ಶಿರಸಿ: ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಕರ್ನಾಟಕದ ಪ್ರತಿ ಅಪ್ಪ ಅಮ್ಮ ಇಬ್ಬರೂ ತಮ್ಮ ಹೆಣ್ಮಕ್ಕಳ ರಕ್ಷಣೆಯ ಬಗ್ಗೆ ಚಿಂತಿಸುವಂತೆ ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಶಿರಸಿಯಲ್ಲಿ ವಿಕಸಿತ ಭಾರತಕ್ಕೆ ವಿಜಯ ಸಂಕಲ್ಪ ಯಾತ್ರೆಯಲ್ಲಿ ರವಿವಾರ ಮಾತನಾಡಿದರು.
ಕಾಂಗ್ರೆಸ್ ಸರಕಾರಕ್ಕೆ ಕಾನೂನು, ಸುವ್ಯವಸ್ಥೆ ಮೇಲೆ ಹತೋಟಿ ತಪ್ಪಿದೆ. ವೋಟ್ ಬ್ಯಾಂಕ್ ರಾಜಕಾರಣದಿಂದ ಇಂದು ಇಂಥ ಸಮಸ್ಯೆ ಜನರು ಅನುಭವಿಸುತ್ತಿದ್ದಾರೆ. ಹುಬ್ಬಳ್ಳಿ ನೇಹಾ ಕೊಲೆ ಪ್ರಕರಣ ಇಡೀ ದೇಶದಲ್ಲಿ ಆತಂಕ ಸೃಷ್ಟಿಸಿದೆ. ಕಾಂಗ್ರೆಸ್ ಪತನವಾಗಲಿದೆ. ಪವಿತ್ರ ಮಂಗಲ ಸೂತ್ರ ಕೂಡ ಕಿತ್ತು ವೋಟ್ ಬ್ಯಾಂಕ್ ಗೆ ಕೊಡಲಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮಾಡಿದರು.
ಮತದಾರರ ಕನಸನ್ನು ನನಸು ಮಾಡುವುದೇ ನನ್ನ ಗುರಿ. ನನ್ನ ಸಂಕಲ್ಪ ಮಕ್ಕಳ ರಕ್ಷಣೆ, ದೇಶ ರಕ್ಷಣೆ ಆಗಿದೆ. ಈ ಗ್ಯಾರಂಟಿಯು ದಿನದ 24 ಗಂಟೆ ಹಾಗೂ ವಾರದ ಏಳು ದಿನವೂ ಆಗಿದೆ ಎಂದರು.
ಹುಬ್ಬಳ್ಳಿಯ ನೇಹಾ ಪ್ರಕರಣದ ಬಳಿಕ ಇಡೀ ದೇಶ ಚಿಂತಿತವಾಗಿದೆ. ರಾಜ್ಯದ ಪ್ರತಿ ತಂದೆ-ತಾಯಿ ಮಕ್ಕಳ ಬಗ್ಗೆ ಚಿಂತಿತರಾಗುವಂತೆ ಮಾಡಿದೆ. ಕಾಂಗ್ರೆಸ್ ಪಾಪದ ಕಾರಣ ಇದು ಎಂದರು. 56 ನಿಮಿಷಗಳ ಭಾಷದಲ್ಲಿ ದೇಶದ ಭವಿಷ್ಯ, ಕರ್ನಾಟಕ ಕಾಂಗ್ರೆಸ್ ಸರಕಾರದ ವೈಫಲ್ಯ ಕುರಿತು ಮಾತನಾಡಿದರು.
ವೇದಿಕೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿದಂತೆ ಅನೇಕ ಪ್ರಮುಖರು ಇದ್ದರು.