೂ ಒಗ್ಗಟ್ಟಾಗಿರುವುದು ವಿಶೇಷ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಂಕ್ರಣ್ಣ ಮುನವಳ್ಳಿ ಮಾತನಾಡಿ, ನಮ್ಮ ಕಾಲೇಜಿನಲ್ಲಿ ಕಲಿತ ವಿದ್ಯಾರ್ಥಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುತ್ತಿರುವುದು ಹೆಮ್ಮೆಯ ಸಂಗತಿ. ವಿಶ್ವದ ಇತರ ದೇಶಗಳಲ್ಲಿ ನಮ್ಮ ವಿದ್ಯಾರ್ಥಿಯೂ ಭಾರತೀಯ ಸಂಸ್ಕೃತಿ ಪ್ರದರ್ಶಿಸುತ್ತಿರುವ ಬಗ್ಗೆ ನಾವೆಲ್ಲರೂ ಹೆಮ್ಮೆ ಪಡಬೇಕು ಎಂದರು.
ಪ್ರಾಚಾರ್ಯ ಡಾ| ಎಸ್.ವಿ. ಹಿರೇಮಠ, ಜೆ.ಪಿ. ಜಾಬಿನ್ ಇದ್ದರು. ವಿದ್ಯಾರ್ಥಿಗಳು ಭಾರತೀಯ ಸಂಸ್ಕೃತಿ ಬಿಂಬಿಸುವ ವೇಷದೊಂದಿಗೆ ಆಗಮಿಸಿದ್ದರು. ಶಿವಾಜಿ ಭೀಮಪ್ಪ ಹಾಗೂ ತುಳಜಮ್ಮ ಹಾಗೂ ಸಂಗಡಿಗರು ಸೋಬಾನ ಪದಗಳನ್ನು ಪ್ರಸ್ತುತಪಡಿಸಿದರು. ಡಾ| ವಸಂತ ಕಿರಣ ಕುಚುಪುಡಿ ನೃತ್ಯ ಪ್ರಸ್ತುತ ಪಡಿಸಿದರು. ವೈಶಾಲಿ ಹಾಗೂ ತಂಡದವರಿಂದ ಲಾವಣಿ ಗೀತೆಗಳ ಗಾಯನ ನಡೆಯಿತು.