Advertisement
ಏಷ್ಯಾದಲ್ಲೇ ಅತ್ಯಂತ ಶ್ರೀಮಂತ ಹಾಗೂ ದೊಡ್ಡ ಮಹಾನಗರಪಾಲಿಕೆಯಾದ ಮುಂಬೈ ಸೇರಿದಂತೆ ಮಹಾರಾಷ್ಟ್ರದ 10 ನಗರ ಪಾಲಿಕೆಗಳು ಮತ್ತು 25 ಜಿಲ್ಲಾ ಪರಿಷತ್‌ಗಳ ಚುನಾವಣೆಯ ಫಲಿತಾಂಶ 4 ದಿನಗಳ ಹಿಂದಷ್ಟೇ ಹೊರಬಿದ್ದಿದೆ. ವಿಧಾನಸಭೆ, ಲೋಕಸಭೆ ಚುನಾವಣೆಯಂತೆ ಸ್ಥಳೀಯ ಚುನಾವಣೆಗಳಿಗೂ ಹೆಚ್ಚಿನ ಪ್ರಾಶಸ್ತ್ಯ ಸಿಗುತ್ತಿರುವುದು ಇತ್ತೀಚೆಗಿನ ಹೊಸ ಟ್ರೆಂಡ್. ಸ್ಥಳೀಯ ಸಂಸ್ಥೆ ಚುನಾವಣೆಗಳ ಫಲಿತಾಂಶವು ರಾಜ್ಯಮಟ್ಟದ ರಾಜಕೀಯ ಲೆಕ್ಕಾಚಾರದಲ್ಲಿ ತನ್ನದೇ ಆದ ಪ್ರಭಾವವನ್ನು ಬೀರುತ್ತಿರುವುದು ಇದಕ್ಕೆ ಕಾರಣವಿರಬಹುದು.
ಹೌದು. 2019ರ ವಿಧಾನಸಭೆ ಚುನಾವಣೆಯ ಸೆಮಿಫೈನಲ… ಎಂದೇ ಪರಿಗಣಿಸಲಾಗಿದ್ದ ಈ ಚುನಾವಣೆಯಲ್ಲಿ “ಮ್ಯಾನ್ ಆಫ್ ದಿ ಮ್ಯಾಚ್’ ಆಗಿ ಮಿಂಚಿದವರು ಫಡ್ನವೀಸ್. ಅವರು ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ತನ್ನ ಒಂದೂವರೆ ವರ್ಷದ ಆಡಳಿತದ ಜನಾಭಿಪ್ರಾಯ ಎಂದು ಭಾವಿಸಿಕೊಂಡು, ಪ್ರತಿಷ್ಠೆಯನ್ನೇ ಪಣಕ್ಕಿಟ್ಟು ಪ್ರಚಾರದ ನೇತೃತ್ವ ವಹಿಸಿಕೊಂಡರು. ಶಿವಸೇನೆಯು ಜಿದ್ದಿಗೆ ಬಿದ್ದು ಸ್ಪರ್ಧಿಸುತ್ತಿದೆ ಎಂದಾಗ ಸ್ವಲ್ಪವೂ ಧೈರ್ಯಗೆಡದೇ ಏಕಾಂಗಿಯಾಗಿ ಸ್ಪರ್ಧಿಸುವ ಸವಾಲನ್ನು ಸ್ವೀಕರಿಸಿದರು. ಅಭ್ಯರ್ಥಿಗಳ ಆಯ್ಕೆ ವೇಳೆಯೂ ಸ್ಥಳೀಯ ನಾಯಕರಿಗೆ ಆದ್ಯತೆ ನೀಡಿದರು. ಮತದಾರರ ನಾಡಿಮಿಡಿತವನ್ನು ಅರಿತುಕೊಂಡು ಪ್ರತಿ ಹೆಜ್ಜೆಯನ್ನಿಟ್ಟರು. ಇಲ್ಲಿ ಬಿಜೆಪಿಯ ಅತ್ಯದ್ಭುತ ಕಾರ್ಯತಂತ್ರವು ಫಲಿಸಿತು. ಫಸ್ಟ್ ರ್‍ಯಾಂಕ್ ಬರಬೇಕೆಂದು ವಿದ್ಯಾರ್ಥಿ ಹೇಗೆ ನಿಷ್ಠೆಯಿಂದ ಹಗಲಿರುಳು ಶ್ರಮಿಸುತ್ತಾನೋ, ಅಂಥದ್ದೇ ಮನಸ್ಥಿತಿ ಫಡ್ನವೀಸ್‌ರದ್ದಾಗಿತ್ತು. ಪ್ರತಿಯೊಂದು ವಾರ್ಡ್, ಪ್ರತಿ ನಗರದ ಬಗ್ಗೆಯೂ ವಿಸ್ತೃತವಾಗಿ ರಿಸರ್ಚ್ ಮಾಡುತ್ತಾ, ಅಲ್ಲಿಗೇನು ಬೇಕು ಎಂಬುದನ್ನು ಅರಿಯುತ್ತಾ ಮಾಸ್ಟರ್ ಪ್ಲ್ಯಾನ್ ರೂಪಿಸಿದರು. ಬ್ಯುಸಿನೆಸ್ ಮ್ಯಾನೇಜ…ಮೆಂಟ್‌ನಲ್ಲಿನ ಸ್ನಾತಕೋತ್ತರ ಪದವಿಯೂ ಅವರಿಗೆ ರಾಜಕೀಯ ಕಾರ್ಯತಂತ್ರ ರೂಪಿಸುವಲ್ಲಿ ನೆರವಾಗಿರಬಹುದು. ಅಷ್ಟೇ ಅಲ್ಲ, ಒಂದು ಸಮುದಾಯವನ್ನು ಕೇಂದ್ರವಾಗಿಟ್ಟುಕೊಂಡು ಪ್ರಚಾರ ನಡೆಸುವ ತನ್ನ ಹಳೆಯ ಚಾಳಿ ಕೈಬಿಟ್ಟು, ಎಲ್ಲರನ್ನೊಳಗೊಂಡ ನೀತಿಗೆ ತಲೆಬಾಗಿದ್ದೂ ಬಿಜೆಪಿಗೆ ವರವಾಗಿ ಪರಿಣಮಿಸಿತು. ಇನ್ನೊಂದು ಕಡೆ, ಹಿಂದಿನಿಂದಲೂ ಹೊರರಾಜ್ಯದವರ ವಿರುದ್ಧ ಕೆಂಡಕಾರುತ್ತಲೇ ಬಂದಿದ್ದ ಶಿವಸೇನೆಯು ಪ್ರಚಾರಕ್ಕೆ ಗುಜರಾತ್‌ನ ಹಾರ್ದಿಕ್ ಪಟೇಲ್‌ರನ್ನು ಬಳಸಿಕೊಂಡಿತು. ಈ ಹಿಂದೆ ಇದೇ ಪಕ್ಷದ ಮುಖ್ಯಸ್ಥ “ಸಾಮ್ನಾ’ ಸಂಪಾದಕೀಯದಲ್ಲಿ ಗುಜರಾತಿಗರ ವಿರುದ್ಧ ಮನಬಂದಂತೆ ಬರೆದಿದ್ದರು. “ಗುಜರಾತಿಗರು ಮುಂಬೈಗೆ ಬಂದು ಅಗಾಧ ಸಂಪತ್ತು ಸೃಷ್ಟಿಸಿದ್ದಾರೆ. ಒಂದು ಕಾಲದಲ್ಲಿ ಒಂದು ಪೈಸೆಯೂ ಇಲ್ಲದೇ ಬಂದವರು, ಇಲ್ಲಿಗೆ ಬಂದು ಕಾಸು ಸಂಪಾದಿಸಿ ಈಗ ರಾಷ್ಟ್ರೀಯ ರಾಜಕಾರಣದಲ್ಲಿ ಅಬ್ಬರಿಸುತ್ತಿದ್ದಾರೆ. ಇಂಥವರಿಂದಾಗಿ ಮರಾಠಿಗರು ಇಲ್ಲಿ ಅಲ್ಪಸಂಖ್ಯಾತರಾಗಿದ್ದಾರೆ’ ಎಂದು ಹೇಳುತ್ತಾ, ಗುಜರಾತಿಗಳ ವಿರುದ್ಧ ಮರಾಠಿಗರನ್ನು ಎತ್ತಿಕಟ್ಟುತ್ತಾ, ಮರಾಠಿ ಅಸ್ಮಿತೆಯನ್ನು ಪೋಷಿಸುತ್ತಾ ಬಂದಿದ್ದ ಶಿವಸೇನೆ ಕೊನೆಗೆ ಪ್ರಚಾರಕ್ಕೆ ಬಳಸಿಕೊಂಡಿದ್ದು ಅದೇ ಗುಜರಾತ್‌ನ ಹಾರ್ದಿಕ್‌ರನ್ನು. ಗುಜರಾತಿಗರ ಬಾಹುಳ್ಯವಿರುವ ಪ್ರದೇಶಗಳಲ್ಲಿ ಶಿವಸೇನೆಯ ಬ್ಯಾನರ್‌ಗಳು ಗುಜರಾತಿ ಭಾಷೆಯಲ್ಲೇ ರಾರಾಜಿಸಿದವು. ಬುದ್ಧಿವಂತ ಮತದಾರರು ಎಲ್ಲವನ್ನೂ ಗಮನಿಸುತ್ತಾರೆ ಎಂಬುದಕ್ಕೆ ಇದೇ ಸಾಕ್ಷಿ. ಶಿವಸೇನೆ ಮತ್ತು ಬಿಜೆಪಿಯ ಸಿದ್ಧಾಂತದಲ್ಲಿ ಹೇಳಿಕೊಳ್ಳುವಂತ ದೊಡ್ಡ ಅಂತರವೇನೂ ಇಲ್ಲದ ಕಾರಣ, ಮರಾಠಿ ಮತದಾರರು ಸುಲಭವಾಗಿ ಬಿಜೆಪಿಯತ್ತ ವಾಲಿದರು. ಶಿವಸೇನೆಯು ಬಿಜೆಪಿ ಆಡಳಿತವಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ನಕಾರಾತ್ಮಕ ಪ್ರಚಾರಕ್ಕೆ ಹೆಚ್ಚು ಒತ್ತು ನೀಡಿತೇ ಹೊರತು, ಜನರಿಗೆ ತಮ್ಮ ಕೊಡುಗೆಯೇನು ಎಂಬ ವಿಚಾರಕ್ಕೆ ಮಹತ್ವ ನೀಡಲಿಲ್ಲ.
Related Articles
Advertisement
ಎನ್‌ಸಿಪಿಯ ಮತದಾರರೂ ಈ ಬಾರಿ ಬಿಜೆಪಿಯತ್ತ ಮುಖಮಾಡಿದರು. ಪುಣೆ, ಪಿಂಪ್ರಿ-ಚುಂಚವಾಡದಂಥ ಭದ್ರಕೋಟೆಯನ್ನು ಉಳಿಸಿಕೊಳ್ಳಲೂ ಎನ್‌ಸಿಪಿಗೆ ಸಾಧ್ಯವಾಗಲಿಲ್ಲ. ಇನ್ನು 2014ರ ಲೋಕಸಭೆ ಚುನಾವಣೆಯ ನಂತರ ಕುಸಿಯುತ್ತಲೇ ಬಂದಿರುವ ಕಾಂಗ್ರೆಸ್ ತನಗೆ ಹೊಸ ಕಾರ್ಯತಂತ್ರ ರೂಪಿಸುವ, ಕಾರ್ಯಕರ್ತರನ್ನು ಸಂಘಟಿಸುವ, ಜನರೊಂದಿಗೆ ಸಂಪರ್ಕ ಸಾಧಿಸುವ ಉತ್ಸಾಹವೇ ಇಲ್ಲ ಎನ್ನುವುದನ್ನು ಪದೇ ಪದೆ ಸಾಬೀತು ಮಾಡುತ್ತಲೇ ಇದೆ. ರಾಜ್ ಠಾಕ್ರೆ ನೇತೃತ್ವದ ಎಂಎನ್‌ಎಸ್ ಪ್ರಭಾವವೂ ತಗ್ಗಿ, 7 ಸೀಟುಗಳಿಗೆ ತೃಪ್ತಿಪಡುವಂತಾಗಿದೆ. ಹಾಗೆ ನೋಡಿದರೆ, ಕಳೆದ ಬಾರಿ 2 ಸೀಟುಗಳಲ್ಲಿ ಜಯ ಸಾಧಿಸಿದ್ದ ಅಸಾದುದ್ದೀನ್ ಒವೈಸಿ ಅವರ ಎಐಎಂಐಎಂ ಪಕ್ಷವು ಈ ಬಾರಿ ಮೂರು ಸೀಟುಗಳನ್ನು ತನ್ನದಾಗಿಸಿಕೊಂಡಿರುವುದು ವಿಶೇಷ. ಮಹಾರಾಷ್ಟ್ರ ಮಾತ್ರವಲ್ಲ, ದೇಶಾದ್ಯಂತ ಬಿಜೆಪಿಯು ಪ್ರತಿಪಕ್ಷಗಳ ದೌರ್ಬಲ್ಯಗಳನ್ನು ಬಳಸಿಕೊಳ್ಳುತ್ತಾ, ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿಕೊಳ್ಳುತ್ತಾ ಸಾಗುತ್ತಿದೆ. ಇದಕ್ಕೆ ಮತ್ತೂಂದು ನಿದರ್ಶನವೆಂದರೆ, ಒಡಿಶಾದಲ್ಲಿ ನಡೆದ ಪಂಚಾಯತ್ ಚುನಾವಣೆ. ಇಲ್ಲೂ ಬಿಜೆಪಿಯು ಬಿಜೆಡಿಯ ಭದ್ರಕೋಟೆಯೊಳಗೆ ನುಸುಳುವಲ್ಲಿ ಯಶಸ್ವಿಯಾಗಿದೆ. ಈಗ ಅಲ್ಲಿ ನವೀನ್ ಪಟ್ನಾಯಕ್ ಅವರ ಬಿಜೆಡಿಗೆ ಪ್ರಬಲ ಪ್ರತಿಸ್ಪರ್ಧಿಯಾಗಿ ಬಿಜೆಪಿ ಹೊರಹೊಮ್ಮುತ್ತಿದೆ.
ಅದೇನೇ ಇರಲಿ, ಮಹಾರಾಷ್ಟ್ರದಲ್ಲಂತೂ ಒಂದು ಕಾಲದಲ್ಲಿ ಅಬ್ಬರಿಸುತ್ತಿದ್ದ ಶಿವಸೇನೆ ಇದೀಗ ಹಲ್ಲು ಕಿತ್ತ ಹಾವಿನಂತಾಗಿದೆ. ಆಡಳಿತವಿರೋಧಿ ಅಲೆಯನ್ನು ಹಿಮ್ಮೆಟ್ಟಿಸಿ ಬಿಎಂಸಿಯಲ್ಲಿ ಮತ್ತೆ ಗೆಲುವು ಸಾಧಿಸುವಲ್ಲಿ ಶಿವಸೇನೆ ಯಶಸ್ವಿಯೇನೋ ಆಗಿದೆ. ಆದರೆ, ಬಿಜೆಪಿಯ ಅದರಲ್ಲೂ ವಿಶೇಷವಾಗಿ ಫಡ್ನವೀಸ್ ಅವರ ಜನಪ್ರಿಯತೆಯನ್ನು ಕುಗ್ಗಿಸುವಲ್ಲಿ ವಿಫಲವಾಗಿದೆ. ಇದೀಗ ಎರಡೂ ಪಕ್ಷಗಳು ಸ್ಪಷ್ಟ ಬಹುಮತಕ್ಕೆ ಬೇಕಾದ 114 ಸ್ಥಾನಗಳನ್ನು ಪಡೆಯುವಲ್ಲಿ ಸೋತಿರುವ ಕಾರಣ, ಮೈತ್ರಿ ಮಾಡಿಕೊಳ್ಳುವ ಅನಿವಾರ್ಯತೆಯಿದೆ. ಮತ್ತೆ ಶಿವಸೇನೆ ಮತ್ತು ಬಿಜೆಪಿ ಕೈಜೋಡಿಸಲೇಬೇಕಾಗಿದೆ. ಇಲ್ಲದಿದ್ದರೆ, ಶಿವಸೇನೆಗೆ ಉಳಿಗಾಲವಿಲ್ಲ. ಪ್ರತಿಷ್ಠೆಗಾಗಿ ಈಗ ಬೇರೆ ಪಕ್ಷಗಳೊಂದಿಗೆ ಸೇರಿ ಆಡಳಿತ ಹಿಡಿದರೂ, ಅದು ಹೆಚ್ಚು ಕಾಲ ಉಳಿಯುವ ಭರವಸೆಯಿಲ್ಲ. 20 ವರ್ಷಗಳ ಕಾಲ ಬಿಎಂಸಿಯ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಶಿವಸೇನೆಯು ಮತ್ತೆ ಹಳೇ ಸ್ನೇಹಿತನ ಜತೆ ಕೈಜೋಡಿಸಿದರೂ, ಮೈತ್ರಿಯಲ್ಲಿ ನಿರ್ಣಾಯಕ ಪಾತ್ರ ಬಿಜೆಪಿಯದ್ದೇ ಆಗಿರಲಿದೆ. 2014ರಲ್ಲಿ ರಾಜ್ಯ ಸರ್ಕಾರದ ರಚನೆ ವೇಳೆ ಹೇಗೆ ಬಿಜೆಪಿ ಕಿಂಗ್‌ಮೇಕರ್ ಆಗಿತ್ತೋ, ಈಗಲೂ ಅದು ಮರುಕಳಿಸಲಿದೆ.
ಒಟ್ಟಿನಲ್ಲಿ, ಮಹಾರಾಷ್ಟ್ರದ ಫಲಿತಾಂಶವು ಬಿಜೆಪಿಯ ಗೆಲವು ಎನ್ನುವುದಕ್ಕಿಂತಲೂ ಫಡ್ನವೀಸ್‌ರದ್ದು ಎಂದರೆ ತಪ್ಪಾಗಲಿಕ್ಕಿಲ್ಲ. ಅವರು ತಮ್ಮ ಜನಪ್ರಿಯ ಯೋಜನೆಗಳು, ಭ್ರಷ್ಟಾಚಾರ ಮುಕ್ತ ಹಾಗೂ ಪಾರದರ್ಶಕ ಆಡಳಿತದ ಮೂಲಕ ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಭದ್ರ ಬುನಾದಿಯನ್ನು ಹಾಕಿಕೊಟ್ಟಿದ್ದಾರೆ. ಮರಾಠಿಗರ ಹೃದಯ ಸಾಮ್ರಾಟನಾಗಿ ಉಳಿದು, 2019ರ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಕೇಸರಿ ಪಕ್ಷವನ್ನು ಅಧಿಕಾರಕ್ಕೆ ತರುವ ಫಡ್ನವೀಸ್ ಉದ್ದೇಶಕ್ಕೆ ಈ ಗೆಲುವು ಮತ್ತಷ್ಟು ಆತ್ಮವಿಶ್ವಾಸ ತುಂಬಿರಬಹುದು. – ಹಲೀಮತ್ ಸಅದಿಯಾ