ಬೆಂಗಳೂರು: ಆರೋಗ್ಯ ಇಲಾಖೆ ಯೋಜನೆಗಳ ಮಾಹಿತಿಗೆಂದು ನಿಯೋಜಿಸಿರುವ ಎಲ್.ಇ.ಡಿ ಪ್ರಚಾರ ಮೊಬೈಲ್ ವಾಹನಗಳಿಗಳಿಗೆ ನಗರದ ಚಿಕ್ಕಜಾಲ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ಬುಧವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಶ್ರೀರಾಮುಲು ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ರಾಜ್ಯದಲ್ಲಿ ಶೇ.60 ಬಡವರಿದ್ದು, ಅವರು ಚಿಕಿತ್ಸೆಗೆ ಸರ್ಕಾರಿ ಆಸ್ಪತ್ರೆಗಳ ಮೇಲೆ ಅವಲಂಬಿತರಾಗಿದ್ದಾರೆ. ಸರ್ಕಾರವು ಸಾರ್ವಜನಿಕರ ಆರೋಗ್ಯಕ್ಕೆ ಸಾಕಷ್ಟು ಹೊಸ ಯೋಜನೆ ತರುತಿದ್ದು ಮಾಹಿತಿ ತಿಳಿಸುವ ಅಗತ್ಯತೆ ಇದೆ. ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಈ ಮೊಬೈಲ್ ಎಲ್‌ಇಡಿ ವಾಹನ ಮೂಲಕ ಪ್ರಚಾರ ಆಂಧೋಲನ ಮಾಡಲಾಗುತ್ತಿದೆ ಎಂದು ಹೇಳಿದರು.
ಎರಡು ಜಿಲ್ಲೆಗಳಿಗೆ ಒಂದು ವಾಹನದಂತೆ ಒಟ್ಟು 15 ಪ್ರಚಾರ ವಾಹನ ನಿಯೋಜಿಸಲಾಗಿದೆ. ನಿತ್ಯ 4ಹಳ್ಳಿಗಳಿಗೆ ತೆರಳಿ ಆರೋಗ್ಯ ಇಲಾಖೆ ಕಾರ್ಯ ಕ್ರಮಗಳ ಅರಿವು ಮೂಡಿಸಲಿವೆ. ಮುಖ್ಯವಾಗಿ ಆರೋಗ್ಯ ಇಲಾಖೆಯಿಂದ ಸಾರ್ವಜನಿಕರಿಗೆ ಯಾವೆಲ್ಲಾ ಸರ್ಕಾರಿ ಯೋಜನೆಗಳಿವೆ,
ಉಚಿತ ಆರೋಗ್ಯ ಸೇವೆಗಳು , ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯ ಮಾಹಿತಿ ನೀಡಲಿದೆ. ಜತೆಗೆ ಸಾಂಕ್ರಾಮಿಕ ರೋಗಗಳು ಹೆಚ್ಚಾಗುತ್ತಿದ್ದು, ಆ ವೇಳೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮ ಕುರಿತು ಸಾರ್ವಜನಿಕರಿಗೆ ತಿಳಿಸಲಾಗು ತ್ತದೆ ಎಂದು ಸಚಿವರು ಹೇಳಿದರು.
ಭಿನ್ನಮತವಿಲ್ಲ: ಈ ವೇಳೆ ಸಚಿವ ಸಂಪುಟ ವಿಸ್ತರಣೆ ಕುರಿತು ಪ್ರತಿಕ್ರಿಯಿಸಿದ ಸಚಿವ ಶೀರಾಮುಲು, ಸಿಎಂ ಬಿಎಸ್‌ವೈ ಅವರ ನಿರ್ಧಾರಕ್ಕೆ ನಾವೆಲ್ಲ ಬದ್ಧರಾಗಿದ್ದೇವೆ. ಸಚಿವ ಸ್ಥಾನ ಯಾರಿಗೂ ಸಿಕ್ಕರು ಬೇಸರವಿಲ್ಲ. ನಮ್ಮಲ್ಲಿ ಮೂಲ ಬಿಜೆಪಿಗಳು ವಲಸಿಗರು ಎಂಬ ಭಿನ್ನವಿಲ್ಲ, ಬಿಜೆಪಿ ಎಂದ ಮೇಲೆ ಎಲ್ಲರೂ ಒಂದೇ ಎಂದು ಸ್ಪಷ್ಟಪಡಿಸಿದರು.