Advertisement

ಕೋಟೆ ನಾಡಲ್ಲಿ ಅದ್ದೂರಿ ಭೀಮಯಾತ್ರೆ

12:14 PM Apr 15, 2022 | Team Udayavani |

ಚಿತ್ರದುರ್ಗ: ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ 131ನೇ ಜಯಂತಿ ಅಂಗವಾಗಿ ನಗರದಲ್ಲಿ ಆಯೋಜಿಸಿದ್ದ ಭೀಮಯಾತ್ರೆ ಅದ್ಧೂರಿಯಾಗಿ ಜರುಗಿತು. ಸಾವಿರಾರು ಯುವಕ, ಯುವತಿಯರು, ಅಂಬೇಡ್ಕರ್‌ ಅಭಿಮಾನಿಗಳು ಯಾತ್ರೆಯಲ್ಲಿ ಭಾಗವಹಿಸಿ ಭರ್ಜರಿ ಸ್ಟೆಪ್‌ ಹಾಕಿದರು. ಯಾತ್ರೆಯುದ್ದಕ್ಕೂ ನೀಲಿ ಭಾವುಟಗಳು ರಾರಾಜಿಸಿದವು. ಇಡೀ ರಸ್ತೆ ನೀಲಿಯ ಕಡಲಾಗಿತ್ತು.

Advertisement

ಡಾ| ಬಿ.ಆರ್. ಅಂಬೇಡ್ಕರ್‌ ಜನ್ಮ ದಿನಾಚರಣೆ ಸಮಿತಿಯಿಂದ ಇದೇ ಮೊದಲ ಬಾರಿ ಕೋಟೆನಾಡಿನಲ್ಲಿ ಈ ಭೀಮಯಾತ್ರೆ ಆಯೋಜಿಸಲಾಗಿತ್ತು. ಯಾತ್ರೆ ಅಂಗವಾಗಿ ಇಡೀ ನಗರವನ್ನು ನೀಲಿ ಬಣ್ಣದ ಬಟ್ಟೆಯಿಂದ ಸಿಂಗರಿಸಲಾಗಿತ್ತು. ನಗರದ ಗಾಂಧಿ ವೃತ್ತ, ಒನಕೆ ಓಬವ್ವ ವೃತ್ತ, ಅಂಬೇಡ್ಕರ್‌ ವೃತ್ತ ಸೇರಿದಂತೆ ನಗರದ ಪ್ರಮುಖ ವೃತ್ತಗಳನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು.

ಬೆಳಿಗ್ಗೆಯಿಂದಲೇ ನಗರದಲ್ಲಿ ಜಯಂತಿಯ ಸಂಭ್ರಮ ಕ್ಷಣದಿಂದ ಕ್ಷಣಕ್ಕೆ ಹೆಚ್ಚಾಗುತ್ತಿತ್ತು. ಜಿಲ್ಲಾಡಳಿತದಿಂದ ಅಂಬೇಡ್ಕರ್‌ ಭಾವಚಿತ್ರದ ಮೆರವಣಿಗೆ, ವೇದಿಕೆ ಕಾರ್ಯಕ್ರಮ ಮುಗಿದ ಬಳಿಕ ಮಧ್ಯಾಹ್ನ 3 ಗಂಟೆ ಸುಮಾರಿಗೆ ಕನಕ ವೃತ್ತದಲ್ಲಿ ಡಾ| ಅಂಬೇಡ್ಕರ್‌ ಭಾವಚಿತ್ರದ ಭೀಮಯಾತ್ರೆಗೆ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಮಾಜಿ ಶಾಸಕ ಎಸ್‌.ಕೆ. ಬಸವರಾಜನ್‌ ಚಾಲನೆ ನೀಡಿದರು. ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಜನರು ಜೈಭೀಮ ಎಂದು ಘೋಷಣೆ ಕೂಗುತ್ತಾ ಕುಣಿದು ಕುಪ್ಪಳಿಸಿದರು.

ಕನಕ ವೃತ್ತದಿಂದ ಆರಂಭವಾದ ಮಾರವಣಿಗೆ ಹೊಳಲ್ಕೆರೆ ರಸ್ತೆ ಮಾರ್ಗವಾಗಿ ಸಂಗೊಳ್ಳಿ ರಾಯಣ್ಣ ವೃತ್ತ, ಗಾಂಧಿ  ವೃತ್ತ, ಎಸ್‌ಬಿಐ ವೃತ್ತದಿಂದ ಪ್ರವಾಸಿಮಂದಿರದ ಮುಂಭಾಗದಲ್ಲಿ ಮೆರವಣಿಗೆ ಸಾಗಿ ಅಂಬೇಡ್ಕರ್‌ ವೃತ್ತದ ಸಮೀಪ ಅಂತ್ಯವಾಯಿತು.

ನಗರಸಭೆ ಮಾಜಿ ಅಧ್ಯಕ್ಷರಾದ ಕಾಂತ್‌ ರಾಜ್‌, ಎಚ್‌.ಸಿ. ನಿರಂಜನಮೂರ್ತಿ, ಮಾಜಿ ಸದಸ್ಯ ಕುಮಾರ್‌, ವಕೀಲರಾದ ನರಹರಿ, ರವೀಂದ್ರ, ಬ್ಯಾಲಹಾಳ್‌ ಗ್ರಾಪಂ ಮಾಜಿ ಅಧ್ಯಕ್ಷ ಬ್ಯಾಲಹಾಳ್‌ ಜಯಪ್ಪ, ಟಿಪ್ಪುಸುಲ್ತಾನ್‌ ಅಭಿಮಾನಿಗಳ ವೇದಿಕೆ ರಾಜ್ಯಾಧ್ಯಕ್ಷ ಟಿಪ್ಪು ಖಾಸಿಂ ಅಲಿ, ಡಾ| ಬಿ.ಆರ್‌. ಅಂಬೇಡ್ಕರ್‌ ಜನ್ಮದಿನಾಚರಣೆ ಸಮಿತಿ ಸಂಘಟಕ ಶರಣಪ್ಪ ಮತ್ತಿತರರು ಇದ್ದರು.

Advertisement

ನೀರು, ಮಜ್ಜಿಗೆ ವಿತರಣೆ

ಮಧ್ಯಾಹ್ನ ಬಿಸಿಲಿನಲ್ಲಿ ಪ್ರಾರಂಭವಾದ ಮೆರವಣಿಗೆಗೆ ಸಾವಿರಾರು ಜನರ ಭಾಗವಹಿಸಿದ್ದರಿಂದ ದಾರಿಯುದ್ದಕ್ಕೂ ಸಂಘ ಸಂಸ್ಥೆಗಳು ಮಜ್ಜಿಗೆ, ಕುಡಿಯುವ ನೀರಿನ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿದ್ದವು. ಚಿತ್ರದುರ್ಗ ಜಿಲ್ಲಾ ಮುಸ್ಲಿಂ ವಕೀಲರ ಕ್ಷೇಮಾಭಿವೃದ್ಧಿ ಟ್ರಸ್ಟ್‌ನಿಂದ ಮಜ್ಜಿಗೆ ವಿತರಿಸಲಾಯಿತು.

ಹಾಲಿ-ಮಾಜಿ ಶಾಸಕರ ಸಮಾಗಮ

ಭೀಮ ಯಾತ್ರೆಯಲ್ಲಿ ಚಿತ್ರದುರ್ಗದ ಹಾಲಿ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಹಾಗೂ ಮಾಜಿ ಶಾಸಕ ಎಸ್‌.ಕೆ. ಬಸವರಾಜನ್‌ ಸಮಾಗಮವಾಯಿತು. ಕನಕ ವೃತ್ತದಲ್ಲಿ ಇಬ್ಬರೂ ಜತೆಯಾಗಿ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ಭೀಮಯಾತ್ರೆಗೆ ಚಾಲನೆ ನೀಡಿದ ಬಳಿಕ ಎಸ್‌.ಕೆ. ಬಸವರಾಜನ್‌ ಕೂಡ ಸ್ಟೆಪ್‌ ಹಾಕಿದರು.

Advertisement

Udayavani is now on Telegram. Click here to join our channel and stay updated with the latest news.

Next