ಸಿಂಧನೂರು: ಅವಹೇಳನಕಾರಿ ಪೋಸ್ಟ್‌ಗೆ ಸಂಬಂಧಿಸಿ ಉಂಟಾಗಿದ್ದ ಪ್ರಕ್ಷುಬ್ದ ವಾತಾವರಣ ತಿಳಿಗೊಳಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕೈಗೊಂಡ ಪ್ರಯತ್ನ ಶನಿವಾರ ಯಶಸ್ವಿಯಾಗಿದೆ.
ವೀರಶೈವ ಸಮಾಜ ಹಾಗೂ ಕುರುಬ ಸಮಾಜ ಸೇರಿದಂತೆ ಎಲ್ಲ ದಲಿತ ಸಂಘಟನೆಯ ಮುಖಂಡರೊಂದಿಗೆ ನಡೆದ ಮುಖಾಮುಖೀ ಚರ್ಚೆಯಲ್ಲಿ ಅಂತಿಮ ನಿಲುವು ಪ್ರಕಟಿಸಲಾಗಿದೆ.
ಯುವಕನೊಬ್ಬನ ಪೋಸ್ಟ್ ಹಿನ್ನೆಲೆಯಲ್ಲಿ ಜಾತಿ-ಜಾತಿ ನಡುವೆ ವೈಷ್ಯಮ್ಯ ಸೃಷ್ಟಿಯಾಗುವುದನ್ನು ತಪ್ಪಿಸುವ ಪ್ರಯತ್ನಕ್ಕೆ ಬಹುತೇಕರು ಸಹಮತ ವ್ಯಕ್ತಪಡಿಸಿದರು. ಮಾಧ್ಯಮದವರನ್ನು ಹೊರಗಿಟ್ಟು ಸಭೆ ನಡೆಸಿದ ಬಳಿಕ ಆಂತರಿಕವಾಗಿ ಕೈಗೊಂಡ ನಿರ್ಣಯವನ್ನು ಮಾತ್ರ ಮುಖಂಡರು ಬಹಿರಂಗ ಪಡಿಸಿದರು.
ಸಭೆ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ಒದಗಿಸಿದ ವೀರಶೈವ ಸಮಾಜದ ಅಧ್ಯಕ್ಷ ಅಶೋಕಗೌಡ ಗದ್ರಟಗಿ, ಇಂತಹ ಘಟನೆಗಳು ಯಾವತ್ತೂ ಆಗಬಾರದು. ಆಗಿರುವ ಘಟನೆ ಮರೆತು ಶಾಂತಿಯುತವಾಗಿ ಹೋಗಬೇಕೆಂದು ನಿರ್ಣಯ ಕೈಗೊಳ್ಳಲಾಗಿದೆ. ಯಾವುದೇ ಜಾತಿ, ಮತ ಭೇದವಿಲ್ಲದೇ ಎಲ್ಲ ಸಮಾಜದವರಿದ್ದೀರಿ. ಇಂತಹ ಘಟನೆ ನಡೆಯಬಾರದು. ಇಂತಹ ಘಟನೆಗಳು ಮುಂದೆ ಯಾವುದೇ ಹಳ್ಳಿಯಲ್ಲಿ ಆದ್ರೆ, ನಾವು ಅದಕ್ಕೆ ತಕ್ಕ ಪರಿಹಾರ ಕಲ್ಪಿಸಲು ಪ್ರಯತ್ನಿಸುತ್ತೇವೆ. ತಾಲೂಕಿನ ಜನ ಪ್ರಚೋದನೆಗೆ ಒಳಗಾಗಿ, ಯಾವುದೇ ಮೆಸೇಜ್ ಹಾಕಬಾರದು. ಎಲ್ಲರೂ ಒಂದು ಎನ್ನುವ ನಿಟ್ಟಿನಲ್ಲಿ ಮುನ್ನಡೆಯೋಣ ಎಂದರು.
ಕೆಪಿಸಿಸಿ ಮಾಜಿ ಕಾರ್ಯದರ್ಶಿ ಕೆ.ಕರಿಯಪ್ಪ ಮಾತನಾಡಿ, ಪೊಲೀಸ್ ಇಲಾಖೆ ಅಧಿಕಾರಿಗಳು ನಿನ್ನೆಯಿಂದ ಎಲ್ಲರನ್ನು ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಡಿಎಸ್ಪಿ ವೆಂಕಟಪ್ಪ ನಾಯಕ, ಸಿಪಿಐ ಉಮೇಶ್ ಕಾಂಬ್ಳೆ, ಪಿಎಸ್‌ಐ ಯರಿಯಪ್ಪ ಶಾಂತಿ ಸಭೆ ನಡೆಸಿದ್ದಾರೆ. ಅವರ ಮಾತುಗಳಿಗೆ ಬೆಲೆ ಕೊಟ್ಟು ಸಿಂಧನೂರು ತಾಲೂಕಿನಲ್ಲಿ ಶಾಂತಿ-ಸೌಹಾರ್ದತೆ ಕಾಪಾಡಲು ಶ್ರಮಿಸಲಾಗುತ್ತಿದೆ ಎಂದರು.
ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಪಂಪನಗೌಡ ಬಾದರ್ಲಿ, ಜೆಡಿಎಸ್ ತಾಲೂಕು ಅಧ್ಯಕ್ಷ ಬಸವರಾಜ ನಾಡಗೌಡ, ಯುವ ಕಾಂಗ್ರೆಸ್ ಮಾಜಿ ರಾಜ್ಯಾಧ್ಯಕ್ಷ ಬಸನಗೌಡ ಬಾದರ್ಲಿ, ದಲಿತ ಮುಖಂಡರಾದ ಎಚ್. ಎನ್. ಬಡಿಗೇರ್, ರಾಮಣ್ಣ ಗೋನವಾರ್ ಸೇರಿದಂತೆ ಅನೇಕರು ಇದ್ದರು.