ಚಿಕ್ಕೋಡಿ: ಚಿಕ್ಕೋಡಿ-ಸದಲಗಾ ವಿಧಾನಸಭೆ ಮತಕ್ಷೇತ್ರದ ಪಶ್ಚಿಮ ಭಾಗದ ರೈತರು ಸಮರ್ಪಕ ನೀರಿಲ್ಲದೆ ಪರದಾಡುತ್ತಿದ್ದಾರೆ. ಈ ಭಾಗದಲ್ಲಿ ಮಹಾಲಕ್ಷ್ಮೀ ಏತ ನೀರಾವರಿ ಯೋಜನೆ ಮಂಜೂರಾದರೂ ಸಹ ಸಂಸದ ಪ್ರಕಾಶ ಹುಕ್ಕೇರಿ ಹಾಗೂ ಶಾಸಕ ಗಣೇಶ ಹುಕ್ಕೇರಿ ಅನುಷ್ಠಾನ ಮಾಡಲು ವಿಫಲರಾಗಿದ್ದು, ವಿಧಾನಸಭೆ ಚುನಾವಣೆಯಲ್ಲಿ ಮತ ಕೇಳುವ ನೈತಿಕ ಹಕ್ಕು ಉಳಿಸಿಕೊಂಡಿಲ್ಲ ಎಂದು ಕೋಥಳಿ, ಕುಠಾಳಿ, ಕುಪ್ಪಾನವಾಡಿ, ಚಿಂಚಣಿ ಭಾಗದ ರೈತರು ಆಕ್ರೋಶ ವ್ಯಕ್ತಪಡಿಸಿದರು.
ರವಿವಾರ ತಾಲೂಕಿನ ಕೋಥಳಿ ಗ್ರಾಮದಲ್ಲಿ ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ರೈತರು, ಕಳೆದ ಬಿಜೆಪಿ ಸರಕಾರದ ಅವಧಿಯಲ್ಲಿ ನೀರಾವರಿ ಸಚಿವ ಬಸವರಾಜ ಬೊಮ್ಮಾಯಿ ಚಿಕ್ಕೋಡಿ ತಾಲೂಕಿನ ಮಹಾಲಕ್ಷ್ಮೀ ಏತ ನೀರಾವರಿ ಯೋಜನೆಗೆ ಮಂಜೂರಾತಿ ನೀಡಿ ಅನುದಾನ ಸಹ ಘೋಷಣೆ ಮಾಡಿದ್ದರು. ಆದರೆ ಈ ಭಾಗದಲ್ಲಿ ಆಡಳಿತ ಇರುವ ಕಾಂಗ್ರೆಸ್ ಸರಕಾರದ ಸಂಸದರು ಮತ್ತು ಶಾಸಕರು ಏತ ನೀರಾವರಿ ಯೋಜನೆ ಅನುಷ್ಠಾನ ಮಾಡದೇ ರೈತರಿಗೆ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದರು.
ರೈತ ಮುಖಂಡ ಪ್ರಕಾಶ ಮಗದುಮ್ಮ ಮಾತನಾಡಿ, ಚಿಕ್ಕೋಡಿ ತಾಲೂಕಿನ ಪಶ್ಚಿಮ ಭಾಗದ ಚಿಂಚಣಿ, ಕೋಥಳಿ, ಕುಪ್ಪಾಣವಾಡಿ, ಕುಠಾಳಿ, ನವಲಿಹಾಳ, ನಾಯಿಂಗ್ಲಜ್, ಖಡಕಲಾಟ, ಪಟ್ಟಣಕುಡಿ ಸೇರಿ ಸುಮಾರು ಹತ್ತು ಹಳ್ಳಿಗಳಿಗೆ ಅನುಕೂಲವಾಗುವ ಮಹಾಲಕ್ಷ್ಮೀ ಏತ ನೀರಾವರಿ ಯೋಜನೆ ಮಂಜೂರಾಗಿದೆ. ಅದನ್ನು ಅನುಷ್ಠಾನ ಮಾಡಿ ನೀರು ಹರಿಸುತ್ತೇನೆಂದು ರೈತರಿಗೆ ವಾಗ್ಧಾನ ಮಾಡಿರುವ ಹಾಲಿ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ ಎಂದರು.
ಕಳೆದ ಉಪಚುನಾವಣೆಯಲ್ಲಿ ಮಹಾಲಕ್ಷ್ಮೀ ಏತ ನೀರಾವರಿ ಯೋಜನೆ ಅನುಷ್ಠಾನ ಮಾಡಿ ಆರು ತಿಂಗಳೊಳಗಾಗಿ ನೀರು ಹರಿಸುತ್ತೇನೆಂದು ನೀರಾವರಿ ಸಚಿವ ಎಂ.ಬಿ. ಪಾಟೀಲ ಭರವಸೆ ನೀಡಿದರೂ ಪ್ರಯೋಜನವಾಗಿಲ್ಲ ಮತ್ತು ಕ್ಷೇತ್ರವನ್ನು ದತ್ತು ತೆಗೆದುಕೊಂಡು ಇಲ್ಲಿಯ ನೀರಾವರಿ ಸಮಸ್ಯೆಗಳನ್ನು ಬಗೆಹರಿಸುತ್ತೇನೆಂದು ಪಟ್ಟಣಕುಡಿಯಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಹೇಳಿ ಮೂರು ವರ್ಷ ಕಳೆದರೂ ಇಲ್ಲಿಯ ಜನ ಹನಿ ನೀರು ಕಂಡಿಲ್ಲ ಎಂದ ಅವರು, ಈ ಭಾಗದಲ್ಲಿ ನೀರು ಹರಿಸುತ್ತೇನೆ. ಇಲ್ಲವಾದಲ್ಲಿ ಮುಂದಿನ ಬಾರಿ ಮತ ಕೇಳಲು ಬರುವುದಿಲ್ಲವೆಂದು ರೈತರಿಗೆ ವಾಗ್ಧಾನ ಮಾಡಿರುವ ಹುಕ್ಕೇರಿ
ಅವರು, ಈಗ ಕ್ಷೇತ್ರದಲ್ಲಿ ಮತ ಕೇಳಲು ಬರುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದರು.
ಘಟಪ್ರಭಾ ಸಿಬಿಸಿ ಕಾಲುವೆಯನ್ನು ದುರಸ್ತಿಗೊಳಿಸಿ ಕೊನೆ ಹಳ್ಳಿಗೆ ನೀರು ಹರಿಸುತ್ತೇನೆಂದು ಕಾಲುವೆ ಸ್ವಚ್ಛತೆಗೆ 30 ಕೋಟಿ ರೂ. ಬಿಡುಗಡೆ ಮಾಡಿದರೂ ಸಹ ಕೊನೆ ಹಳ್ಳಿಯವರಿಗೆ ಹನಿ ನೀರು ಹರಿಲಿಲ್ಲ. ಮಡ್ಡಿ ಭಾಗದ ಸರಕಾರಿ ಪ್ರಾಥಮಿಕ ಶಾಲೆಯ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿದ್ದರೂ ಸಹ ಅವುಗಳಿಗೆ ಗಮನ ಹರಿಸದೇ ಕೇವಲ ರಸ್ತೆ, ಗಟಾರ ಮತ್ತು ವಿದ್ಯುತ್ ಕಂಬಗಳಿಗೆ ಅನುದಾನ ಖರ್ಚು ಮಾಡಿ ಸರಕಾರದ ಕೋಟ್ಯಂತರ ಅನುದಾನ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು. ಈ ಸಂದರ್ಭದಲ್ಲಿ ವೃಷಭ ಕಣಗಲೆ, ವಿದ್ಯಾಧರ ಬನವನ್ನವರ,
ಜಾವೇದ ಮುಜಾವರ, ಶಾಂತಿನಾಥ ಸಕಾವರ, ಭರತೇಶ ಪಾಟೀಲ, ಸುರೇಶ ಹೆಗಡೆ, ಬಾಬು ಮುಜಾವರ, ಪ್ರವೀಣ ಹೂವನ್ನವರ ಇದ್ದರು.