ಮೈಸೂರು: ಹೊಸ ವರ್ಷದ ಹಿನ್ನೆಲೆಯಲ್ಲಿ ನಂದಿನಿ ಉತ್ಪನ್ನಗಳ ಮಾರಾಟ ಹೆಚ್ಚಿಸುವ ಉದ್ದೇಶದಿಂದ ಕರ್ನಾಟಕ ಹಾಲು ಮಹಾಮಂಡಳಿ ರಾಜ್ಯಾದ್ಯಂತ ಹಮ್ಮಿಕೊಂಡಿರುವ ನಂದಿನಿ ಸಿಹಿ ಉತ್ಸವಕ್ಕೆ ಶುಕ್ರವಾರ ಚಾಲನೆ ದೊರೆಯಿತು.
ನಗರದ ಸಿದ್ದಾರ್ಥ ಬಡಾವಣೆಯಲ್ಲಿರುವ ಡೇರಿಯಲ್ಲಿ ಆಯೋಜಿಸಿರುವ ಸಿಹಿ ಉತ್ಸವಕ್ಕೆ ಮೈಸೂರು ಹಾಗೂ ಚಾಮರಾಜನಗರ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಕೆ.ಜಿ.ಮಹೇಶ ಉತ್ಸವಕ್ಕೆ ಚಾಲನೆ ನೀಡಿದರು. ಹೊಸ ವರ್ಷದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸುವ ಸಲುವಾಗಿ ಹಾಗೂ ನಂದಿನಿ ಉತ್ಪನ್ನಗಳ ಮಾರಾಟವನ್ನು ಹೆಚ್ಚಿಸುವುದು ನಂದಿನಿ ಉತ್ಸವದ ಉದ್ದೇಶವಾಗಿದೆ.
2019ರ ಜನವರಿ 9ರವರೆಗೆ ನಂದಿನಿ ಸಿಹಿ ಉತ್ಸವ ನಡೆಯಲಿದ್ದು, ಎಲ್ಲಾ ಬಗೆಯ ಸಿಹಿ ಉತ್ಪನ್ನಗಳಿಗೆ ಶೇ.10 ವಿಶೇಷ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತದೆ. ಕಳೆದ ಜೂನ್ ತಿಂಗಳಲ್ಲಿ ಮೊದಲ ಬಾರಿಗೆ ಆಯೋಜಿಸಿದ್ದ ನಂದಿನಿ ಉತ್ಸವಕ್ಕೆ ಉತ್ತಮ ಪ್ರತಿಕ್ರಿಯಿ ವ್ಯಕ್ತವಾದ ಹಿನ್ನೆಲೆಯಲ್ಲಿ ಎರಡನೇ ಬಾರಿಗೆ ಸಿಹಿ ಉತ್ಸವ ಹಮ್ಮಿಕೊಳ್ಳಲಾಗಿದೆ.
15 ಲಕ್ಷ ವಹಿವಾಟು: ಈ ಬಗ್ಗೆ ಮಾತನಾಡಿದ ಮಾರುಕಟ್ಟೆ ವ್ಯವಸ್ಥಾಪಕ (ಖರೀದಿ) ಡಾ.ಜಿ.ಎಸ್.ಪ್ರಕಾಶ್, 20 ದಿನಗಳ ಸಿಹಿ ಉತ್ಸವದಲ್ಲಿ ಮೈಸೂರು ಪಾಕ್, ಬದಮ್ ಬರ್ಫಿ, ಪೇಡ ಸೇರಿದಂತೆ 26 ವಿಧಧ ಸಿಹಿ ತಿನಿಸುಗಳನ್ನು ಶೇ.10 ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ನಾಲ್ಕು ತಿಂಗಳು ನಡೆಯುವ ವ್ಯಾಪಾರ ವಹಿವಾಟು ಕಳೆದ ಬಾರಿ ಆಯೋಜಿಸಿದ್ದ ಸಿಹಿ ಉತ್ಸವದದ 10 ದಿನಗಳಲ್ಲೇ ನಡೆದಿತ್ತು.
ಹೀಗಾಗಿ ಈ ಬಾರಿ 15 ಲಕ್ಷ ರೂ. ವ್ಯಾಪಾರ ವಹಿವಾಟು ನಡೆಯುವ ನಿರೀಕ್ಷೆ ಹೊಂದಲಾಗಿದೆ ಎಂದರು. ಈ ಸಂದರ್ಭದಲ್ಲಿ ಮಹಾಮಂಡಳಿ ನಿರ್ದೇಶಕ ಕೆ.ಸಿ.ಬಲರಾಂ, ವ್ಯವಸ್ಥಾಪಕ ನಿರ್ದೇಶಕ ಡಾ.ಎಂ.ಎಸ್. ವಿಜಯ ಕುಮಾರ್, ವ್ಯವಸ್ಥಾಪಕರುಗಳಾದ ಕೆ.ಎಸ್.ನರಸಿಂಹಮೂರ್ತಿ, ಟಿ.ಎಸ್.ರಘು ಹಾಜರಿದ್ದರು.