Advertisement

ಆಲಸಿಗಳೆಂದರೆ ಹೃದ್ರೋಗಕ್ಕೆ ಪಂಚಪ್ರಾಣ: ಡಾ.ಮಂಜುನಾಥ್‌

12:40 AM Jan 05, 2020 | Lakshmi GovindaRaj |

ಬೆಂಗಳೂರು: ಭಾರತೀಯ ವದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ವರದಿ ಪ್ರಕಾರ ಭಾರತದ ಜನಸಂಖ್ಯೆ ಪೈಕಿ ಶೇ.51 ಮಂದಿ ಆಲಸಿಗರಿದ್ದು, ಈ ಅಂಶ ಕೂಡ ಹೃದ್ರೋಗ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಪದ್ಮಶ್ರೀ ಪುರಸ್ಕೃತ ಹೃದ್ರೋಗ ತಜ್ಞ ಡಾ.ಸಿ.ಎನ್‌.ಮಂಜುನಾಥ್‌ ತಿಳಿಸಿದರು.

Advertisement

ಜಿಕೆವಿಕೆ ಆವರಣದಲ್ಲಿ ನಡೆಯುತ್ತಿರುವ ಭಾರತೀಯ ವಿಜ್ಞಾನ ಸಮ್ಮೇಳನ “ಭಾರತದಲ್ಲಿ ಹೃದ್ರೋಗ ವಿವರ; ಅಪಾಯ ಹಾಗೂ ಇತ್ತೀಚಿನ ಅಂಶಗಳು’ ಕುರಿತ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷಿಪ್ರ ಗತಿಯಲ್ಲಿ ಹೆಚ್ಚಾಗುತ್ತಿರುವ ಅಸಾಂಕ್ರಾಮಿಕ ರೋಗಗಳ ಪೈಕಿ ಹೃದ್ರೋಗ ಮೊದಲ ಸ್ಥಾನದಲ್ಲಿದೆ. ಭಾರತದಲ್ಲಿ ಪ್ರತಿ ನಿಮಿಷಕ್ಕೆ ನಾಲ್ಕು ಮಂದಿ ಹೃದ್ರೋಗ ದಿಂದ ಸಾವಿಗೀಡಾಗುತ್ತಿದ್ದು, ಈಸಂಖ್ಯೆ ಜಾಗತಿಕ ಮಟ್ಟದಲ್ಲೇ ಅತಿ ಹೆಚ್ಚು.

ಇತ್ತೀಚಿನ ದಿನಗಳಲ್ಲಿ ಹೃದ್ರೋಗಕ್ಕೆ ಒತ್ತಡ ಜತೆಗೆ ಆಲಸ್ಯದ ಜೀವನ ಶೈಲಿಯೂ ಪ್ರಮುಖ ಕಾರಣವಾಗಿದೆ. ಅಂತೆಯೇ ಐಸಿಆರ್‌ಎಸ್‌ ವರದಿಯು ಭಾರತದ ಒಟ್ಟಾರೆ ಜನಸಂಖ್ಯೆಯಲ್ಲಿ ಶೇ.51 ಮಂದಿ ಆಲಸಿ ಗಳಿದ್ದಾರೆ ಎಂದು ಹೇಳಿದೆ. ಹೀಗಾಗಿ, ಸದಾ ಚಟುವಟಿಕೆ ಒಳಗೊಂಡ ಜೀವನ ಶೈಲಿ ಭಾರತೀಯರಿಗೆ ಅವಶ್ಯಕವಾಗಿದೆ ಎಂದರು.

ಯುವಜನತೆಯಲ್ಲಿ ಹೆಚ್ಚಾದ ಹೃದ್ರೋಗ: ಜಯದೇವ ಹೃದ್ರೋಗ ಸಂಶೋಧನಾ ಸಂಸ್ಥೆ ನಡೆದ ಸಂಶೋಧನೆಯಲ್ಲಿ 25-35 ವಯಸ್ಸಿನವರಲ್ಲಿ ಹೃದ್ರೋಗ ಹೆಚ್ಚಾಗುತ್ತಿರುವುದು ತಿಳಿದುಬಂದಿದೆ. ಕಳೆದ ಎರಡು ವರ್ಷದಲ್ಲಿ 35 ವರ್ಷದೊಳಗಿನ 2200 ಮಂದಿ ಹೃದ್ರೋಗ ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಈ ಪ್ರಮಾಣ ಕಳೆದ ಐದು ವರ್ಷಗಳಲ್ಲಿ ಶೇ.22ರಷ್ಟು ಹೆಚ್ಚಳವಾಗಿದೆ. ಇನ್ನು ವಯಸ್ಸಿಗೆ ಮೊದಲೇ ಹೃದ್ರೋಗ ಕಾಣಿಸಿಕೊಳ್ಳುತ್ತಿರುವವರ ಪ್ರಮಾಣದಲ್ಲಿ ಶೇ.45 ಮಂದಿ 38-40 ವಯಸ್ಸಿನವರು, ಶೇ.33 ಮಂದಿ 31-35 ವಯಸ್ಸಿನವರು, ಶೇ.17 ಮಂದಿ 26-30 ವರ್ಷದವರಿದ್ದಾರೆ. ಇನ್ನು ಇವರ ಪೈಕಿ ಶೇ.51 ಮಂದಿಯ ಹೃದ್ರೋಗಕ್ಕೆ ಧೂಮಪಾನವೇ ಕಾಣವಾಗಿದೆ ಡಾ.ಮಂಜು ನಾಥ್‌ ಎಂದರು.

Advertisement

80 ವರ್ಷ ಬದುಕುವುದೇ ಮಕ್ಕಳಿಗೆ ನೀಡುವ ಕೊಡುಗೆ: ಭಾರತದಲ್ಲಿ ಶೇ.15 ಮಂದಿ ಕೌಟುಂಬಿಕ ಹಿನ್ನೆಲೆಯಿಂದ ಹೃದಯಾಘಾತಕ್ಕೆ ತುತ್ತಾಗುತ್ತಿದ್ದಾರೆ. ಕುಟುಂಬದಲ್ಲಿ 50 ವರ್ಷದೊಳಗೆ ಯಾರಾದರೂ ಹೃದ್ರೋಗದಿಂದ ಸಾವಿಗೀಡಾಗಿದ್ದರೆ ಆ ಅಂಶವು ಮುಂದಿನ ಸಂತತಿಯಲ್ಲಿ ಕಂಡುಬರುತ್ತಿದೆ. ಹೀಗಾಗಿ, ಹಣ ಆಸ್ತಿಗಿಂತಲೂ 70-80 ವರ್ಷ ತಂದೆ ತಾಯಿ ಬದುಕಿದರೆ ಅದೇ ಅವರು ತಮ್ಮ ಕುಟುಂಬದ ಮುಂದಿನ ಪೀಳಿಗೆಗೆ ಹಾಗೂ ತಮ್ಮ ಮಕ್ಕಳಿಗೆ ನೀಡುವ ದೊಡ್ಡ ಕೊಡುಗೆ ಎಂದು ಡಾ.ಸಿ.ಎನ್‌.ಮಂಜುನಾಥ್‌ ತಿಳಿಸಿದರು.

3 ತಾಸು ಕೂರುವುದು ಐದು ಸಿಗರೇಟಿಗೆ ಸಮ: ಜೀವನ ಶೈಲಿಯಿಂದ ಹೊಸ ರೋಗಗಳು ಹೆಚ್ಚಾಗುತ್ತಿದ್ದು, ಆ ಪೈಕಿ ಸಿಟ್ಟಿಂಗ್‌ ಡಿಸೀಸ್‌ ಕೂಡ ಒಂದು. ಒಂದೇ ಕಡೆ ಮೂರು ಗಂಟೆ ಕುಳಿತುಕೊಳ್ಳುವುದು ಐದು ಸಿಗರೇಟು ಸೇದುವುದಕ್ಕೆ ಸಮ. ಒಂದೇ ಕಡೆ ಹೆಚ್ಚು ಸಮಯ ಕುಳಿತುಕೊಳ್ಳುವುದು ಕೂಡ ಹೃದ್ರೋಗಕ್ಕೆ ಕಾರಣವಾಗುತ್ತಿದೆ.

ದಿನದಲ್ಲಿ 6 ಗಂಟೆ ಒಂದೇ ಕಡೆ ಕುಳಿತುಕೊಳ್ಳುವುದರಿಂದ ಪುರುಷರ ಜೀವಿತಾವಧಿಯಲ್ಲಿ ಶೇ.20, ಮಹಿಳೆಯರ ಜೀವಿತಾವಧಿಯಲ್ಲಿ ಶೇ.40ರಷ್ಟು ಕಡೆಮೆಯಾಗುತ್ತಿದೆ. ಜತೆಗೆ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್‌ ಹೆಚ್ಚಾಗುತ್ತಿದೆ. ದಿನದ ಹೆಚ್ಚು ಸಮಯ ನಿಂತುಕೊಳ್ಳುವುದು, ಓಡಾಡುವುದರ ಜತೆಗೆ ಚಟುವಟಿಕೆಯಿಂದ ದಿನ ಕಳೆಯುವುದು ಒಂದು ರೀತಿಯ ಆರೋಗ್ಯ ಕಾಳಜಿಯಾಗಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next