Advertisement

PM ಮೋದಿಗೆ ಹೆದರಿ ಕಾಂಗ್ರೆಸ್‌ ಬಿಡುತ್ತಿರುವ ನಾಯಕರು: ಮಲ್ಲಿಕಾರ್ಜುನ ಖರ್ಗೆ

07:07 PM Feb 20, 2024 | Team Udayavani |

ಬೀದರ: ಇಡಿ, ಐಟಿಯಂಥ ಸರ್ಕಾರಿ ಯಂತ್ರಗಳನ್ನು ದುರ್ಬಳಕೆ ಮಾಡಿಕೊಂಡು ಪ್ರಧಾನಿ ಮೋದಿ ಕಾಂಗ್ರೆಸ್ಸಿಗರನ್ನು ಹೆದರಿಸುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್‌ನ ಹಲವು ನಾಯಕರು ಮೋದಿಗೆ ಹೆದರಿ ಪಕ್ಷ ತೊರೆದು ಬಿಜೆಪಿ ಸೇರುತ್ತಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಡಾ| ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದರು.

Advertisement

ನಗರದ ನೆಹರು ಕ್ರೀಡಾಂಗಣದಲ್ಲಿ ಮಂಗಳವಾರ ಜಿಲ್ಲಾ ಕಾಂಗ್ರೆಸ್‌, ಹಲವು ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಲಂ 371 (ಜೆ) ದಶಮಾನೋತ್ಸವ ಮತ್ತು ನಾಗರಿಕ ಸಮ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್‌ನಿಂದ ಲಾಭ ಪಡೆದು ಮಂತ್ರಿ ಮತ್ತು ಮುಖ್ಯಮಂತ್ರಿಯಾದವರು ಮೋದಿಗೆ ಹೆದರಿ ಪಕ್ಷ ತೊರೆಯುತ್ತಿದ್ದಾರೆ. ಇದರಿಂದ ಕರ್ನಾಟಕ, ಮಧ್ಯಪ್ರದೇಶ, ಗೋವಾ ಸೇರಿ ದೇಶದ ಹಲವು ರಾಜ್ಯಗಳಲ್ಲಿ ಆಡಳಿತದಲ್ಲಿದ್ದ ಕಾಂಗ್ರೆಸ್‌ ಅಧಿಕಾರ ಕಳೆದುಕೊಳ್ಳಬೇಕಾಯಿತು. ಕೆಲವರು ಹಣ, ಅ ಧಿಕಾರದ ಆಸೆಗೆ, ಮತ್ತೆ ಕೆಲವರು ಗಟ್ಟಿಯಾದ ನಂಬಿಕೆ ಇಲ್ಲದ ಕಾರಣ ಪಕ್ಷದಿಂದ ದೂರವಾದರು ಎಂದು ಬೇಸರ ವ್ಯಕ್ತಪಡಿಸಿದರು.

ಇನ್ನೆಷ್ಟು ರಾಜಕೀಯ ನಾಯಕರನ್ನು ಬಿಜೆಪಿಗೆ ಸೇರಿಸಿಕೊಳ್ಳುತ್ತೀರಿ. ಇನ್ನೂ ನಿಮ್ಮ ಹೊಟ್ಟೆ ತುಂಬಿಲ್ಲವೇ. ಸೆಕ್ಯುಲರ್‌ ಎಂದು ಹೇಳಿಕೊಳ್ಳುವ 91 ವರ್ಷದ ದೇವೇಗೌಡರನ್ನು ಸಹ ಬಿಟ್ಟಿಲ್ಲ. ನಿಮ್ಮ ಬಳಿ ಅಂಥ ಯಾವ ಔಷಧ ಇದೆ ಎಂದು ಇತ್ತೀಚೆಗೆ ದೆಹಲಿಯ ಸಭೆಯೊಂದರಲ್ಲಿ ಪ್ರಧಾನಿ ಮೋದಿಗೆ ಕೇಳಿದ್ದೆ. ಅದಕ್ಕವರು ಅವರಾಗಿಯೇ ಬರುತ್ತಿದ್ದಾರೆಂದು ಹೇಳಿದ್ದರು. ಅದಕ್ಕೆ ನಾನು ನಿಮ್ಮ ಬಳಿ ಇಡಿ, ಐಟಿ ಅಂತಹ ಗುಂಡುಗಳಿವೆ. ಅದಕ್ಕಾಗಿ ಬರುತ್ತಿದ್ದಾರಷ್ಟೇ ಎಂದಿದ್ದೆ. ಜನರನ್ನು ಒಂದೆರಡು ಬಾರಿ ಮರಳು ಮಾಡಬಹುದು. ಈಗ ಮೂರನೇ ಬಾರಿಗೆ ಹಾಗಾಗುವುದಿಲ್ಲ ಎಂದರು.

ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ, ಸಂವಿಧಾನವನ್ನು ಮೋದಿ ಸರ್ಕಾರ ನಾಶ ಮಾಡುತ್ತಿದೆ. ಸರ್ಕಾರಿ ಯಂತ್ರಗಳನ್ನು ಇಂದು ಮೋದಿ, ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಹಿಡಿತದಲ್ಲಿಟ್ಟುಕೊಂಡಿದೆ. ಮಾಧ್ಯಮಗಳ ಮಾಲೀಕತ್ವ ಶ್ರೀಮಂತರ ಕೈಸೇರಿದೆ. ಹಾಗಾಗಿ ದೇಶದ ಮುಂದಿನ ಪೀಳಿಗೆಗಾಗಿ ಅಪಾಯದ ಅಂಚಿನಲ್ಲಿರುವ ಪ್ರಜಾಪ್ರಭುತ್ವ, ಸಂವಿಧಾನವನ್ನು ಉಳಿಸಬೇಕಾಗಿದೆ. ಕೋಮುವಾದಿ ಬಿಜೆಪಿ ಸರ್ಕಾರವನ್ನು ಕಿತ್ತೆಸೆಯಬೇಕಿದೆ. ತತ್ವ ಮತ್ತು ಸಿದ್ಧಾಂತದ ಮೇಲೆ ದೀರ್ಘ‌ಕಾಲ ದೇಶದ ಸೇವೆ ಮಾಡಿರುವ ಕಾಂಗ್ರೆಸ್‌ಗೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬೆಂಬಲ ನೀಡಬೇಕಿದೆ ಎಂದರು.

ಜಿಲ್ಲಾ ಕಾಂಗ್ರೆಸ್‌ ಮತ್ತು ದಲಿತ, ಕನ್ನಡಪರ ಮತ್ತು ಬಸವಪರ ಸಂಘಟನೆಗಳಿಂದ ಡಾ|ಖರ್ಗೆ ಅವರನ್ನು ಅಭಿನಂದಿಸಲಾಯಿತು. ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಪೌರಾಡಳಿತ ಸಚಿವ ರಹೀಮ್‌ ಖಾನ್‌ ಸೇರಿದಂತೆ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next