ನವದೆಹಲಿ: 2005ರಿಂದ 2007ರ ಅವಧಿಯಲ್ಲಿ ಭಾರತ ಕ್ರಿಕೆಟ್ ತಂಡದ ತರಬೇತುದಾರರಾಗಿದ್ದ ಗ್ರೆಗ್ ಚಾಪೆಲ್ ಮೇಲೆ, ಪ್ರಖ್ಯಾತ ಮಾಜಿ ಬ್ಯಾಟ್ಸ್‌ಮನ್ ವಿವಿಎಸ್ ಲಕ್ಷ್ಮಣ್ ಹರಿಹಾಯ್ದಿದ್ದಾರೆ. ಲಕ್ಷ್ಮಣ್ ಆತ್ಮಚರಿತ್ರೆ 281 ಆ್ಯಂಡ್ ಬಿಯಾಂಡ್ ಪುಸ್ತಕದಲ್ಲಿ ಗ್ರೆಗ್‌ರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಇದರೊಂದಿಗೆ ಚಾಪೆಲ್‌ರನ್ನು ತಮ್ಮ ಆತ್ಮಕಥೆಯಲ್ಲಿ ತರಾಟೆಗೆ ತೆಗೆದುಕೊಂಡು ಸುದ್ದಿಯಾಗಿದ್ದ ಸಚಿನ್ ತೆಂಡುಲ್ಕರ್ ಮತ್ತು ಸೌರವ್ ಗಂಗೂಲಿ ಸಾಲಿಗೆ ಸೇರಿದ್ದಾರೆ.
ಸಚಿನ್ ತಮ್ಮ ಪ್ಲೇಯಿಂಗ್ ಇಟ್ ಮೈ ವೇ, ಗಂಗೂಲಿ ತಮ್ಮ ಎ ಸೆಂಚುರಿ ಈಸ್ ನಾಟ್ ಎನಫ್ ಪುಸ್ತಕದಲ್ಲಿ ಮಾಜಿ ಕೋಚ್ ಚಾಪೆಲ್‌ರನ್ನು ಘಟನೆಗಳ ಸಹಿತ ತೀವ್ರವಾಗಿ ಟೀಕಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
“ಗ್ರೆಗ್ ಚಾಪೆಲ್ ಭಾರತಕ್ಕೆ ಬಹಳ ಗೌರವಯುತ, ಆಶಾಭಾವನೆ ಮೂಡಿಸಿಕೊಂಡು ಬಂದಿದ್ದರು. ಹೋಗುವಾಗ ತಂಡವನ್ನು ಒಡೆದು ಹೋಗಿದ್ದರು. ಅವರಿಗೆ ಒಂದು ಅಂತಾರಾಷ್ಟ್ರೀಯ ತಂಡವನ್ನು ನಡೆಸುವುದು ಹೇಗೆಂದು ಗೊತ್ತಿರಲಿಲ್ಲ. ಬದಲಾಗದ, ಬಿಗಿಯಾದ ನಿಲುವು ಹೊಂದಿರುತ್ತಿದ್ದರು. ಅವರ ಅವಧಿಯಲ್ಲಿ ತಂಡ ಎರಡು ಮೂರು ಗುಂಪುಗಳಾಗಿ ಒಡೆದುಹೋಗಿತ್ತು. ಅವರೊಂದಿಗೆ ಯಾರು ಚೆನ್ನಾಗಿದ್ದರೋ ಅವರ ಪಾಲಿಗೆ ಎಲ್ಲವೂ ಸರಿಯಿರುತ್ತಿತ್ತು. ಅವರೊಂದಿಗೆ ಸರಿಯಿಲ್ಲದಿದ್ದವರು ತಮ್ಮ ಹಣೆಬರಹ ತಾವು ನೋಡಿಕೊಳ್ಳಬೇಕಿತ್ತು. ಅವರ ಇಡೀ ಅವಧಿ ಕಹಿತನದಿಂದ ಕೂಡಿತ್ತು’ ಎಂದು ವಿವಿಎಸ್ ಹೇಳಿದ್ದಾರೆ.
ಹೆಚ್ಚು ಕಡಿಮೆ ಇದೇ ನಿಲುವನ್ನು ಸೌರವ್ ಗಂಗೂಲಿ, ಸಚಿನ್ ತೆಂಡುಲ್ಕರ್ ಉದಾಹರಣೆಗಳು, ಹಲವು ಘಟನೆಗಳ ಸಹಿತ ಬಿಚ್ಚಿಟ್ಟಿದ್ದಾರೆ. ಆಸ್ಟ್ರೇಲಿಯದ ಖ್ಯಾತ ಮಾಜಿ ಬ್ಯಾಟ್ಸ್‌ಮನ್ ಗ್ರೆಗ್ ಚಾಪೆಲ್, ಭಾರತ ಕ್ರಿಕೆಟ್ ತಂಡದ ತರಬೇತುದಾರರಾದ ನಂತರ ಖಳನಾಯಕರಂತೆ ಬಿಂಬಿತವಾಗಿದ್ದಾರೆ. ಕ್ರಿಕೆಟಿಗರು ಬಹಿರಂಗವಾಗಿಯೇ ಅವರ ವಿರುದ್ಧ ತಿರುಗಿಬಿದ್ದಿದ್ದರು. ಜಾನ್ ರೈಟ್ ತರಬೇತುದಾರರಾಗಿದ್ದಾಗ ಬಲಿಷ್ಠವಾಗಿದ್ದ ತಂಡ ಗ್ರೆಗ್ ತರಬೇತುದಾರರಾದ ನಂತರ ತೀರಾ ಕಳಪೆ ಮಟ್ಟಕ್ಕೆ ಕುಸಿದಿತ್ತು.