Advertisement
”ದೇವರು ನಮ್ಮ ಆರೋಗ್ಯವನ್ನೂ ಇವನಿಗೇ ಕೊಟ್ಟು ಬಿಡಲಿ. ಅದೊಂದನ್ನು ಬಿಟ್ಟು ಬೇರೆ ಏನನ್ನೂ ಕೇಳ್ಳೋದಿಲ್ಲ ನಾವು. ಜಗತ್ತಲ್ಲಿ ಏನೇನೋ ಪವಾಡುಗಳು ನಡೆಯುತ್ತವಂತೆ. ಅಂಥದ್ದೊಂದು ಪವಾಡ ಇವನ ಆರೋಗ್ಯದಲ್ಲಿ ಆಗಿಬಿಡಲಿ…’ ಎಂದರು ಚಂದ್ರರೇಖಾ. ಹಾಗೆ ಹೇಳುವಾಗ ನೋವಿನ ಎಳೆಯೊಂದು ಅವರ ಕಣ್ಣಲ್ಲಿತ್ತು. ಜೊತೆಗೇ ಮಗನ ಸಾಧನೆಯ ಬಗ್ಗೆ ಹೆಮ್ಮೆಯೂ.
Related Articles
Advertisement
3ನೇ ವಯಸ್ಸಿಗೆ ಲವನ್‌ನ ಟೆಕ್ವಾಂಡೊ ಕಲಿಕೆ ಶುರುವಾಯ್ತು, 6ಕ್ಕೆಲ್ಲ ಪದಕವನ್ನೂ ಗೆದ್ದ. ಏಳರ ವಯಸ್ಸಿಗೇ ಕಂಡು, ಕೇಳರಿಯದ ಕಾಯಿಲೆಯೂ ಬಂತು. ಅವನಿಗೆ ಏನಾಗಿದೆ ಅಂತ ಹೇಳುವುದಕ್ಕೇ ಬೆಂಗಳೂರಿನ ವೈದ್ಯರು ನಾಲ್ಕೈದು ತಿಂಗಳು ತೆಗೆದುಕೊಂಡರು. ಆ ಐದು ತಿಂಗಳು ನಾವು ಆಸ್ಪತ್ರೆಯಲ್ಲಿ ಅನುಭವಿಸಿದ ಯಾತನೆ ಅಷ್ಟಿಷ್ಟಲ್ಲ. ಅವನಿಗೆ ಏನಾಗ್ತಿದೆ, ಎಲ್ಲಿ ನೋವಾಗ್ತಿದೆ ಅಂತ ನಮಗೆ ಅರ್ಥ ಆಗ್ತಾ ಇರಲಿಲ್ಲ. ತಾಯಿಯಾಗಿಯೂ ಅವನ ನೋವನ್ನು ಹಂಚಿಕೊಳ್ಳಲಾಗದ ಅಸಹಾಯಕ ಸ್ಥಿತಿ ಅದು ಅಂತಾರೆ ಚಂದ್ರರೇಖಾ. ಖಾಸಗಿ ಆಸ್ಪತ್ರೆಯ ಡಾಕ್ಟರೊಬ್ಬರು, “ಈ ಪೋಷಕರಿಗೆ ಚಿಕಿತ್ಸೆಯ ಖರ್ಚನ್ನು ಭರಿಸಲು ಆಗುತ್ತಿಲ್ಲ’ ಎಂದು ಚೀಟಿ ಬರೆದು ಸರ್ಕಾರಿ ಆಸ್ಪತ್ರೆಗೆ ಕಳಿಸಿದರಂತೆ. “ಅಲ್ಲಂತೂ ಕೇಳುವವರೇ ಇರಲಿಲ್ಲ. ಒಂದು ಬೆಡ್‌ಶೀಟ್ ಕೊಟ್ಟು, ಅಲ್ಲೆಲ್ಲಾದರೂ ಖಾಲಿ ಬೆಡ್ ಇದ್ದರೆ ಮಲಗಿಸಿ ಅಂದುಬಿಟ್ಟರು. ಮುಟ್ಟಿಯೂ ನೋಡುವವರಿರಲಿಲ್ಲ. ಕೊನೆಗೆ ಚಿಕಿತ್ಸೆಗಾಗಿ ಹೈದರಾಬಾದ್‌ಗೆ ಕರೆದೊಯ್ಯಲಾಯಿತು. ಅಲ್ಲಿನ ತಜ್ಞ ವೈದ್ಯರು ಆತನ ಕಾಯಿಲೆಯನ್ನು ಸರಿಯಾಗಿ ಗುರುತಿಸಿ, ನಮಗೆ ಮಾಹಿತಿ ನೀಡಿ ಚಿಕಿತ್ಸೆ ಶುರುಮಾಡಿದ ಮೇಲೆ ತುಸು ಚೇತರಿಸಿಕೊಂಡಿದ್ದಾನೆ ಲವನ್. ನೋವಿನ ಮಧ್ಯೆಯೂ ಟೆಕ್ವಾಂಡೊ ಕಲಿಕೆ, ಪದಕ ಗಳಿಕೆ ನಿಂತಿಲ್ಲ… ಅನ್ನುತ್ತಾರೆ ಚಂದ್ರರೇಖಾ.
ಅವನೇ ನಮ್ಮ ಅಸ್ತಿತ್ವ“ನೀವು ಲವನ್‌ನ ಅಮ್ಮ ಅಲ್ವಾ?’ ಅಂತ ಜನ ನನ್ನನ್ನು ಗುರುತಿಸಿದಾಗೆಲ್ಲಾ ಮಗನ ಬಗ್ಗೆ ತುಂಬಾ ಹೆಮ್ಮೆ ಅನಿಸುತ್ತದೆ. ಕೆಲವು ಸಲ ಅವನು ನೋವು ತಡೆಯಲಾರದೆ ಅತ್ತು ಬಿಡುತ್ತಾನೆ. ಆಗ ಏನು ಮಾಡೋದು ಅಂತ ಗೊತ್ತಾಗದೇ ನಾನೂ ಕಣ್ಣೀರು ಹಾಕುತ್ತೇನೆ. ಕೊನೆಗೆ ಅವನೇ, “ನಂಗೇನೂ ಆಗಿಲ್ಲ ಅಮ್ಮಾ. ನಾನು ತುಂಬಾ ಸ್ಟ್ರಾಂಗ್ ಇದೀನಿ’ ಅಂತ ಸಮಾಧಾನ ಮಾಡುತ್ತಾನೆ. ಅಷ್ಟು ನೋವು ತಿಂದರೂ, ಟೆಕ್ವಾಂಡೊ ಬಗ್ಗೆ ಚೂರೂ ಆಸಕ್ತಿ ಕಳೆದುಕೊಂಡಿಲ್ಲ. ಆ ಸಮವಸ್ತ್ರ ಧರಿಸಿದ ಮೇಲೆ ಅವನು ನೋವಿರಲಿ, ತನ್ನನ್ನೇ ತಾನು ಮರೆತುಬಿಡುತ್ತಾನೆ. ಕಳೆದ ಏಪ್ರಿಲ್‌ನಲ್ಲಿ ಚೀನಾದಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಬೇಕಿತ್ತು. ಆಗ ಡಾಕ್ಟರ್ ಬೇಡವೇ ಬೇಡ ಅಂದರು. ಭಾಗವಹಿಸಿದ್ದರೆ ಅಲ್ಲಿಯೂ ಪದಕ ಗೆಲ್ಲುವ ವಿಶ್ವಾಸವಿತ್ತು ಅವನಿಗೆ. ನನ್ನ ಮಗ ಈಗ ನಾಲ್ಕನೇ ತರಗತಿ ಓದುತ್ತಿದ್ದಾನೆ. ಅವನಿಗೆ ಐಪಿಎಸ್ ಮಾಡುವ ಕನಸಿದೆ. ಖಂಡಿತಾ ಅದನ್ನು ಮಾಡುತ್ತಾನೆ. ಅಷ್ಟು ಸ್ಥೈರ್ಯ ಇದೆ ಅವನಲ್ಲಿ. ತನ್ನಿಂದ ಅಪ್ಪ-ಅಮ್ಮನಿಗೆ ಕಷ್ಟ ಆಗ್ತಾ ಇದೆ ಅಂತಾನೂ ಬೇಜಾರು ಮಾಡಿಕೋತಾನೆ. ಆದರೆ, ನಾನು ಅವನ ಅಮ್ಮ ಅನ್ನೋದಕ್ಕಿಂತ ಅವನೇ ನನಗೆ ಅಮ್ಮನಾಗಿ ಸಮಾಧಾನ ಮಾಡಿದ ದಿನಗಳೇ ಹೆಚ್ಚು ಅಂತಾರೆ ಚಂದ್ರರೇಖಾ. ಈ ದಂಪತಿಗೆ 6ನೇ ತರಗತಿಯಲ್ಲಿ ಓದುತ್ತಿರುವ ಮಾನ್ಯ ಎಂಬ ಮಗಳಿದ್ದು, ಆಕೆಯೂ ಟೆಕ್ವಾಂಡೊ ಕಲಿಯುತ್ತಿದ್ದಾಳೆ. – ಪ್ರಿಯಾಂಕಾ ಎನ್.