Advertisement

ಬಿಜೆಪಿ ವಿರೋಧಿ ಅಲೆ ತಗ್ಗಿಸಲು ನಾಯಕರ ಕಸರತು

07:46 PM Apr 04, 2021 | Team Udayavani |

ಮಸ್ಕಿ: ಎರಡು ದಿನಗಳ ಪ್ರವಾಸದ ಅನುಭವದಲ್ಲಿ ರೆಸ್ಪಾನ್ಸ್‌ಗಿಂತ ವಿರೋಧಿ ಅಲೆಯೇ ಹೆಚ್ಚಾಗಿದ್ದರಿಂದ ಹಳ್ಳಿ ಪ್ರಚಾರ ಕೈಬಿಟ್ಟ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಸರಣಿ ಸಭೆಗಳನ್ನು ನಡೆಸಿದ್ದಾರೆ!. ವಿಜಯೇಂದ್ರ ಮತ್ತು ಸಚಿವ ಬಿ.ಶ್ರೀರಾಮುಲು ಅವರಿಗೆ ಮಸ್ಕಿ ಉಪಚುನಾವಣೆಯ ಉಸ್ತುವಾರಿ ವಹಿಸಲಾಗಿದೆ.

Advertisement

ಈ ಇಬ್ಬರು ನಾಯಕರು ಕಳೆದ ಎರಡು ದಿನಗಳಿಂದ ಮಸ್ಕಿ ಕ್ಷೇತ್ರದ ಹಳ್ಳಿಗಳಲ್ಲಿ ನಿರಂತರ ಪ್ರಚಾರ ನಡೆಸುತ್ತಿದ್ದಾರೆ. ಆದರೆ ಕೆಲವೆಡೆ ಅದ್ದೂರಿ ಸ್ವಾಗತ ಸಿಕ್ಕರೆ, ಇನ್ನು ಹಲವು ಕಡೆಗಳಲ್ಲಿ ಅಪಸ್ವರದ ಧ್ವನಿಗಳು ಕೇಳಿ ಬರುತ್ತಿವೆ. ಬಿಜೆಪಿಯಲ್ಲಿನ ಆಂತರಿಕ ಸಮಸ್ಯೆ ಹಾಗೂ ಕ್ಷೇತ್ರದ ನೀರಾವರಿ ಬೇಡಿಕೆಗಳು ಪ್ರಚಾರ ಸಮಯದಲ್ಲಿ ಪ್ರಶ್ನೆಗಳಾಗಿ ಮುಖಂಡರನ್ನು ಕಾಡುತ್ತಿವೆ. ಹೀಗಾಗಿ ಇಂತಹ ಅಸಮಾಧಾನ, ವಿರೋಧದ ಧ್ವನಿ ಶಮನ ಮಾಡಲು ವಿಜಯೇಂದ್ರ ಆಂತರಿಕ ಸಭೆಯ ಮೊರೆ ಹೋಗಿದ್ದಾರೆ.

ಮಸ್ಕಿ ಕ್ಷೇತ್ರದ ಮೇಲೆ ಹಿಡಿತ ಸಾಧಿಸಲು ಸರ್ಕಸ್‌ ನಡೆಸಿದ್ದಾರೆ. ಮಠ-ಮಾನ್ಯ, ಬಹಿರಂಗ ಪ್ರಚಾರದಿಂದ ಜನರ ಮನ ಗೆಲ್ಲುವುದು ಕಷ್ಟ ಎನ್ನುವ ವಾಸ್ತವ ಅರಿತು ಈಗ ರಾಜಕೀಯವಾಗಿ ಹೊಸ ದಾಳ ಉರುಳಿಸಲು ಸಜ್ಜಾಗಿದ್ದಾರೆ.

 ರಾತ್ರಿ ಇಡೀ ಸಭೆ: ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್‌ ನಾಮಪತ್ರ ಸಲ್ಲಿಕೆಗೂ ಮುನ್ನ ಮಾ.20ರಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಕಾರ್ಯಕ್ರಮಕ್ಕೆ ಹಾಜರಾಗಿದ್ದ ಸಚಿವ ಶ್ರೀರಾಮುಲು ಹಾಗೂ ವಿಜಯೇಂದ್ರ ಪುನಃ ಏ.1ರಿಂದ ಪ್ರಚಾರ ಆರಂಭಿಸಿದ್ದರು.

ಪ್ರತಾಪಗೌಡ ಪಾಟೀಲ್‌ ಹಿಂಬಾಲಕರ ಮೇಲಿನ ಸಿಟ್ಟು- ಸೆಡವು, 5ಎ ಕಾಲುವೆ ಹೋರಾಟದ ಅಸ್ತ್ರ ಬಿಜೆಪಿ ಅಭ್ಯರ್ಥಿ ಗೆಲುವಿನ ಹಾದಿಗೆ ಮುಳ್ಳಾಗಿವೆ. ಈ ಅಸ್ತ್ರಗಳೇ ಪ್ರಚಾರಕ್ಕೆ ಬಂದ ಮುಖಂಡರಿಗೂ ಸವಾಲಾಗಿವೆ ಎನ್ನುವ ವಾಸ್ತವ ಈಗ ಬಿಜೆಪಿ ವರಿಷ್ಠರಿಗೆ ಅರ್ಥವಾಗಿದೆ. ಇದೇ ಕಾರಣಕ್ಕೆ ಶುಕ್ರವಾರ ಅರ್ಧಕ್ಕೆ ಪ್ರಚಾರ ಕೈಬಿಟ್ಟ ವಿಜಯೇಂದ್ರ ತಾವು ವಾಸ್ತವ್ಯ ಹೂಡಿರುವ ಮುದಗಲ್‌ ನ ನಿವಾಸದಲ್ಲಿ ರಾತ್ರಿ ಇಡೀ ಆಂತರಿಕ ಸಭೆ ನಡೆಸಿದರು. ಬಿಜೆಪಿಯ ಸ್ಥಳೀಯ ಮುಖಂಡರು, ಕೊಪ್ಪಳ, ರಾಯಚೂರು ಜಿಲ್ಲೆಯ ಹಾಲಿ-ಮಾಜಿ ಸಂಸದರು, ಶಾಸಕರನ್ನೊಳಗೊಂಡು ಸಭೆ ನಡೆಸಲಾಯಿತು.

Advertisement

ಎಲ್ಲರೂ ಒಟ್ಟುಗೂಡಿ ಪ್ರಚಾರ ನಡೆಸಿದರೆ ಕಷ್ಟ, ಪ್ರತ್ಯೇಕ ಗುಂಪುಗಳಾಗಿ ಕ್ಷೇತ್ರದಲ್ಲಿನ ಹೋಬಳಿವಾರು ಪ್ರವಾಸ ಮಾಡಿ ಜನರನ್ನು ಹಿಡಿದಿಡಬೇಕು ಎನ್ನುವ ಸಂದೇಶ ಸಭೆಯಲ್ಲಿ ನೀಡಲಾಯಿತು. ದುಡ್ಡಿಗಿಂತ ಜನರನ್ನು ಭಾವನಾತ್ಮಕವಾಗಿ ಗೆಲ್ಲಬೇಕು. ಇದಕ್ಕೆ ಬೇಕಾದ ಎಲ್ಲ ಸಿದ್ದತೆಗಳನ್ನು ಬಿಜೆಪಿ ಮುಖಂಡರು ಮಾಡಿಕೊಳ್ಳಬೇಕು ಎನ್ನುವ ಅಂಶ ಸಭೆಯಲ್ಲಿ ಪ್ರಸ್ತಾಪವಾಗಿದೆ.

ಶುಕ್ರವಾರ ಮಧ್ಯರಾತ್ರಿವರೆಗೆ ಮಾತ್ರವಲ್ಲದೇ ಶನಿವಾರವೂ ಬಹಿರಂಗ ಪ್ರಚಾರಕ್ಕೆ ಇಳಿಯದ ವಿಜಯೇಂದ್ರ ಮುದಗಲ್ಲನ ನಿವಾಸದಲ್ಲಿಯೇ ಸರಣಿ ಸಭೆ ನಡೆಸಿದರು. ಲಿಂಗಾಯತ, ಅಲ್ಪಸಂಖ್ಯಾತ, ಎಸ್ಟಿ-ಎಸ್ಸಿ, ಕುರುಬ, ಲಂಬಾಣಿ ಸೇರಿ ದೊಡ್ಡ ಮತ್ತು ಅಲ್ಪ ಜಾತಿಗಳ ಮುಖಂಡರ ಸಭೆ ನಡೆಸಿದರು. ಹೇಗಾದರೂ ಮಾಡಿ ಕ್ಷೇತ್ರದಲ್ಲಿ ಎದ್ದಿರುವ ಬಿಜೆಪಿ ವಿರೋಧಿ  ಅಲೆಯನ್ನು ತಗ್ಗಿಸುವ ಶತಾಯ-ಗತಾಯ ಪ್ರಯತ್ನವನ್ನು ವಿಜಯೇಂದ್ರ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next