Advertisement

ನಾಯಕರ ಮುನಿಸು: ಗೊಂದಲ ಸೃಷ್ಟಿ

12:52 AM Sep 18, 2019 | Lakshmi GovindaRaju |

ಬೆಂಗಳೂರು: ಬಿಬಿಎಂಪಿಯಲ್ಲಿ ಕೊನೆಯ ಅವಧಿ ಮೇಯರ್‌, ಉಪಮೇಯರ್‌ ಆಯ್ಕೆ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ಹಾಗೂ ಸಚಿವ ಆರ್‌. ಅಶೋಕ್‌ ನಡುವೆ ಮುನಿಸು ಮುಂದುವರಿದಿರುವುದು ಅವರ ಬೆಂಬಲಿಗ ಆಕಾಂಕ್ಷಿಗಳು ಗೊಂದಲಕ್ಕೆ ಸಿಲುಕಿದ್ದಾರೆ. ಇನ್ನೊಂದೆಡೆ ಬೆಂಗಳೂರು ಉಸ್ತುವಾರಿಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ವಹಿಸಿಕೊಂಡಿರುವುದರಿಂದ ಮೇಯರ್‌, ಉಪಮೇಯರ್‌ ಸ್ಥಾನದ ಆಕಾಂಕ್ಷಿಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದ್ದು, ತೀವ್ರ ಪೈಪೋಟಿ ಸೃಷ್ಟಿಯಾದಂತಾಗಿದೆ.

Advertisement

ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಗೂ ಪೂರ್ವದಲ್ಲಿ ನಡೆದ ಬಿರುಸಿನ ಚಟುವಟಿಕೆಗಳಲ್ಲಿ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ಅವರ ಪಾತ್ರ ಮಹತ್ವದ್ದಾಗಿತ್ತು. ಆ ಹಿನ್ನೆಲೆಯಲ್ಲಿ ಬಿಜೆಪಿ ಸರ್ಕಾರದಲ್ಲಿ ಅವರಿಗೆ ಮಹತ್ವದ ಜವಾಬ್ದಾರಿ ಸಿಗುವ ಮಾತುಗಳು ಕೇಳಿಬಂದಿತ್ತು. ಆದರೆ ನಗರದ ಪ್ರಭಾವಿ ಬಿಜೆಪಿ ನಾಯಕರೆಂದೇ ಬಿಂಬಿತವಾಗಿದ್ದ ಆರ್‌.ಅಶೋಕ್‌ ಅವರನ್ನೂ ಮೀರಿ ಉಪಮುಖ್ಯಮಂತ್ರಿ ಹುದ್ದೆ ಜತೆಗೆ ಎರಡು ಪ್ರಭಾವಿ ಖಾತೆಗಳನ್ನು ಅಶ್ವತ್ಥ ನಾರಾಯಣ ಪಡೆದಿದ್ದು, ಹಲವರ ಹುಬ್ಬೇರುವಂತೆ ಮಾಡಿತ್ತು.

ಬೆಂಗಳೂರಿಗೆ ಸಂಬಂಧಪಟ್ಟ ಇಲಾಖೆಗಳ ಹಿರಿಯ ಅಧಿಕಾರಿಗಳೊಂದಿಗೂ ಸಭೆ ನಡೆಸಿ ನಿರ್ಧಾರ ಕೈಗೊಳ್ಳುತ್ತಿರುವ ಅಶ್ವತ್ಥ ನಾರಾಯಣ ಅವರು ನಗರದ ಪ್ರಮುಖ ಕಾರ್ಯಕ್ರಮಗಳಲ್ಲೂ ಪಾಲ್ಗೊಳ್ಳುತ್ತಿದ್ದಾರೆ. ಇನ್ನೊಂದೆಡೆ ಆರ್‌.ಅಶೋಕ್‌ ಅವರು ತಮ್ಮ ಕಂದಾಯ ಖಾತೆಗಷ್ಟೇ ಸೀಮಿತವಾಗಿ ಕಾರ್ಯ ನಿರ್ವಹಿಸುತ್ತಿರುವುದು ಕಂಡುಬಂದಿದೆ. ಇದರಿಂದ ಆರ್‌.ಅಶೋಕ್‌, ಅಶ್ವತ್ಥ ನಾರಾಯಣ ಅವರ ಬೆಂಬಲಿಗ ಪಾಲಿಕೆ ಸದಸ್ಯರ ಪೈಕಿ ಮೇಯರ್‌, ಉಪಮೇಯರ್‌ ಸ್ಥಾನದ ಆಕಾಂಕ್ಷಿಗಳಲ್ಲಿ ಗೊಂದಲ ಸೃಷ್ಟಿಯಾಗಿದೆ. ಯಾವ ನಾಯಕರ ಮೊರೆ ಹೋದರೆ ಸ್ಥಾನ ಗಿಟ್ಟಿಸಿಕೊಳ್ಳಬಹುದು ಎಂಬ ಗೊಂದಲಕ್ಕೆ ಸಿಲುಕಿದ್ದು, ತೆರೆಮರೆಯಲ್ಲೇ ಲಾಬಿ ಮುಂದುವರಿಸಿದ್ದಾರೆ.

ಈ ಮಧ್ಯೆ ಮೇಯರ್‌, ಉಪಮೇಯರ್‌ ಅಭ್ಯರ್ಥಿ ಆಯ್ಕೆಯಲ್ಲಿ ತಮ್ಮ ಅಭಿಪ್ರಾಯ, ಸಲಹೆಯನ್ನೂ ಪಡೆಯಬೇಕು ಎಂಬುದು ಬೆಂಗಳೂರಿನ ಅನರ್ಹಗೊಂಡ ಶಾಸಕರ ಒತ್ತಾಯ. ನಗರದಲ್ಲಿ ತಮ್ಮದೇ ಆದ ಪ್ರಭಾವವಿದ್ದು, ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದೂ ಅವರು ಪಟ್ಟು ಹಾಕಿದ್ದಾರೆ. ಸದ್ಯದಲ್ಲೇ ಎಸ್‌.ಟಿ.ಸೋಮಶೇಖರ್‌, ಬೈರತಿ ಬಸವರಾಜು, ಮುನಿರತ್ನ, ಕೆ.ಗೋಪಾಲಯ್ಯ ಅವರು ಸಭೆ ನಡೆಸಿ ನಂತರ ಸಾಮೂಹಿಕ ಅಭಿಪ್ರಾಯವನ್ನು ಮುಖ್ಯಮಂತ್ರಿಗಳಿಗೆ ತಿಳಿಸುವ ಸಾಧ್ಯತೆ ಇದೆ.

ಸದ್ಯ ಬೆಂಗಳೂರು ಉಸ್ತುವಾರಿಯನ್ನು ಯಡಿಯೂರಪ್ಪ ವಹಿಸಿಕೊಂಡಿರುವುದರಿಂದ ಅನರ್ಹಗೊಂಡ ಶಾಸಕರ ಅಭಿಪ್ರಾಯಕ್ಕೂ ಮನ್ನಣೆ ಸಿಕ್ಕರೆ ತಮಗೆ ಅವಕಾಶ ತಪ್ಪುವ ಆತಂಕ ಇತರೆ ಆಕಾಂಕ್ಷಿಗಳನ್ನು ಚಿಂತೆಗೀಡು ಮಾಡಿದೆ. ಜತೆಗೆ ಆರ್‌.ಅಶೋಕ್‌ ಹಾಗೂ ಅಶ್ವತ್ಥ ನಾರಾಯಣ ಅವರು ಪರಸ್ಪರ ಮುಖಾಮುಖೀಯಾಗುವುದನ್ನು ತಪ್ಪಿಸಿಕೊಳ್ಳುತ್ತಿರುವುದು, ಅಂತರ ಕಾಯ್ದುಕೊಳ್ಳುತ್ತಿರುವುದು ಸಹ ಆಕಾಂಕ್ಷಿಗಳಲ್ಲಿ ತಳಮಳಕ್ಕೆ ಕಾರಣವಾಗಿದೆ.
ಉಭಯ ನಾಯಕರು ತಮ್ಮ ನಡುವೆ ಯಾವುದೇ ಬೇಸರವಿಲ್ಲ ಎಂದು ಹೇಳುತ್ತಿದ್ದರೂ ಒಳಗೊಳಗೇ ಅಸಮಾಧಾನ ತೀವ್ರವಾಗಿರುವುದು ಅವರ ಮಾತುಗಳಲ್ಲೇ ಸ್ಪಷ್ಟವಾಗಿ ಕಾಣುವಂತಿದೆ.

Advertisement

ಬೆಂಗಳೂರು ಉಸ್ತುವಾರಿ ಕೈ ತಪ್ಪಿದ್ದು ದೊಡ್ಡ ವಿಚಾರ ಅಲ್ಲ. ಇದರಲ್ಲಿ ನಮ್ಮಲ್ಲಿ ಗೊಂದಲವೂ ಇಲ್ಲ. ಇದೇ ಬೇಕು ಅನ್ನೋ ಪ್ರವೃತ್ತಿಯೂ ನನ್ನದಲ್ಲ. ಹಿಂದೆಯೂ ನಾನು ಮಂಡ್ಯ ಜಿಲ್ಲಾ ಉಸ್ತುವಾರಿಯಾಗಿ ಕೆಲಸ ಮಾಡಿದ್ದೇನೆ. ಕೆಲಸ ಮಾಡುವವರಿಗೆ ಎಲ್ಲಾದರೇನು?
-ಆರ್‌.ಅಶೋಕ್‌, ಕಂದಾಯ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next