ಹುಣಸೂರು: ಕೊಡಗು ಹಾಗೂ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಪ್ರದೇಶದಲ್ಲಿ ಕಳೆದ ಮೂರು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಲಕ್ಷಣತೀರ್ಥ ನದಿ ಉಕ್ಕಿ ಹರಿಯುತ್ತಿದ್ದು, ಹನಗೋಡು ಅಣೆಕಟ್ಟೆಯ ಹಿನ್ನೀರಿನಿಂದ ಸಾವಿರಾರು ಎಕರೆ ಪ್ರದೇಶದ ಬೆಳೆ ಜಲಾವೃತವಾಗಿ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.
ಹನಗೋಡು ಅಣೆಕಟ್ಟೆ ಮೇಲೆ 7,360 ಕ್ಯೂಸೆಕ್ ನೀರು ಹರಿಯುತ್ತಿದೆ. ನಾಲೆಗೆ 600 ಕ್ಯೂಸೆಕ್ಸ್ ನೀರು ಹರಿಸಲಾಗುತ್ತಿದೆ. ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಲೇ ಇದೆ. ಇದರಿಂದ ರೈತರು ಕಂಗಾಲಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ಹಿನ್ನೇರಿನಲ್ಲಿ ಬೆಳೆ ಮುಳುಗಡೆ: ಹನಗೋಡು ಅಣೆಕಟ್ಟೆ ಹಿನ್ನೀರಿನಿಂದ ಕೋಣನಹೊಸಹಳ್ಳಿ, ಬಿಲ್ಲೇನಹೊಸಹಳ್ಳಿ, ಕೆ.ಜಿ.ಹಬ್ಬನಕುಪ್ಪೆ, ಕೊಳವಿಗೆ, ನೇಗತ್ತೂರು, ಶಿಂಡೇನಹಳ್ಳಿ, ಮುದನಗನೂರು, ಚಿಕ್ಕ ಹೆಜೂರು, ದೊಡ್ಡ ಹೆಜೂರು, ದಾಸನಪುರ, ಹಿಂಡಗುಡ್ಲು, ಕಿರಂಗೂರು, ಹನಗೋಡು, ಕಾಮಗೌಡನಹಳ್ಳಿ, ಹೆಗ್ಗಂದೂರು, ವಡ್ಡಂಬಾಳು, ಬೀರನಹಳ್ಳಿ, ಲಕ್ಷ್ಮೀಪುರ, ಕೂಡೂರು, ಚನ್ನಸೋಗೆ, ರಾಮೇನಹಳ್ಳಿ, ನಿಲುವಾಗಿಲು ಸೇರಿದಂತೆ ಹತ್ತಾರು ಹಳ್ಳಿಗಳಲ್ಲಿ ನದಿ ಅಂಚಿನ ಪಾತ್ರಗಳಲ್ಲಿ ಬೆಳೆದಿದ್ದ ಹತ್ತಿ,
ಮುಸುಕಿನ ಜೋಳ, ತಂಬಾಕು, ಶುಂಠಿ, ಹಲಸಂದೆ, ರಾಗಿ, ಭತ್ತದ ಸಸಿ ಮಡಿ ಸೇರಿದಂತೆ ಮತ್ತಿತರ ಬೆಳೆಗಳು ಸಾವಿರಾರು ಎಕರೆ ಪ್ರದೇಶದ ನೀರಿನಲ್ಲಿ ಮುಳುಗಿದ್ದು, ರೈತರು ಚಿಂತಾಕ್ರಾಂತರಾಗಿದ್ದಾರೆ. ಈ ಹಿಂದೆಯೂ ಇದೇರೀತಿ ಹಿನ್ನೀರು ನುಗ್ಗಿ ನಷ್ಟ ಉಂಟು ಮಾಡಿತ್ತು. ಮತ್ತೂಮ್ಮೆ ನೀರು ನುಗ್ಗಿದ್ದು, ಲಕ್ಷಾಂತರ ರೂ.ನಷ್ಟ ಉಂಟಾಗಿದೆ. ನಗರದ ಒಂಟೇಪಾಳ್ಯಬೋರೆಯ ಸೇರಿದಂತೆ ಹನಗೋಡು ಭಾಗದಲ್ಲಿ ಎರಡು ಮನೆ ಗೋಡೆ ಕುಸಿದಿದೆ.
ಹುಣಸೂರು ನಗರ ಸೇರಿದಂತೆ ತಾಲೂಕಾದ್ಯಂತ ಮಳೆ ರಚ್ಚೆ ಹಿಡಿದಿದೆ. ರಸ್ತೆಗಳಲ್ಲಿ ನೀರಿನಲ್ಲೇ ಸಂಚರಿಸುತ್ತಿರುವ ವಾಹನಗಳು. ನಗರದ ಬೈಪಾಸ್ ರಸ್ತೆಯ ಅಲ್ಲಲ್ಲಿ ಕೆರೆಯಂತೆ ಗುಂಡಿ ನಿರ್ಮಾಣವಾಗಿದೆ. ಮಳೆ ಪರಿಸ್ಥಿತಿ ಎದುರಿಸಲು ತಾಲೂಕು ಆಡಳಿತ ಸಿದ್ಧತೆ ಮಾಡಿಕೊಂಡಿದೆ ಎಂದು ತಹಶೀಲ್ದಾರ್ ಮೋಹನ್ ತಿಳಿಸಿದ್ದಾರೆ.