ರಾಮನಗರ: ತಾಲೂಕಿನ ಪಾಲಾಭೋವಿದೊಡ್ಡಿ ಗ್ರಾಮದಲ್ಲಿ ಪ್ರಭಾವಿ ವ್ಯಕ್ತಿಗಳು ಸರ್ಕಾರಿ ಭೂಮಿ ಒತ್ತುವರಿ ಜತೆಗೆ ಹಳ್ಳವನ್ನು ಮುಚ್ಚಿ ಅಕ್ರಮವಾಗಿ ಲೇಔಟ್ ನಿರ್ಮಾಣ ಮಾಡುತ್ತಿರುವ ಕುರಿತುಜಿಲ್ಲಾಧಿಕಾರಿಗೆ ದೂರು ನೀಡಿದ್ದರೂ ಕ್ರಮಕೈಗೊಂಡಿಲ್ಲ ಎಂದು ಗ್ರಾಮಸ್ಥರು ದೂರಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದಸುದ್ದಿಗೋಷ್ಠಿಯಲ್ಲಿ ಪಾಲಾಭೋವಿದೊಡ್ಡಿ ಗ್ರಾಮ ಸ್ಥ ರಾದ ಶಿವರಾಮು, ವೆಂಕಟೇಶ್ ಹಾಗೂ ಜಯಲಕ್ಷ್ಮೀ ಅವರು, ಪ್ರಭಾವಿಗಳು ಲೇಔಟ್ ನಿರ್ಮಾಣಕ್ಕೆ ಸರ್ಕಾರಿ ಭೂಮಿ ಒತ್ತುವರಿ ಮಾಡಿದ್ದಲ್ಲದೆ ಹಳ್ಳದಲ್ಲಿ ನಿರ್ಮಿಸಲಾಗಿದ್ದ ಚೆಕ್ ಡ್ಯಾಂನ್ನು ಮುಚ್ಚಿ ಅಕ್ರಮ ಎಸಗಿದ್ದಾರೆ ಎಂದು ಆರೋಪಿಸಿದರು.
ಹಳ್ಳಿಮಾಳ ಗ್ರಾಮದ ಮೂಲ ಸರ್ವೆ ನಂಬರ್ 66ರಲ್ಲಿ ಜಲಸಿದ್ದೇಶ್ವರ ಬೆಟ್ಟದಿಂದ ಅರ್ಕಾವತಿ ನದಿಗೆ ಸೇರುವ ದೊಡ್ಡ ಹಳ್ಳಕ್ಕೆ ಪಾಲಾಭೋವಿದೊಡ್ಡಿ ಗ್ರಾಮಸ್ಥರು ನರೇಗಾ ಯೋಜನೆಯಲ್ಲಿ 3 ರಿಂದ 4 ಚೆಕ್ ಡ್ಯಾಂಗಳನ್ನು ನಿರ್ಮಿಸಿದ್ದಾರೆ. ಈ ಚೆಕ್ ಡ್ಯಾಂಗಳನ್ನು ಅವಲಂಬಿಸಿ ಮುಂಗಾರು ಮಳೆಯಾಧಾರಿದ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಈಗವೆಂಕಟಗಿರಿಯಯ್ಯ ಅಲಿಯಾಸ್ ಧಣಿ, ಶಿವಣ್ಣ ಪತ್ನಿ ಭಾಗ್ಯಮ್ಮ ಅವರು ಹಳೆ ಸರ್ವೆ ನಂಬರ್ 66, ಹೊಸ ಸರ್ವೆ ನಂಬರ್ 256/2,256/3ರಲ್ಲಿ ಹಸಿರು ನಿಶಾನೆ ಭೂಮಿಯ ಭೂ ಬದಲಾವಣೆ ಮಾಡದೇ ಹಸಿರು ನಿಶಾನೆ ಸರ್ಕಾರದ ಭೂಮಿ ಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಲೇಔಟ್ ಮಾಡಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.
ಪ್ರಾಣ ಬೆದರಿಕೆ: ಲೇಔಟ್ ನಿರ್ಮಾಣಕ್ಕಾಗಿ ಸರ್ಕಾರಿ ಹಳ್ಳದ ಚೆಕ್ ಡ್ಯಾಂನ್ನು ರಾತ್ರೋ ರಾತ್ರಿ ಮುಚ್ಚಲಾಗಿದ್ದು, ಹಳ್ಳದ ದಿಕ್ಕನ್ನೇ ಬದಲಾಯಿಸಿದ್ದಾರೆ. ಇದನ್ನೇ ಪ್ರಶ್ನಿಸಲು ಹೋದ ಸಂದರ್ಭದಲ್ಲಿ ಹಲ್ಲೆ ನಡೆಸಿದ್ದಲ್ಲದೆ, ಪ್ರಾಣ ಬೆದರಿಕೆಯನ್ನು ಹಾಕಿದ್ದಾರೆ ಎಂದು ಆರೋಪಿಸಿದರು.
ಕಾನೂನು ಕ್ರಮ ಜರುಗಿಲ್ಲ: ಸರ್ಕಾರಿ ಭೂಮಿ ಒತ್ತುವರಿ ಹಾಗೂ ಹಳ್ಳದ ಚೆಕ್ ಡ್ಯಾಂ ಮುಚ್ಚಿರುವ ಬಗ್ಗೆ ಹರೀಸಂದ್ರ ಗ್ರಾಪಂ, ಜಿಲ್ಲಾಧಿಕಾರಿ, ರಾಮನಗರ ಉಪವಿಭಾಗಾಧಿಕಾರಿ, ತಹಶೀಲ್ದಾರ್ ಹಾಗೂ ಭ್ರಷ್ಟಚಾರ ನಿಗ್ರಹ ದಳ ಸೇರಿದಂತೆ ಹಲವು ಇಲಾಖೆಗೆ ದೂರು ಸಲ್ಲಿಸಿದ್ದರೂ, ಯಾವುದೇ ಕಾನೂನು ಕ್ರಮ ಜರುಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಗ್ರಾಮಸ್ಥರಾದ ಗೌರಮ್ಮ ಇದ್ದರು.
ತಕರಾರು ಮಾಡಿದರೆ ಸುಳ್ಳು ಕೇಸ್ ಹಾಕ್ತೇವೆ : ಸರ್ಕಾರಕ್ಕೆ ಮೋಸ ಮಾಡುವ ಸಂಚು ರೂಪಿಸಿ, ಕಂದಾಯ ಅಧಿಕಾರಿಗಳ ಜತೆ ಶಾಮೀಲಾಗಿ ತಮಗೆ ಇಷ್ಟ ಬಂದ ರೀತಿಯಲ್ಲಿ ಲೇಔಟ್ ಮಾಡಲಾಗುತ್ತಿದೆ. ಈ ವಿಚಾರವಾಗಿ ಪಾಲಾಭೋವಿದೊಡ್ಡಿ ಗ್ರಾಮಸ್ಥರು ಪ್ರಶ್ನಿಸಿದರೆ ಈ ಸ್ವತ್ತು ನಮಗೆ ಸೇರಿದ್ದು, ನಾವು ಇಷ್ಟ ಬಂದ ಹಾಗೆ ಮಾಡುತ್ತೇವೆ. ನೀವ್ಯಾರು ಕೇಳಲು ಎಂದು ಧಮಕಿ ಹಾಕಿದ್ದಾರೆ. ಈ ವಿಚಾರವಾಗಿ ಕೇಳಲು ಯಾರೇ ಬಂದರೂ ಸುಮ್ಮನೆ ಬಿಡುವುದಿಲ್ಲ. ಏನಾದರೂ ತಂಟೆ ತಕರಾರು ಮಾಡಿದರೆ ಸುಳ್ಳು ಕೇಸು ಹಾಕುತ್ತೇವೆ ಎಂದು ವೆಂಕಟಗಿರಿಯಯ್ಯ ಬೆದರಿಸುತ್ತಿದ್ದಾರೆ. ಲೇಔಟ್ ನಿರ್ಮಾಣದ ಹಿನ್ನೆಲೆ ಅಕ್ಕಪಕ್ಕದ ಜಮೀನಿನ ರೈತರಿಗೂ ವಿನಾಕಾರಣ ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥರಾದ ಶಿವರಾಮು, ವೆಂಕಟೇಶ್ ಹಾಗೂ ಜಯಲಕ್ಷ್ಮೀ ಹೇಳಿದರು.