ಡ್ಯುನೆಡಿನ್: ಡ್ಯುನೆಡಿನ್ ಟೆಸ್ಟ್ ಪಂದ್ಯದ 3ನೇ ದಿನ ಕೇನ್ ವಿಲಿಯಮ್ಸನ್ ಅವರ ಶತಕ ಹಾಗೂ ಕೇಶವ್ ಮಹಾರಾಜ್ ಅವರ 5 ವಿಕೆಟ್ ಸಾಧನೆಯಿಂದ ನ್ಯೂಜಿಲ್ಯಾಂಡ್ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಸಮಾನ ಗೌರವ ಪಡೆದಿವೆ.
ದಕ್ಷಿಣ ಆಫ್ರಿಕಾದ 308 ರನ್ನಿಗೆ ಉತ್ತರವಾಗಿ 3ಕ್ಕೆ 177 ರನ್ ಮಾಡಿದ್ದ ನ್ಯೂಜಿಲ್ಯಾಂಡ್, ಶುಕ್ರವಾರದ ಆಟದಲ್ಲಿ 341 ರನ್ನಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಲಭಿಸಿದ್ದು 33 ರನ್ನುಗಳ ಅಲ್ಪ ಮುನ್ನಡೆ. ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ದಕ್ಷಿಣ ಆಫ್ರಿಕಾ ಒಂದು ವಿಕೆಟಿಗೆ 38 ರನ್ ಮಾಡಿ ದಿನದಾಟ ಮುಗಿಸಿದೆ. ಸದ್ಯದ ಮುನ್ನಡೆ 5 ರನ್ ಮಾತ್ರ. ಹೀಗಾಗಿ 4ನೇ ದಿನದಾಟ ಎರಡೂ ತಂಡಗಳ ಪಾಲಿಗೆ ನಿರ್ಣಾಯಕ.
ತೃತೀಯ ದಿನದಾಟದಲ್ಲಿ ಮಿಂಚಿದವರು ನ್ಯೂಜಿಲ್ಯಾಂಡ್ ನಾಯಕ ಕೇನ್ ವಿಲಿಯಮ್ಸನ್ ಮತ್ತು ದಕ್ಷಿಣ ಆಫ್ರಿಕಾದ ಆಫ್ಸ್ಪಿನ್ನರ್ ಕೇಶವ್ ಮಹಾರಾಜ್. 78 ರನ್ ಮಾಡಿ ಬ್ಯಾಟಿಂಗ್ ಕಾಯ್ದುಕೊಂಡಿದ್ದ ವಿಲಿಯಮ್ಸನ್ 130ರ ತನಕ ಸಾಗಿ ತಂಡಕ್ಕೆ ಮುನ್ನಡೆ ಕೊಡಿಸುವಲ್ಲಿ ನೆರವಾದರು. ಮಹಾರಾಜ್ 94 ರನ್ನಿಗೆ 5 ವಿಕೆಟ್ ಉರುಳಿಸಿ ಜೀವನಶ್ರೇಷ್ಠ ಬೌಲಿಂಗ್ ಪ್ರದರ್ಶಿಸಿದರು.
59ನೇ ಟೆಸ್ಟ್ ಆಡುತ್ತಿರುವ ವಿಲಿಯಮ್ಸನ್ ಬಾರಿಸಿದ 16ನೇ ಶತಕ ಇದಾಗಿದೆ. 380 ನಿಮಿಷಗಳ ದಿಟ್ಟ ನಿಲುವು ಪ್ರದರ್ಶಿಸಿದ ಕಿವೀಸ್ ಕಪ್ತಾನ 241 ಎಸೆತಗಳಿಗೆ ಜವಾಬಿತ್ತರು. ಚೆಂಡು 18 ಸಲ ಬೌಂಡರಿ ಗೆರೆ ದಾಟಿತು. ವಿಲಿಯಮ್ಸನ್ ನಿರ್ಗಮನದ ಬಳಿಕ ಕೀಪರ್ ಬ್ರಾಡ್ಲಿ ವಾಟಿಗ್ (50) ಮತ್ತು ಆಲ್‌ರೌಂಡರ್ ನೀಲ್ ವ್ಯಾಗ್ನರ್ (32) ಜವಾಬ್ದಾರಿಯುತ ಆಟವಾಡಿದರು.
ದ್ವಿತೀಯ ಇನ್ನಿಂಗ್ಸಿನಲ್ಲಿ ದಕ್ಷಿಣ ಆಫ್ರಿಕಾದ ಆರಂಭ ಆಘಾತಕಾರಿಯಾಗಿತ್ತು. 4ನೇ ಎಸೆತದಲ್ಲೇ ಸ್ಟೀಫನ್ ಕುಕ್ (0) ವಿಕೆಟ್ ಬೌಲ್ಟ್ ದಾಳಿಗೆ ಉರುಳಿತು. ಆಗ ಆಫ್ರಿಕಾ ಕೂಡ ಖಾತೆ ತೆರೆದಿರಲಿಲ್ಲ. ಡೀನ್ ಎಲ್ಗರ್ (12)-ಹಾಶಿಮ್ ಆಮ್ಲ (23) ತಂಡವನ್ನು ಆಧರಿಸುವ ಪ್ರಯತ್ನದಲ್ಲಿದ್ದಾರೆ. ದಕ್ಷಿಣ ಆಫ್ರಿಕಾ-308 ಮತ್ತು ಒಂದು ವಿಕೆಟಿಗೆ 38. ನ್ಯೂಜಿಲ್ಯಾಂಡ್-341 (ವಿಲಿಯಮ್ಸನ್ 130, ರಾವಲ್ 52, ವಾಟಿಗ್ 50, ಮಹಾರಾಜ್ 94ಕ್ಕೆ 5, ಮಾರ್ಕೆಲ್ 62ಕ್ಕೆ 2, ಫಿಲಾಂಡರ್ 67ಕ್ಕೆ 2).