Advertisement

ಬೆಂಗಳೂರು, ಹುಬ್ಬಳ್ಳಿಯಲ್ಲಿ ಪ್ರಮುಖರ ಸಭೆ

11:00 PM Sep 25, 2019 | Team Udayavani |

ಬೆಂಗಳೂರು: ಅನರ್ಹತೆಗೊಂಡ ಶಾಸಕರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶುಕ್ರವಾರ ಸುಪ್ರೀಂಕೋರ್ಟ್‌ನಿಂದ ತೀರ್ಪು ಬರುವ ನಿರೀಕ್ಷೆ ಜತೆಗೆ ಉಪಚುನಾವಣೆ ಘೋಷಣೆಯಾಗಿರುವ ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಲ್ಲಿ ಸಿದ್ಧತೆ ಕುರಿತಂತೆ ಸೆ. 27ರಂದು ಬೆಂಗಳೂರು ಹಾಗೂ ಸೆ.29ರಂದು ಹುಬ್ಬಳ್ಳಿಯಲ್ಲಿ ಪ್ರಮುಖರ ಸಭೆ ನಡೆಸಲು ರಾಜ್ಯ ಬಿಜೆಪಿ ನಿರ್ಧರಿಸಿದೆ. ರಾಜ್ಯ ಬಿಜೆಪಿ ಕಚೇರಿಯಲ್ಲಿ ಬುಧವಾರ ಮುಖ್ಯಮಂತ್ರಿ ಯಡಿಯೂರಪ್ಪ, ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರ ಸಮ್ಮುಖದಲ್ಲಿ ನಡೆದ ಕೋರ್‌ ಕಮಿಟಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

Advertisement

ಸಭೆ ಬಳಿಕ ಮಾಹಿತಿ ನೀಡಿದ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ, ಸದ್ಯ ಘೋಷಣೆ ಯಾಗಿರುವ ಉಪಚುನಾವಣೆಯನ್ನು ಮುಂದೂಡಬೇಕು ಎಂದು ಅನರ್ಹ ಶಾಸಕರು ಸಲ್ಲಿಸಿರುವ ಮನವಿ ಸುಪ್ರೀಂ ಕೋರ್ಟ್‌ನ ಮುಂದಿದ್ದು, ಶುಕ್ರವಾರದ ಹೊತ್ತಿಗೆ ತೀರ್ಪು ಪ್ರಕಟವಾಗುವ ನಿರೀಕ್ಷೆಯಿದೆ. ಆ ಹಿನ್ನೆಲೆಯಲ್ಲಿ ಅಭ್ಯರ್ಥಿ ಗಳು ಹಾಗೂ ಕ್ಷೇತ್ರವಾರು ಚುನಾವಣಾ ಉಸ್ತುವಾರಿಗಳ ನೇಮಕ ಪ್ರಕ್ರಿಯೆ ನಡೆಸಲಾಗುವುದು ಎಂದು ಹೇಳಿದರು.

ರಾಜ್ಯದ ದಕ್ಷಿಣ ಭಾಗದ ಎಂಟು ಕ್ಷೇತ್ರಗಳ ಪ್ರಮುಖರ ಸಭೆ ಸೆ.27ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಉತ್ತರ ಭಾಗದ ಏಳು ಕ್ಷೇತ್ರಗಳ ಪ್ರಮುಖರ ಸಭೆ ಸೆ.29ರಂದು ಹುಬ್ಬಳ್ಳಿಯಲ್ಲಿ ನಡೆಯಲಿದೆ. ಪಕ್ಷದ ರಾಜ್ಯಾಧ್ಯಕ್ಷರು, ಮುಖ್ಯಮಂತ್ರಿಗಳು, ಪ್ರಮುಖ ನಾಯಕರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು. ಕಾಶ್ಮೀರಕ್ಕೆ ನೀಡಲಾಗಿದ್ದ ಸಂವಿಧಾನದ 370ನೇ ವಿಧಿ ರದ್ಧತಿ ಕುರಿತು 61 ಕಡೆ ಜನ ಜಾಗೃತಿ ಸಭೆ ನಡೆದಿದ್ದು, ಇನ್ನೂ 56 ಕಡೆಗಳಲ್ಲಿ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ.

ಸದ್ಯ ಬೂತ್‌ ಮಟ್ಟದಲ್ಲಿ ಪಕ್ಷದ ಸಮಿತಿಗಳ ರಚನೆ ಪ್ರಕ್ರಿಯೆ ಆರಂಭವಾಗಿದ್ದು, 5000 ಬೂತ್‌ಗಳಲ್ಲಿ ಅಂತಿಮಗೊಂಡಿದೆ. ರಾಜ್ಯದ ಎಲ್ಲ 58,000 ಬೂತ್‌ ಸಮಿತಿಗಳು ರಚನೆಯಾಗ ಲಿವೆ ಎಂದು ತಿಳಿಸಿದರು. ಗಾಂಧೀಜಿಯವರ 150ನೇ ಜನ್ಮ ವರ್ಷಾಚರಣೆ ಸಂದರ್ಭದಲ್ಲಿ ಪ್ರತಿ ವಿಧಾನ ಸಭಾ ಕ್ಷೇತ್ರಗಳಲ್ಲಿ 150 ಕಿ.ಮೀ. ಪಾದಯಾತ್ರೆ ಹಮ್ಮಿಕೊಳ್ಳಲಾಗುವುದು. ಅ.2ರಿಂದ ಆರಂಭವಾಗುವ ಪಾದಯಾತ್ರೆ ಪ್ರತಿದಿನ 5ರಿಂದ 10 ಕಿ.ಮೀ. ಕ್ರಮಿಸಲಿದೆ ಎಂದು ಹೇಳಿದರು.

ದೋಸ್ತಿ ಕುಸ್ತಿಯಿಂದ ನಮಗೇ ಅನುಕೂಲ
ಮಂಡ್ಯ: “ಹದ್ದು-ಗಿಣಿ ಎಂದೆಲ್ಲಾ ಬಿಂಬಿಸಿ ಕೊಂಡು ಕಾಂಗ್ರೆಸ್‌-ಜೆಡಿಎಸ್‌ ನಡೆಸುತ್ತಿ ರುವ ಕುಸ್ತಿಯಿಂದ ಉಪ ಚುನಾವಣೆಗಳಲ್ಲಿ ಬಿಜೆಪಿಗೆ ಅನುಕೂಲವಾಗಲಿದೆ’ ಎಂದು ಉಪಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ ಹೇಳಿದರು. ಕಾಂಗ್ರೆಸ್‌-ಜೆಡಿಎಸ್‌ ನಡುವಿನ ಈ ಜಂಗೀಕುಸ್ತಿಯಲ್ಲಿ ನಾವು ಮಧ್ಯಪ್ರವೇಶ ಮಾಡುವುದಿಲ್ಲ. ಅವರ ಕುಸ್ತಿ ನೋಡುವುದಷ್ಟೇ ನಮ್ಮ ಕೆಲಸ.

Advertisement

ಜನಪರ ಅಭಿವೃದ್ಧಿ ಕೆಲಸ ಮಾಡುತ್ತಾ ಚುನಾವಣೆಯಲ್ಲಿ ಗೆಲುವಿನ ಬಗ್ಗೆ ಆಲೋಚನೆ ಮಾಡುತ್ತೇವೆ ಎಂದು ಸುದ್ದಿಗಾರರಿಗೆ ತಿಳಿಸಿದರು. ಅನರ್ಹ ಶಾಸಕರಿಗೆ ಟಿಕೆಟ್‌ ನೀಡುವ ವಿಚಾರದಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಗೊಂದಲವಿಲ್ಲ. ಒಂದೆರಡು ಕಡೆ ಗೊಂದಲಗಳಿರುವುದು ನಿಜ. ಅದನ್ನೆಲ್ಲಾ ಪರಿಹರಿಸುತ್ತೇವೆ. ರಾಜ ಕಾರಣದಲ್ಲಿ ನೂರೆಂಟು ಅವಕಾಶಗಳಿವೆ. ಅವುಗಳನ್ನು ಸಮಾಧಾನದಿಂದ ಹುಡುಕ ಬೇಕಷ್ಟೇ.

ಉದ್ವೇಗಕ್ಕೊಳಗಾಗುವುದರಿಂದ ಏನೂ ಪ್ರಯೋಜನವಾಗುವುದಿಲ್ಲ ಎಂದು ಸೂಕ್ಷ್ಮವಾಗಿ ಹೇಳಿದರು. ಲೋಕಸಭಾ ಚುನಾವಣೆ ವೇಳೆ ಸುಮಲತಾ ಅವರಿಗೆ ಬಿಜೆಪಿ ಮಾನಸಿ ಕವಾಗಿ ನಿಂತು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿತ್ತು. ನಂತರ ಅವರು ಗೆದ್ದು ಸಂಸದೆಯಾಗಿದ್ದಾರೆ. ಮಂಡ್ಯ ಜಿಲ್ಲೆಯ ಕೆ.ಆರ್‌.ಪೇಟೆ ಉಪ ಚುನಾವಣೆಯಲ್ಲಿ ಅವರು ಯಾರನ್ನು ಬೆಂಬಲಿಸುತ್ತಾರೆ ಎನ್ನುವುದು ಅವರ ವೈಯಕ್ತಿಕ ವಿಚಾರ ಎಂದಷ್ಟೇ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next