Advertisement

Bangladesh: ಚಿನ್ಮಯ್‌ ಕೃಷ್ಣದಾಸ್‌ ಬಂಧನ ಖಂಡಿಸಿ ಪ್ರತಿಭಟನೆ: ವಕೀಲನ ಹ*ತ್ಯೆ

10:42 AM Nov 27, 2024 | Team Udayavani |

ಢಾಕಾ: ಇಸ್ಕಾನ್‌ ನ ಸನ್ಯಾಸಿ ಚಿನ್ಮಯ್‌ ಕೃಷ್ಣದಾಸ್‌ ಬ್ರಹ್ಮಚಾರಿ ಬಂಧನದ ಬಳಿಕ ಬಾಂಗ್ಲಾದೇಶದ ಕೆಲವೆಡೆ ಪ್ರತಿಭಟನೆಗಳು ಭುಗಿಲೆದ್ದಿದ್ದು, ಭದ್ರತಾ ಸಿಬಂದಿ ಮತ್ತು ಹಿಂದೂ ಸಮುದಾಯದ ನಾಯಕನ ಅನುಯಾಯಿಗಳ ನಡುವಿನ ಘರ್ಷಣೆ ವೇಳೆಯೇ ಮಂಗಳವಾರ (ನ.26) ವಕೀಲರೊಬ್ಬರು ಹತ್ಯೆಗೀಡಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮ ವರದಿಗಳು ತಿಳಿಸಿವೆ. ಮಧ್ಯಾಹ್ನ 3 ಗಂಟೆಗೆ, ಕಾನೂನು ಜಾರಿ ಸಂಸ್ಥೆಗಳು ಅಶ್ರುವಾಯು ಶೆಲ್‌ಗಳು ಮತ್ತು ಲಾಠಿ ಚಾರ್ಜ್‌ ನಡೆಸಿ ಪ್ರತಿಭಟನಾಕಾರರನ್ನು ಚದುರಿಸಿದರು.

Advertisement

ಚಿನ್ಮಯ್ ದಾಸ್ ಅವರನ್ನು ಬಿಡುಗಡೆ ಮಾಡಬೇಕು ಎಂದು ಸಾವಿರಾರು ಮಂದಿ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಸೈಫುಲ್ ಇಸ್ಲಾಂ ಎಂದು ಗುರುತಿಸಲಾಗಿರುವ 35 ವರ್ಷದ ವಕೀಲನ ಹತ್ಯೆ ನಡೆದಿದೆ. ಸೈಫುಲ್ ಇಸ್ಲಾಂ ಸಹಾಯಕ ಪಬ್ಲಿಕ್ ಪ್ರಾಸಿಕ್ಯೂಟರ್ ಮತ್ತು ಚಟ್ಟೋಗ್ರಾಮ್ ಜಿಲ್ಲಾ ವಕೀಲರ ಸಂಘದ ಸದಸ್ಯ ಎಂದು ಢಾಕಾ ಟ್ರಿಬ್ಯೂನ್ ಪತ್ರಿಕೆ ವರದಿ ಮಾಡಿದೆ.

ಚಿತ್ತಗಾಂಗ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದ ಡ್ಯೂಟಿ ಡಾಕ್ಟರ್ ಡಾ ನಿಬೀದಿತಾ ಘೋಷ್ ಅವರನ್ನು ಉಲ್ಲೇಖಿಸಿ ಘರ್ಷಣೆಯಲ್ಲಿ ಇತರ ಆರು ಮಂದಿ ಗಾಯಗೊಂಡಿದ್ದಾರೆ ಎಂದು ಪತ್ರಿಕೆ ಹೇಳಿದೆ.

ಚಿತ್ತಗಾಂಗ್ ವಕೀಲರ ಸಂಘದ ಅಧ್ಯಕ್ಷ ನಜೀಮ್ ಉದ್ದೀನ್ ಚೌಧರಿ ಮಾತನಾಡಿ, ಪ್ರತಿಭಟನಾಕಾರರು ವಕೀಲರನ್ನು ಅವರ ಕೊಠಡಿಯ ಕೆಳಗಿನಿಂದ ಎಳೆದೊಯ್ದು ಹತ್ಯೆ ಮಾಡಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.

 ಕಾರಣ ತನಿಖೆ

Advertisement

ನಗರ ಪೊಲೀಸ್ ಉಪ ಆಯುಕ್ತ ಲಿಯಾಕತ್ ಅಲಿ ಒಂದು ಸಾವನ್ನು ದೃಢಪಡಿಸಿ, ಕಾರಣವನ್ನು ತನಿಖೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.ಘರ್ಷಣೆಯಲ್ಲಿ ಪತ್ರಕರ್ತರು ಸೇರಿದಂತೆ ಕನಿಷ್ಠ 10 ಜನರು ಗಾಯಗೊಂಡಿದ್ದಾರೆ ಎಂದು ಡೈಲಿ ಸ್ಟಾರ್ ಪತ್ರಿಕೆ ವರದಿ ಮಾಡಿದೆ.

ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾಕ ಹಿಂದೂ ಸಮುದಾಯದ ಹಕ್ಕಿನ ಕುರಿತು ಧ್ವನಿ ಎತ್ತಿದ್ದಕ್ಕೆ ದೇಶದ್ರೋಹ ಆರೋಪದಡಿ ಬಂಧಿಸಲ್ಪಟ್ಟಿದ್ದ ಇಸ್ಕಾನ್‌ ನ ಸನ್ಯಾಸಿ ಚಿನ್ಮಯ್‌ ಕೃಷ್ಣದಾಸ್‌ ಬ್ರಹ್ಮಚಾರಿಗೆ ಬಾಂಗ್ಲಾ ಕೋರ್ಟ್‌ ಮಂಗಳವಾರ (ನ.26) ಜಾಮೀನು ನಿರಾಕರಿಸಿದ್ದು, ದೇಶದ್ರೋಹ ಪ್ರಕರಣವನ್ನು ಎತ್ತಿಹಿಡಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next