ಬೆಂಗಳೂರು: ಶಾಂತಿನಗರ ಶಾಸಕ ಎನ್.ಎ.ಹ್ಯಾರಿಸ್ ಅವರ ಪುತ್ರ ಮೊಹಮ್ಮದ್ ನಲಪಾಡ್, ಉದ್ಯಮಿ ಪುತ್ರ ವಿದ್ವತ್ ಮೇಲೆ ಹಲ್ಲೆ ನಡೆಸಿದ ಫರ್ಜಿ ಕೆಫೆ ಇರುವ ಯುಬಿ ಸಿಟಿ ಎದುರಿನಿಂದ ಬಿಜೆಪಿಯ “ಕಾಂಗ್ರೆಸ್‌ನಿಂದ ಬೆಂಗಳೂರು ರಕ್ಷಿಸಿ’ ಪಾದಯಾತ್ರೆಗೆ ಚಾಲನೆ ದೊರೆತದ್ದು ವಿಶೇಷವಾಗಿತ್ತು.
ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್, ಶಾಸಕ ಅರವಿಂದ ಲಿಂಬಾವಳಿ ನೇತೃತ್ವದಲ್ಲಿ ನಡೆದ ಪಾದಯಾತ್ರೆ ಎಂ.ಜಿ.ರಸ್ತೆ ಮೂಲಕ ತೆರಳಿ ಬ್ರಿಗೇಡ್ ರಸ್ತೆಯಲ್ಲಿ ಅಂತ್ಯಗೊಂಡಿತು. ಈ ಸಂದರ್ಭ ಸುತ್ತಮುತ್ತಲ ಪ್ರದೇಶದಲ್ಲಿ ಭಾರೀ ವಾಹನ ದಟ್ಟಣೆ ಉಂಟಾಗಿ ವಾಹನ ಸವಾರರು ಪರದಾಡಿದರು.
ಈ ವೇಳೆ ಮಾತನಾಡಿದ ಕೇಂದ್ರ ಸಚಿವ ಅನಂತಕುಮಾರ್, ಶಾಸಕ ಎನ್.ಎ.ಹ್ಯಾರಿಸ್ ಮತ್ತು ಪುತ್ರ ಮೊಹಮ್ಮದ್ ನಲಪಾಡ್ ಸೇರಿಕೊಂಡು ಶಾಂತಿನಗರವನ್ನು “ಅಶಾಂತಿನಗರ’ ಮಾಡಿದ್ದಾರೆ. ಮೊಹಮ್ಮದ್ ನಲಪಾಡ್ ಫರ್ಜಿ ಕೆಫೆಯಲ್ಲಿ ಗೂಂಡಾಗಿರಿ ಮಾಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರಿಗೆ ಕೆಟ್ಟ ಹೆಸರು ತಂದಿದ್ದಾರೆ. ಇದನ್ನು ತೊಡೆದು ಹಾಕಲು ಬಿಜೆಪಿ ಪಾದಯಾತ್ರೆ ನಡೆಸುತ್ತಿದೆ ಎಂದು ಹೇಳಿದರು.
ನಟ, ನಿರ್ದೇಶಕ: ಈ ಹಿಂದೆ ಸ್ಟೀಲ್ ಬ್ರಿಡ್ಜ್ ಪ್ರಕರಣಕ್ಕೆ ಸಚಿವ ಕೆ.ಜೆ.ಜಾರ್ಜ್ ನಿರ್ದೇಶಕರಾಗಿದ್ದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ಮಾಪಕರಾಗಿದ್ದರು. ಈಗ ಕಾಂಗ್ರೆಸ್‌ನ ಗೂಂಡಾಗಿರಿ ಪ್ರಕರಣಕ್ಕೆ ಶಾಸಕ ಹ್ಯಾರಿಸ್ ನಿರ್ದೇಶಕರಾದರೆ, ಮೊಹಮ್ಮದ್ ನಲಪಾಡ್ ನಟರಾಗಿದ್ದಾರೆ ಎಂದು ವ್ಯಂಗ್ಯವಾಡಿದರು.
ಗೃಹ ಸಚಿವರು ಉತ್ತರಿಸಿಲ್ಲ: ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಮಾತನಾಡಿ, “ಕಾಂಗ್ರೆಸ್ ಸರ್ಕಾರದ ಅವಧಿಗಿಂತ ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲೇ ಹೆಚ್ಚು ಅಪರಾಧ ಪ್ರಕರಣಗಳು ನಡೆದಿದ್ದವು ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳುತ್ತಾರೆ. ಆದರೆ, ನಾನು ಬಿಜೆಪಿ ಸರ್ಕಾರದಲ್ಲಿ ಗೃಹ ಸಚಿವನಾಗಿದ್ದಾಗ ಒಂದಾದರೂ ರಾಜಕೀಯ ಕೊಲೆ ನಡೆದಿದೆಯೇ ಎಂದು ಗೃಹ ಸಚಿವರಿಗೆ ಸವಾಲು ಹಾಕಿದ್ದೆ. ಅವರಿಂದ ಯಾವುದೇ ಉತ್ತರ ಬಂದಿಲ್ಲ. ಇದನ್ನು ಗಮನಿಸಿದಾಗ ಕಾಂಗ್ರೆಸ್ ಅವಧಿಯಲ್ಲಿ ಹೆಚ್ಚು ರಾಜಕೀಯ ಕೊಲೆ, ದೌರ್ಜನ್ಯ ನಡೆಯುತ್ತಿರುವುದು ಸ್ಪಷ್ಟ,’ ಎಂದು ಹೇಳಿದರು.
ಇಂದು ಕೆ.ಆರ್.ಪುರದಲ್ಲಿ ಪಾದಯಾತ್ರೆ: ಬಿಜೆಪಿ ಶುಕ್ರವಾರದಿಂದ ಆರಂಭವಾದ “ಕಾಂಗ್ರೆಸ್‌ನಿಂದ ಬೆಂಗಳೂರು ರಕ್ಷಿಸಿ’ ಪಾದಯಾತ್ರೆ ಶನಿವಾರ ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದಲ್ಲಿ ನಡೆಯಲಿದೆ. ರಾಮಮೂರ್ತಿ ನಗರದ ಹಳೇ ಪೊಲೀಸ್ ಠಾಣೆ ಮುಂಭಾಗದ ರಸ್ತೆಯಿಂದ ನಡೆಯಲಿರುವ ಪಾದಯಾತ್ರೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಅನಂತಕುಮಾರ್, ಆರ್.ಅಶೋಕ್, ಅರವಿಂದ ಲಿಂಬಾವಳಿ, ಪಿ.ಎನ್.ಸದಾಶಿವ, ಎಸ್.ಮುನಿರಾಜು ಮತ್ತಿತರರು ಪಾಲ್ಗೊಳ್ಳಲಿದ್ದಾರೆ.