Advertisement

ಸಮರ್ಥ ಎದುರಾಳಿ ಇದ್ದರೆ ಯುದ್ಧ

12:10 PM Oct 23, 2020 | Suhan S |

ಬೆಂಗಳೂರು: ಸಮರ್ಥ ಎದುರಾಳಿ ಇದ್ದರೆ ಯುದ್ಧ ಮಾಡಬಹುದು. ಎದುರಾಳಿ ಸರಿಸಮನಾಗಿ ಇಲ್ಲ ಎಂದರೆ ಯುದ್ಧ ಮಾಡಲು ಆಗುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ತಿಳಿಸಿದ್ದಾರೆ.

Advertisement

ಜಾತ್ಯಾತೀತ ಜನತಾದಳದ ಕುಂದಗೋಳ ಮಾಜಿ ಶಾಸಕ ಮಲ್ಲಿಕಾರ್ಜುನ ಎಸ್‌. ಅಕ್ಕಿ ಹಾಗೂ ಅವರ ಬೆಂಬಲಿಗರನ್ನು ಗುರುವಾರ ಪಕ್ಷಕ್ಕೆ ಸೇರಿಸಿಕೊಂಡು ಮಾತನಾಡಿದ ಅವರು, ರಾಜರಾಜೇಶ್ವರಿ ನಗರ ಹಾಗೂ ಶಿರಾದಲ್ಲಿ ಕಾಂಗ್ರೆಸ್‌ ಭರ್ಜರಿ ಬಹುಮತಗಳೊಂದಿಗೆ ಗೆಲ್ಲುವು ಸಾಧಿಸಲಿದೆ. ಆರ್‌ ಆರ್‌ ನಗರದಲ್ಲಿ ಮಾರಾ ಮಾರಿ ರಾಜಕಾರಣ ನಡೆಯುತ್ತಿದೆ. ಹೆಣಗಳು ಬೀಳುತ್ತವೆ ಹೀಗಾಗಿ ಪ್ಯಾರಾ ಮಿಲಿಟರಿ ರಕ್ಷಣೆ ನೀಡಬೇಕು ಎಂದು ಪತ್ರ ಬರೆಯುವುದಾಗಿ ಮಾಜಿ ಶಾಸಕರು ಹೇಳಿದ್ದಾರೆ.

ಅವರು ಮುಂಚೆಯೇ ಈ ಪತ್ರ ಬರೆಯಬೇಕಿತ್ತು. ಈಗ ತಡವಾಗಿದೆ. ಆ ಪತ್ರವನ್ನು ಮುಖ್ಯಮಂತ್ರಿಗಳಿಂದಲೋ ಅಥವಾ ಪಕ್ಷದ ಅಧ್ಯಕ್ಷರಿಂದಲೋ ಬರೆಸಿದ್ದರೆ ಉತ್ತಮವಾಗಿರುತ್ತಿತ್ತು ಎಂದರು. ಮಾರಾಮಾರಿ ರಾಜಕಾರಣ ಮಾಡುವಂತಹ ಸಂಸ್ಕೃತಿ ಇರುವವರನ್ನು ನಾವು ಬೆಳೆಸಿದೆವಲ್ಲ ಏನು ಮಾಡುವುದು? ಈಗ ಪಶ್ಚಾತ್ತಾಪ ಪಡಬೇಕಾಗಿದೆ. ನಾನು ಯಾರಿಗೂ ಗುರುಗಳಲ್ಲ. ಎಲ್ಲರಿಗೂ ಶಿಷ್ಯರಾಗಿ ಇರುತ್ತೇನೆ. ನಿಮಗೂ ಶಿಷ್ಯನೇ. ನಾವು ಹತಾಶರಾಗಿದ್ದೇವೆ, ನಮ್ಮನ್ನು ಬೆಂಗಳೂರಿನ ಜನ ಪ್ಯಾಕ್‌ ಮಾಡಿ ಕಳಿಸುತ್ತಾರೆ ಎಂದು ಹೇಳಿದವರಿಗೆ ಒಳ್ಳೆಯದಾಗಲಿ ಎಂದರು.

ಇದೇ ವೇಳೆ, ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುತ್ತಾರೆ ಎಂದು ಶಾಸಕ ಜಮೀರ್‌ ಅಹಮದ್‌ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಶಾಸಕಾಂಗ ಪಕ್ಷದ ನಾಯಕರು ಪ್ರತಿಕ್ರಿಯೆ ನೀಡುತ್ತಾರೆ. ಜಮೀರ್‌ ಅಹಮದ್‌ ಅವರಿಗೆ ಸೋನಿಯಾ ಗಾಂಧಿ ಅವರು ಹೇಳಿರಬಹುದೇನೋ ಎಂದರು. ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್‌, ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಪುಷ್ಪಾ ಅಮರನಾಥ್‌, ಜೆಡಿಎಸ್‌ ತೊರೆದು ಪಕ್ಷಕ್ಕೆ ಸೇರ್ಪಡೆಯಾದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ವೀರನಗೌಡ ಹಿರೇಗೌಡ, ಜಿಲ್ಲಾ ರೈತ ಘಟಕದ ಕಾರ್ಯದರ್ಶಿ ಕೃಷ್ಣಗೌಡ ಹನಮಗೌಡ್ರ, ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಪ್ರಧಾನ ಕಾರ್ಯದರ್ಶಿ, ಜಿಲ್ಲಾ ಯುವ ಘಟಕ ಅಧ್ಯಕ್ಷ ನಾರಾಯಣ ಕೆ.ಹೂಗಾರ್‌, ಜಿಲ್ಲಾ ಯುವ ಘಟಕ ಕಾರ್ಯದರ್ಶಿ ಕುಮಾರಸ್ವಾಮಿ ಹಿರೇಮಠ ಇತರರಿದ್ದರು.

ಕ್ಷೇತ್ರದ ಶಾಂತಿ, ಪ್ರಗತಿಗಾಗಿ ಮತ ನೀಡಿ :

Advertisement

ಬೆಂಗಳೂರು: ರಾಜರಾಜೇಶ್ವರಿ ನಗರದಲ್ಲಿ ಉಂಟಾಗುತ್ತಿರುವ ಅಶಾಂತಿಗೆ ಅಂತ್ಯ ಹಾಡಿ, ಕ್ಷೇತ್ರವನ್ನು ಎಲ್ಲ ರಂಗದಲ್ಲೂ ಅಭಿವೃದ್ಧಿ ಮಾಡಲು ಕುಸುಮಾ ಅವರಿಗೆ ಮತ ನೀಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಮತದಾರರಲ್ಲಿ ಮನವಿ ಮಾಡಿದರು.

ಕ್ಷೇತ್ರ ವ್ಯಾಪ್ತಿಯ ಸಿದ್ಧಾರ್ಥನಗರ, ಜಾಲಹಳ್ಳಿ, ಜ್ಞಾನಭಾರತಿ ವಾರ್ಡ್‌ ಮತ್ತಿತರ ಕಡೆ ಗುರುವಾರ ಪಕ್ಷದ ಅಭ್ಯರ್ಥಿ ಕುಸುಮಾ ಅವರ ಪರ ಪ್ರಚಾರ ನಡೆಸಿ ಮಾತನಾಡಿದರು. ನಿಮ್ಮ ಸೋದರಿ ಕುಸುಮಾ ಅವರಿಗೆ ಆಶೀರ್ವಾದ ಮಾಡಿ ಎಂದು ಕೇಳಲು ಪಕ್ಷದ ನಾಯಕರು ಇಂದು ನಿಮ್ಮ ಮುಂದೆ ಬಂದಿದ್ದೇವೆ. ನೀವೆಲ್ಲರೂ ವಿದ್ಯಾವಂತರು, ಬುದ್ಧಿವಂತರಿದ್ದೀರಿ. ಈ ಚುನಾವಣೆ ಯಾಕೆ ಬಂತು ಎಂದು ಒಮ್ಮೆ ಆಲೋಚನೆ ಮಾಡಿ. ಐದು ವರ್ಷ ಕೆಲಸ ಮಾಡಲು ಹಿಂದಿನ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಕಳಿಸಿಕೊಟ್ಟಿರಿ. ಆದರೆ, ಅವರು ನಿಮ್ಮ ಮತವನ್ನು, ನಿಮ್ಮ ವಿಶ್ವಾಸವನ್ನು, ನಂಬಿಕೆಯನ್ನೇ ಅವರು ಮಾರಿಕೊಂಡರು. ನೀವು ಕಾಂಗ್ರೆಸ್‌ಗೆ ಮತ ನೀಡುತ್ತೀರಿ ಎನ್ನುವ ವಿಶ್ವಾಸ ಇದೆ. ಅದಷ್ಟೇ ಸಾಲದು. ಬೇರೆ ಹತ್ತು ಜನರಿಂದ ಮತ ಹಾಕಿಸಬೇಕು. ನಿಮ್ಮ ಕ್ಷೇತ್ರದ ರಕ್ಷಣೆ, ಎಲ್ಲ ರಂಗದ ಅಭಿವೃದ್ಧಿಗೆ, ಈ ಕ್ಷೇತ್ರದಲ್ಲಿ ಮೂಡುತ್ತಿರುವ ಅಶಾಂತಿ ನಿಗ್ರಹಕ್ಕೆ, ನಿಮ್ಮ ಮತದಾರ ಗುರುತಿನ ಚೀಟಿ ಕಿತ್ತುಕೊಂಡು ಚುನಾವಣೆ ಮಾಡುತ್ತಿರುವುದಕ್ಕೆ ಇತಿಶ್ರೀ ಹಾಡಲುಮತ ಹಾಕಬೇಕು ಎಂದರು.

ಇಂತಹ ವ್ಯಕ್ತಿಗೆ ಟಿಕೆಟ್‌ ಕೊಟ್ಟು, ನಾವು ತಪ್ಪು ಮಾಡಿದ್ದೇವೆ. ನಮ್ಮದು ಮಹಾಪರಾಧ. ಅದಕ್ಕೆ ಪಶ್ಚಾತ್ತಾಪ ಪಡುತ್ತಿದ್ದೇವೆ. ಕ್ಷೇತ್ರದಲ್ಲಿ ನಮ್ಮ ಕಾರ್ಯಕರ್ತರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ನೋಡಿಕೊಂಡು ಸುಮ್ಮನೆ ಕೂರುವುದಿಲ್ಲ. ಕಾರ್ಯಕರ್ತರ ರಕ್ಷಣೆಗೆ ನಾವು ಸದಾ ಬದ್ಧರಾಗಿದ್ದೇವೆ ಎಂದರು.

ಪ್ರಚಾರದಲ್ಲಿ ಮಾಜಿ ಸಚಿವರಾದ ರಾಮಲಿಂಗಾರೆಡ್ಡಿ, ಕೃಷ್ಣ ಬೈರೇಗೌಡ, ಉಮಾಶ್ರೀ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ರಾಜಕುಮಾರ್‌, ಆನೇಕಲ್‌ ಶಾಸಕ ಶಿವಣ್ಣ, ವಿಧಾನ ಪರಿಷತ್‌ ಮಾಜಿ ಸದಸ್ಯ ಐವಾನ್‌ ಡಿಸೋಜಾ ಕುಸುಮಾ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next