ಸಾಮಾನ್ಯವಾಗಿ ವೀಡಿಯೋ ಹಾಡನ್ನು ಒಂದು ಅದ್ಧೂರಿ ಕಾರ್ಯಕ್ರಮ ಮಾಡಿಯೋ ಅಥವಾ ಸೆಲೆಬ್ರೆಟಿ ಮೂಲಕವೋ ಬಿಡುಗಡೆ ಮಾಡಿಸುವುದು ವಾಡಿಕೆ. ಆದರೆ, “ಮಿಸ್ಟರ್ ಎಲ್‌ಎಲ್‌ಬಿ’ ಚಿತ್ರತಂಡ ವಿನೂತನ ಶೈಲಿಯಲ್ಲಿ ಚಿತ್ರದ ಹಾಡೊಂದನ್ನು ಬಿಡುಗಡೆ ಮಾಡುವ ಮೂಲಕ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದೆ.
ಹೌದು, ಇತ್ತೀಚೆಗಷ್ಟೇ ಸುದೀಪ್ ಅವರು ಚಿತ್ರದ ಆಡಿಯೋ ಸಿಡಿ ಬಿಡುಗಡೆ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭ ಕೋರಿದ್ದರು. ಈಗ ವಕೀಲರೇ ಚಿತ್ರದ ವೀಡಿಯೋ ಹಾಡೊಂದನ್ನು ಬಿಡುಗಡೆ ಮಾಡುವ ಮೂಲಕ ಆ ಚಿತ್ರತಂಡಕ್ಕೆ ಶುಭಕೋರಿರುವುದು ವಿಶೇಷ. ಹೌದು, ಕನ್ನಡ ರಾಜ್ಯೋತ್ಸವದಂದು “ಮಿಸ್ಟರ್ ಎಲ್‌ಎಲ್‌ಬಿ’ ಚಿತ್ರದ “ಲ್ಯಾಂಡ್ ಲಾರ್ಡ್ ಭದ್ರ’ ಎಂಬ ವೀಡೀಯೋ ಹಾಡನ್ನು ವಕೀಲರು ಬಿಡುಗಡೆ ಮಾಡಿದ್ದಾರೆ.
ಹೈಕೋರ್ಟ್ ಆವರಣದ ಮುಂದೆ ಬೆಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷರಾದ ಪುಟ್ಟೇಗೌಡರು ಈ ಹಾಡನ್ನು ಬಿಡುಗಡೆ ಮಾಡುವ ಮೂಲಕ ಚಿತ್ರತಂಡಕ್ಕೆಕ ಶುಭಕೋರಿದ್ದಾರೆ. ಈ ಸಂದರ್ಭದಲ್ಲಿ ಕಾರ್ಯದರ್ಶಿ ರಾಜಣ್ಣ ಸೇರಿದಂತೆ ಇನ್ನಿತರೆ ಸಂಘದ ಪದಾಧಿಕಾರಿಗಳು ಮತ್ತು ವಕೀಲರು ಈ ಸಂದರ್ಭದಲ್ಲಿ ಹಾಜರಿದ್ದು, ಚಿತ್ರದ ಹಾಡು ವೀಕ್ಷಿಸಿದ್ದಲ್ಲದೆ, ಸಿನಿಮಾಗೆ ಗೆಲುವು ಸಿಗಲಿ ಎಂದು ಶುಭಹಾರೈಸಿದ್ದಾರೆ.
ನಿರ್ದೇಶಕ, ರಘುವರ್ಧನ್ ಅವರಿಗೆ ಶೀರ್ಷಿಕೆಯು “ಮಿಸ್ಟರ್ ಎಲ್‌ಎಲ್‌ಬಿ’ ಆಗಿದ್ದರಿಂದ ಚಿತ್ರದ ಶೀರ್ಷಿಕೆ ಹಾಡನ್ನು ವಕೀಲರಿಂದಲೇ ಬಿಡುಗಡೆ ಮಾಡಿಸಬೇಕು ಎಂಬ ಯೋಚನೆ ಇತ್ತು. ಹಾಗಾಗಿ, ವಕೀಲರಿಂದಲೇ ಹಾಡನ್ನು ಬಿಡುಗಡೆ ಮಾಡಿಸುವ ಮೂಲಕ ಪ್ರಚಾರಕ್ಕೆ ಚಾಲನೆ ನೀಡಿದ್ದಾರಂತೆ. ಇನ್ನು, ಈ ಹಾಡನ್ನು ಗೌಸ್‌ಪೀರ್ ಬರೆದಿದ್ದು, ಶಶಾಂಕ್ ಶೇಷಗಿರಿ ಹಾಡಿದ್ದಾರೆ.
ರಾಕ್‌ಲೈನ್ ಸ್ಟುಡಿಯೋದಲ್ಲಿ ಹಾಕಿದ್ದ ಭರ್ಜರಿ ಸೆಟ್‌ನಲ್ಲಿ ಈ ಹಾಡನ್ನು ಚಿತ್ರೀಕರಿಸಲಾಗಿದೆ. ಇದು ನಾಯಕನ ಪರಿಚಯಿಸುವ ಹಾಡಾಗಿದ್ದರಿಂದ ವಕೀಲರು ಬಿಡುಗಡೆ ಮಡುವ ವೇಳೆ, ನಾಯಕ ಶಶಿರ್, ನಾಯಕಿ ಲೇಖಾಚಂದ್ರ, ಸಂಗೀತ ನಿರ್ದೇಶಕ ಮಂಜು ಚರಣ್, ಛಾಯಾಗ್ರಾಹಕ ಸುರೇಶ್‌ಬಾಬು, ಶ್ರೀನಿವಾಸ್‌ಗೌಡರು, ಗಣೇಶ್‌ರಾವ್, ನಾರಾಯಣ ಸ್ವಾಮಿ, ಸುಜಯ್ ಹೆಗಡೆ, ಚರಣ, ಡೈಮೆಂಡ್ ರಾಜ್, ಶಿವಕುಮಾರ್ ಆರಾಧ್ಯ ಇತರರು ಇದ್ದರು.
ಈಗಾಗಲೇ ಯುಟ್ಯೂಬ್‌ನಲ್ಲಿ ಹಾಡು ಲಭ್ಯವಿದ್ದು, ಬಿಡುಗಡೆಯಾದ ಒಂದೇ ದಿನದಲ್ಲಿ ಸಾವಿರಾರು ಮಂದಿ ವೀಕ್ಷಿಸಿದ್ದಾರೆ ಎಂಬುದು ನಿರ್ದೇಶಕರ ಮಾತು. “ಮಿಸ್ಟರ್ ಎಲ್‌ಎಲ್‌ಬಿ’ ರಿಲೀಸ್‌ಗೆ ರೆಡಿಯಾಗಿದ್ದು, ಮುಂದಿನ ತಿಂಗಳು ಪ್ರೇಕ್ಷಕರ ಮುಂದೆ ಬರುವ ಸಾಧ್ಯತೆ ಇದೆ.