ರಾಜ್ಯದಲ್ಲಿ ಲೋಕಸಭಾ ಚುನಾವಣೆಗೆ 2ನೇ ಹಂತದಲ್ಲಿ ಮತದಾನ ಮುಗಿಯುತ್ತಿದ್ದಂತೆ ರಾಜಕೀಯ ನಾಯಕರು ರಿಲ್ಯಾಕ್ಸ್ ಮೂಡಿಗೆ ತೆರಳಿದ್ದಾರೆ. ಸದ್ಯ ಎಲ್ಲೆಡೆ ಸೋಲು-ಗೆಲುವಿನ ಲೆಕ್ಕಚಾರ ಶುರುವಾಗಿದ್ದು, ಇದರ ಮಧ್ಯೆ ಎಲ್ಲ ನಾಯಕರು ನಿರಾಳದಲ್ಲಿದ್ದಾರೆ. ಈ ಕುರಿತಾದ ಸಣ್ಣ ನೋಟ ಇಲ್ಲಿದೆ.
ಬೆಂಗಳೂರಿಗೆ ಜಾಧವ, ದೆಹಲಿಗೆ ಖರ್ಗೆ
ಕಲಬುರಗಿ: ಮಂಗಳವಾರ ರಾತ್ರಿಯೇ ಬಿಜೆಪಿ ಅಭ್ಯರ್ಥಿ ಡಾ| ಉಮೇಶ ಜಾಧವ ಬೆಂಗಳೂರಿಗೆ ತೆರಳಿದರೆ, ಕಾಂಗ್ರೆಸ್ ಸಂಸದೀಯ ನಾಯಕರಾಗಿರುವ ಕಾಂಗ್ರೆಸ್ ಅಭ್ಯರ್ಥಿ ಡಾ| ಮಲ್ಲಿಕಾರ್ಜುನ ಖರ್ಗೆ ಬುಧವಾರ ದೆಹಲಿಯತ್ತ ಮುಖ ಮಾಡಿದ್ದಾರೆ. ಡಾ| ಉಮೇಶ ಜಾಧವಗೆ ಚಿಂಚೋಳಿ ಉಪ ಚುನಾವಣೆ “ಚಿಂತೆ’ ತಲೆದೋರಿದ್ದು, ಈ ಸಂಬಂಧ ಬಿಜೆಪಿ ಮುಖಂಡರೊಂದಿಗೆ ಚರ್ಚಿಸಲು ಬೆಂಗಳೂರಿಗೆ ತೆರಳಿದ್ದಾರೆ.
ಇತ್ತ, ಖರ್ಗೆ ಬುಧವಾರ ನಗರದ ಐವಾನ್-ಇ-ಶಾಹಿ ರಸ್ತೆಯಲ್ಲಿರುವ ತಮ್ಮ “ಲುಂಬಿನಿ’ ನಿವಾಸದಲ್ಲಿ ಮನೆಯವರು, ಮುಖಂಡರೊಂದಿಗೆ ಕೆಲ ಕಾಲ ಮುಕ್ತವಾಗಿ ಬೆರೆತಿದ್ದರು. ಸ್ಟಾರ್ ಪ್ರಚಾರಕರಾಗಿರುವ ಹಿನ್ನೆಲೆಯಲ್ಲಿ ಬುಧವಾರ ದೆಹಲಿಗೆ ತೆರಳಿದರು. ಏ.26ರಂದು ಮಹಾರಾಷ್ಟ್ರದ ಶಿರಡಿ ಮತ್ತು ಅಹ್ಮದ್ ನಗರದಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ.
ಮಕ್ಕಳು-ಮೊಮ್ಮಕ್ಕಳ ಜತೆ ಕಾಲ ಕಳೆದ ಪಾಟೀಲ್
ಗದಗ: ಹಾವೇರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಿ.ಆರ್.ಪಾಟೀಲ ಬುಧವಾರ ಮಕ್ಕಳು, ಮೊಮ್ಮಕ್ಕಳೊಂದಿಗೆ ಕಾಲ ಕಳೆದರು. ತಾಲೂಕಿನ ಹುಲಕೋಟಿ ಗ್ರಾಮದ ಸ್ವಗೃಹದಲ್ಲಿ ನಿತ್ಯದ ದಿನಚರಿಯಂತೆ ಬೆಳಗ್ಗೆಯೇ ಸ್ನಾನ, ಪೂಜೆ ಮುಗಿಸಿ ಕುಟುಂಬಸ್ಥರೊಂದಿಗೆ ಉಪಾಹಾರ ಸವಿದರು. ಬಳಿಕ ಮಕ್ಕಳು, ಮೊಮ್ಮಕ್ಕಳೊಂದಿಗೆ ಕೆಲ ಸಮಯ ಕಳೆದರು.
ಬಳಿಕ, ಗ್ರಾಮದ ಕೃಷಿ ವಿಜ್ಞಾನ ಕೇಂದ್ರದ ಅತಿಥಿ ಗೃಹದಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರೂ ಆಗಿರುವ ಸಹೋದರ ಎಚ್.ಕೆ. ಪಾಟೀಲ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಿ.ಎಸ್. ಪಾಟೀಲ, ಮಾಜಿ ಶಾಸಕರಾದ ರಾಮಕೃಷ್ಣ ದೊಡ್ಡಮನಿ, ಜಿ.ಎಸ್.ಗಡ್ಡದೇವರ ಮಠ, ಜಿಪಂ ಅಧ್ಯಕ್ಷ ಎಸ್.ಪಿ.ಬಳಿಗಾರ ಮತ್ತಿತರರೊಂದಿಗೆ ಮತದಾನ ಪ್ರಕ್ರಿಯೆ ಕುರಿತು ಸಮಾಲೋಚನೆ ನಡೆಸಿದರು. ಬಳಿಕ, ಆತ್ಮೀಯರೊಬ್ಬರ ಮಗಳ ಮದುವೆಗೆಂದು ಪ್ರಯಾಣ ಬೆಳೆಸಿದರು.